ನವ ದೆಹಲಿ (ಜೂನ್ 11); ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆ ಉಚ್ಚ್ರಾಯ ಸ್ಥಿತಿ ತಲುಪಿ ಇದೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯ ವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ನಿಟ್ಟುಸಿರು ಬಿಡುತ್ತಿದ್ದ ಜನಕ್ಕೆ ಬ್ಲಾಕ್ ಫಂಗಸ್ (Blck Fungus) ಭಾರೀ ಆತಂಕವನ್ನು ಸೃಷ್ಟಿ ಮಾಡುತ್ತಿದೆ. ಮ್ಯೂಕಾರ್ಮೈಕೋಸಿಸ್ ಎಂದು ಕರೆಯ ಲ್ಪಡುವ ಕಪ್ಪು ಶಿಲೀಂಧ್ರ ಸೋಂಕು ಬಾಧಿತರ ಸಾವಿನ ಸಂಖ್ಯೆ ಭಾರತದಲ್ಲಿ ಈವರೆಗೆ ಶೇ.50 ರಷ್ಟು ಏರಿಕೆ ಕಂಡಿದೆ. ಈ ಸೋಂಕಿಗೆ 2100 ಜನ ಈವರೆಗೆ ಮೃತಪಟ್ಟಿದ್ದು, 31,000 ಜನಕ್ಕೆ ಈ ಸೋಂಕು ಬಾಧಿಸಿದ್ದು, ಸೋಂಕಿನ ಏರಿಕೆ ಪ್ರಮಾಣವೂ ಶೇ.150ಕ್ಕಿಂತ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ದೇಶದ ವಿವಿಧ ಭಾಗಗಳಲ್ಲಿ ಈವರೆಗೆ 31,216 ಪ್ರಕರಣಗಳು ಮತ್ತು 2,109 ಸಾವುಗಳು ವರದಿಯಾ ಗಿವೆ. ಬ್ಲಾಕ್ ಫಂಗಸ್ ಸೋಂಕು ಪ್ರಕರಣ ಮತ್ತು ಸಾವಿನ ಏರಿಕೆಗೆ ಆಂಫೊಟೆರಿಸಿನ್-ಬಿ ಔಷಧದ ತೀವ್ರ ಕೊರತೆಯೇ ಕಾರಣ ಎಂದು ಎನ್ಡಿಟಿವಿ ಶುಕ್ರವಾರ ವರದಿ ಮಾಡಿದೆ.
ಬ್ಲಾಕ್ ಫಂಗಸ್ ಸೋಂಕಿನಿಂದಾಗಿ ಹೆಚ್ಚು ಹಾನಿಗೊಳಗಾದ ರಾಜ್ಯಗಳ ಪಟ್ಟಿಯಲ್ಲಿಯೂ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 7,057 ಪ್ರಕರಣಗಳು ದಾಖಲಾಗಿದ್ದು, 609 ಸಾವುಗಳು ಸಂಭವಿಸಿದೆ. ಗುಜರಾತ್ 5,418 ಪ್ರಕರಣಗಳು ಮತ್ತು 323 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2,976 ಪ್ರಕರಣಗಳೊಂದಿಗೆ ರಾಜಸ್ಥಾನ ಮೂರನೇ ಸ್ಥಾನದಲ್ಲಿದೆ. ಮೇ 25 ರಂದು ಮಹಾರಾಷ್ಟ್ರದಲ್ಲಿ ಕೇವಲ 2,770 ಕಪ್ಪು ಶಿಲೀಂಧ್ರ ಪ್ರಕರಣಗಳು ಮತ್ತು ಗುಜರಾತ್‌ನಲ್ಲಿ 2,859 ಪ್ರಕರಣಗಳು ವರದಿಯಾಗಿವೆ.
ಛತ್ತೀಸ್ಗಢದಲ್ಲಿ ಇದುವರೆಗೆ ಒಟ್ಟು 17 ರೋಗಿಗಳು ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರದಿಂದ ಸಾವನ್ನಪ್ಪಿದ್ದಾರೆ. ಆದರೆ, ಈ ಮಾರಕ ಸೋಂಕಿನಿಂದ ಬಳಲುತ್ತಿರುವ 11 ಮಂದಿ ವಿವಿಧ ಆರೋಗ್ಯ ಅಂಶಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರದವರೆಗೆ ರಾಜ್ಯದಲ್ಲಿ 276 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Prashant Kishore| ಮಹಾರಾಷ್ಟ್ರ ಮಿಷನ್ 2024; ಕುತೂಹಲ ಮೂಡಿಸಿದ ಶರದ್ ಪವಾರ್-ಪ್ರಶಾಂತ್ ಕಿಶೋರ್ ಸಭೆ
ಉತ್ತರ ಪ್ರದೇಶದಲ್ಲಿ 1,744 ಪ್ರಕರಣಗಳು ಮತ್ತು 142 ಸಾವುಗಳು ಸಂಭವಿಸಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,200 ಪ್ರಕರಣಗಳು ಮತ್ತು 125 ಸಾವುಗಳು ವರದಿಯಾಗಿವೆ. ಮೇ 25 ರಂದು ಉತ್ತರಪ್ರದೇಶದಲ್ಲಿ ಕೇವಲ 701 ಪ್ರಕರಣಗಳು ಮತ್ತು ನೆರೆಯ ದೆಹಲಿಯಲ್ಲಿ 119 ಪ್ರಕರಣಗಳು ದಾಖಲಾಗಿದ್ದವು. ಆದರೆ, ಇದೀಗ ಸೋಂಕು ಹರಡುವ ಪ್ರಮಾಣ ಮತ್ತು ತೀವ್ರತೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.
ಭಾರತದ ಮಟ್ಟಿಗೆ ಸಾಮಾನ್ಯವಾಗಿ ಈ ಬ್ಲಾಕ್ ಫಂಗಸ್ ಸೋಂಕು ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವವರಿಗೆ ಮತ್ತು ಕೊರೋನಾ ವೈರಸ್ ಎರಡನೇ ಅಲೆಯಿಂದ ಬಾಧಿತರಾದವರಲ್ಲಿ ಹಚ್ಚು ಕಂಡು ಬರುತ್ತಿರುವುದು ಉಲ್ಲೇಖಾರ್ಹ. ಕೊರೋನಾ ಸೋಂಕನ್ನು ಗೆದ್ದು ಹೊರಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಬ್ಲಾಕ್ ಫಂಗಸ್ ಖಾಯಿಲೆಗೆ ತುತ್ತಾಗಿರುವುದು ಅನೇಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ