Black Fungus: ಒಂದು ಕಡೆ ಫಂಗಸ್ ಆರ್ಭಟ, ಮತ್ತೊಂದೆಡೆ ಸಿಗದ ಔಷಧ; ರೋಗಿಗಳ ಗೋಳು ಕೇಳೋರ್ಯಾರು?

ಬ್ಲ್ಯಾಕ್​ ಫಂಗಸ್​​ಗೆ ಪರ್ಯಾಯ ಔಷಧಗಳು ಇವೆ. ಅವು ಇಸಾವುಕೋನಾಜೋಲ್ ಮತ್ತು ಪೋಸಾಕೋನಾಜೋಲ್ (ISAVUCONAZOLE & POSACONAZOLE). ಈ ಎರಡು ಔಷಧವನ್ನು ಪರ್ಯಾಯವಾಗಿ ವೈದ್ಯರು ನೀಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಮೇ 28):  ಕೊರೋನಾ ಜೊತೆಗೆ ಈಗ ಮತ್ತೊಂದು ಮಹಾಮಾರಿ ಸೇರಿಕೊಂಡಿದ್ದು, ಜನರ ಜೀವ ಹಿಂಡುತ್ತಿದೆ. ಅದೇ ಬ್ಲ್ಯಾಕ್​ ಫಂಗಸ್(Black Fungus). ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ಬ್ಲ್ಯಾಕ್​ ಫಂಗಸ್​ ಕಪಿಮುಷ್ಠಿಯಿಂದ ಬಚಾವಾದರಷ್ಟೆ ಗೆಲುವು. ಇಲ್ಲವಾದರೆ ಸಾವು ಕಟ್ಟಿಟ್ಟ ಬುತ್ತಿ ಎನ್ನುವುದಲ್ಲಿ ಅನುಮಾನವೇ ಇಲ್ಲ. ಈಗ ರಾಜ್ಯದಲ್ಲಿ ಬ್ಲ್ಯಾಕ್​ ಫಂಗಸ್​ ಆರ್ಭಟ ಹೆಚ್ಚಾಗುತ್ತಿದ್ದು, ರೋಗಿಗಳು ಪರದಾಟ ನಡೆಸುತ್ತಿದ್ದಾರೆ. ಬ್ಲ್ಯಾಕ್​ ಫಂಗಸ್ ಚಿಕಿತ್ಸೆಗೆ ಬಳಸುವ ಆ್ಯಂಪೋಟೇರಿಸಿನ್ ಬಿ(Amphotericin B) ಔಷಧಿಗೆ ಹಾಹಾಕಾರ ಶುರುವಾಗಿದೆ.

  ಹೌದು, ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಬಳಸಲಾಗುವ ಆ್ಯಂಪೋಟೇರಿಸಿನ್-ಬಿ ಮೆಡಿಸಿನ್ ಈಗ ಸಿಗುತ್ತಿಲ್ಲ. ಅದರ ಜೊತೆಗೆ ಈಗ ಪರ್ಯಾಯ ಔಷಧಿಗೂ ಹಾಹಾಕಾರ ಶುರುವಾಗಿದೆ. ಮೊದಲು ಲೈಪೋಸೋಮಲ್ ಆ್ಯಂಪೋಟೆರಿಸಿಮ್ ಬಿ ಇಂಜೆಕ್ಷನ್(Amphotericin B) ಗೆ ದೊಡ್ಡ ಮಟ್ಟದಲ್ಲಿ ಹಾಹಕಾರ ಶುರುವಾಗಿತ್ತು.  ಓಪನ್ ಮಾರ್ಕೆಟ್ ನಲ್ಲೂ ಲಭ್ಯತೆ ಇರಲಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಆ್ಯಂಪೋಟೇರಿಸಿನ್ -ಬಿ ಔಷಧಿಯನ್ನು ರಾಜ್ಯಗಳಿಗೆ ಅಗತ್ಯಕ್ಕನುಗುಣವಾಗಿ ಹಂಚಿಕೆ ಮಾಡುತ್ತಿದೆ.

  ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಬಳಿ 20 ಸಾವಿರ ವಯಲ್ಸ್​​​ಗಾಗಿ​  ಮನವಿ ಮಾಡಿಕೊಂಡಿತ್ತು. ಆದರೆ ಹಂತ ಹಂತವಾಗಿ ಬಿಡುಗಡೆ ಮಾಡಿ ಈಗ 10 ಸಾವಿರ ವಯಲ್ಸ್ ಕರ್ನಾಟಕಕ್ಕೆ ಸಿಕ್ಕಿದೆ. ಇನ್ನೂ ಹೆಚ್ಚುವರಿಯಾಗಿ 10 ಸಾವಿರ ವಯಲ್ಸ್ ಪೂರೈಕೆಯಾಗಬೇಕಿದೆ. ಬ್ಲಾಕ್ ಫಂಗಸ್ ಚಿಕಿತ್ಸೆಗೆ ಫಲಕಾರಿಯಾಗುವಂತಹ ಏಕೈಕ ಔಷಧ ಎಂದರೆ ಅದು ಆ್ಯಂಪೋಟೇರಿಸಿನ್ ಬಿ ಮಾತ್ರ. ಆದರೆ ಅದಕ್ಕೆ ಹಾಹಾಕಾರ ಜಾಸ್ತಿಯಾಗ್ತಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಕೊಡುತ್ತಿರುವ ವಯಲ್ಸ್ ಸಂಖ್ಯೆ ತೀರಾ ಕಡಿಮೆ ಇದೆ.  ಹಾಗಾಗಿ ಅದಕ್ಕೆ ಪರ್ಯಾಯ ಔಷಧ ಅಂತ ಇದ್ರೆ ಅದು ಇಸಾವುಕೋನಾಜೋಲ್ ಮತ್ತು ಪೋಸಾಕೋನಾಜೋಲ್ (ISAVUCONAZOLE &
  POSACONAZOLE). ಈ ಎರಡು ಔಷಧವನ್ನು ಪರ್ಯಾಯವಾಗಿ ವೈದ್ಯರು ನೀಡುತ್ತಿದ್ದರು.

  ಇದನ್ನೂ ಓದಿ:Black, White and Yellow Fungus: ಬ್ಲ್ಯಾಕ್​, ವೈಟ್​ ಮತ್ತು ಯಲ್ಲೋ ಫಂಗಸ್​​: ಇವುಗಳ ಲಕ್ಷಣ ಹಾಗೂ ತಡೆಗಟ್ಟುವ ಬಗ್ಗೆ ಇಲ್ಲಿದೆ ಮಾಹಿತಿ..!

  ಯಾವಾಗ ಆ್ಯಂಪೋಟೇರಿಸಿನ್ ಬಿ ಔಷಧಕ್ಕೆ ಪರ್ಯಾಯ ಔಷಧ ಇದೆ ಅಂತ ಗೊತ್ತಾಯ್ತೋ, ಈ ಎರಡು ಔಷಧಿಗಳು ಕೂಡ ಕರ್ನಾಟಕದಲ್ಲಿ ಸಿಗ್ತಿಲ್ಲ.  ಇತ್ತ ಓಪನ್ ಮಾರ್ಕೆಟ್​​ನಲ್ಲೂ ಸಿಗ್ತಿಲ್ಲ, ಡಿಸ್ಟಿಬ್ಯೂಟರ್​​ಗಳ ಮತ್ತು ಮೆಡಿಕಲ್ ಶಾಪ್​​ಗಳಲ್ಲೂ ಲಭ್ಯವಿಲ್ಲ. ಹಾಗಾಗಿ ಈಗ ಮತ್ತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆ ಮುಖ ಮಾಡುವಂತಾಗಿದೆ.

  ಕೆಪಿಎಂಎ ಪೋರ್ಟಲ್ ನಲ್ಲಿ ಹೇಗೆ ಆ್ಯಂಪೋಟೇರಿಸಿನ್ ಬಿ ಗಾಗಿ ಮನವಿ ಮಾಡುತ್ತೇವೋ, ಅದೇ ರೀತಿ ಈ ಎರಡು ಔಷಧಕ್ಕಾಗಿ ರೋಗಿಯ ಮಾಹಿತಿ ನೀಡಿ ಮನವಿ ಮಾಡಬೇಕಿದೆ.  ಆದರೆ ಈಗ ಇಸಾವುಕೋನಾಜೋಲ್ ಮತ್ತು ಪೋಸಾಕೋನಾಜೋಲ್​ಗೂ ಮನವಿ ಮಾಡಬೇಕಿದೆ. ಆದರೆ ರಾಜ್ಯದಲ್ಲಿ ಸಪ್ಲೈ ಮಾತ್ರ ಸರಿಯಾಗಿ ಆಗ್ತಿಲ್ಲ. ಇದರಿಂದ ಬ್ಲಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ.

  ಸಂಜೀವಿನಿ ರೀತಿಯಲ್ಲಿ ಕಾಣಿಸಿಕೊಂಡಿದ್ದ ಈ ಎರಡು ಪರ್ಯಾಯ ಔಷಧಗಳಿಗೂ. ಈಗ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಹಾಹಾಕಾರ ಶುರುವಾಗಿದೆ. ಈಗ ಮತ್ತೆ ರಾಜ್ಯ ಸರ್ಕಾರ ಈ ಎರಡು ಔಷಧಗಳಿಗಾಗಿ ಕೇಂದ್ರದ ಕಡೆ ಮುಖ ಮಾಡಬೇಕಿದೆ. ಇದರಿಂದ ಬ್ಲಾಕ್ ಫಂಗಸ್ ರೋಗಿಗಳು ಮತ್ತೆ ಪರದಾಡುವಂತಾಗಿದೆ.

  ಸದ್ಯದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಬ್ಲಾಕ್ ಫಂಗಸ್ ನಿಂದ 12 ಜನರು ಬಲಿಯಾಗಿದ್ದಾರೆ.  ರಾಜ್ಯದಲ್ಲಿ ಒಟ್ಟು 927 ರೋಗಿಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ.  897 ಬ್ಲಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ‌ನಡೆಯುತ್ತಿದೆ. 17 ಮಂದಿ ಗುಣಮುಖರಾಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 86 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, 8 ಜನರು ಸಾವನ್ನಪ್ಪಿದ್ದಾರೆ.

  ಕೋವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಾಗಿ ಸ್ಟಿರಾಯ್ಡ್​ ಇಂಜೆಕ್ಷನ್​ನ್ನು ಬಳಸಲಾಗುತ್ತದೆ. ಇದು ಉಸಿರಾಟದ ಪ್ರದೇಶಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದೇ ವೇಳೆ ಸೋಂಕಿನ ವಿರುದ್ಧ ಹೋರಾಡುವ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೂ ಸಹ ಪರಿಣಾಮ ಬೀರುತ್ತದೆ. ಅಂತಹ ವ್ಯಕ್ತಿಗಳಿಗೆ ಈ ಬ್ಲ್ಯಾಕ್​ ಫಂಗಸ್​ ವಕ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿಡ್ನಿಗಳ ಸಮಸ್ಯೆ, ಡಯಾಬಿಟಿಸ್​, ಕ್ಯಾನ್ಸರ್ ಇರುವ ಹಾಗೂ ಯಾರೂ ದೀರ್ಘಕಾಲ ಸ್ಟಿರಾಯ್ಡ್​ಗಳನ್ನು ಬಳಸುತ್ತಾರೋ ಅವರಿಗೆ ಬ್ಲ್ಯಾಕ್​ ಫಂಗಸ್​ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಅತಿಯಾದ ಸ್ಟಿರಾಯ್ಡ್​ ಬಳಕೆಯಿಂದಾಗಿ ಮಾನವನ ದೇಹದಲ್ಲಿನ ಬಿಳಿರಕ್ತಕಣಗಳು ಬಹುತೇಕ ನಶಿಸಿಹೋಗಿರುತ್ತವೆ.
  Published by:Latha CG
  First published: