ನವ ದೆಹಲಿ (ಜೂನ್ 09); ಕೊರೋನಾ ಬೆನ್ನಿಗೆ ದೇಶದಲ್ಲಿ ಕಾಣಿಸಿಕೊಂಡಿದ್ದ ಕಪ್ಪು ಶಿಲೀಂದ್ರ (Black Fungus) ಸೋಂಕು ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಭಾರೀ ಆತಂಕ ಮೂಡಿಸಿತ್ತು. ಈ ಸೋಂಕಿಗೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ಪರಿಣಾಮ ಎಲ್ಲಾ ರಾಜ್ಯ ಸರ್ಕಾರಗಳು ಈ ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಿಸಿದ್ದವು. ಅಲ್ಲದೆ, ಸೂಕ್ತ ಚಿಕಿತ್ಸೆ ಹಾಗೂ ಔಷಧಕ್ಕಾಗಿ ಕೇಂದ್ರ ಸರ್ಕಾರದ ಬಳಿ ಮೊರೆ ಇಡಲಾಗಿತ್ತು. ಕರ್ನಾಟಕ ಸರ್ಕಾರ ಔಷಧವನ್ನು ಕೇಳಿತ್ತು. ಪರಿಣಾಮ, ಕಪ್ಪು ಶಿಲೀಂದ್ರ ರೋಗದ ಚಿಕಿತ್ಸೆಗಾಗಿ ಎರಡು ದಿನಗಳ ಮುಂಚೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು 9,750 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಿತ್ತು. ಮಂಗಳವಾರ ಮತ್ತೆ 15,520 ವಯಲ್ಸ್ ಒದಗಿಸಿದೆ. ಇದರೊಂದಿಗೆ ರಾಜ್ಯಕ್ಕೆ ಇದುವರೆಗೆ 40,470 ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಡಿ.ವಿ. ಸದಾನಂದಗೌಡ ಅವರು ತಿಳಿಸಿದ್ದಾರೆ.
ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಗಳವಾರ ಹೊಸದಾಗಿ 1.7 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಲಾಗಿದೆ. ಜೂನ್ ತಿಂಗಳ ಆರಂಭದಿಂದ ಇಂದಿನವರೆಗೆ ಕೇಂದ್ರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 3.21 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಿದೆ.
ಎಂಫೊಟೆರಿಸಿನ್-ಬಿ ವಯಲ್ಸ್ ಗಳ ಆಮದು ಹೆಚ್ಚಿಸಲಾಗುತ್ತಿದೆ. ಸ್ವದೇಶಿಯವಾಗಿಯೂ ಈ ಔಷಧದ ಉತ್ಪಾದನೆ ಹೆಚ್ಚಾಗುತ್ತಿದೆ. ಇದರ ಲಭ್ಯತೆ ದೊರೆತಂತೆಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಇದರ ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಉಂಟಾಗುವ ಭರವಸೆ ಇದೆ ಎಂದು ಫಾರ್ಮಾ ಸಚಿವರೂ ಆಗಿರುವ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮಗುಂಡಂ ಯೂರಿಯಾ ಕಾರ್ಖಾನೆ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಸಗೊಬ್ಬರ ಉತ್ಪಾದನೆಗೆ ಸಂಬಂಧಿಸಿದ ಹೊಸ ಹೂಡಿಕೆ ನೀತಿಯ ಲಾಭವನ್ನು (ಸಹಾಯ ಧನ, ಪ್ರೊತ್ಸಾಹ ಧನ, ಸಬ್ಸಿಡಿ ಇತ್ಯಾದಿ) ರಾಮಗುಂಡಂ ರಸಗೊಬ್ಬರ ಮತ್ತು ರಾಸಾಯನಿಕ ಲಿಮಿಟೆಡ್ (RFCL) ಯೂರಿಯಾ ಕಾರ್ಖಾನೆಗೂ ವಿಸ್ತರಿಸಲು ಒಪ್ಪಿಗೆ ನೀಡಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.
ವಿವಿಧ ಕಾರಣಗಳಿಂದ ಮುಚ್ಚಿದ್ದ ಐದು ಯೂರಿಯಾ ಘಟಕಗಳನ್ನು ನಮ್ಮ ರಸಗೊಬ್ಬರ ಇಲಾಖೆಯು ಪುನಶ್ಚೇತನಗೊಳಿಸುತ್ತಿದೆ. ಈಗಾಗಲೇ ರಾಮಗುಂಡಂ ಸ್ಥಾವರ ಉತ್ಪಾದನೆ ಆರಂಭಿಸಿದೆ. ಗೋರಖ್ಪುರ ಸ್ಥಾವರ ಜುಲೈ ತಿಂಗಳಲ್ಲಿ ಉತ್ಪಾದನೆ ಆರಂಭಿಸಲಿದೆ. ಸಿಂಧ್ರಿ ಹಾಗೂ ಬರೌಣಿ ಘಟಕಗಳು ಈ ವರ್ಷದ ಡಿಸೆಂಬರ್’ನಲ್ಲಿ ಕಾರ್ಯಾರಂಭ ಮಾಡಲಿವೆ. ತಾಲ್ಚೆರ್ ಘಟಕ 2023ರ ಸೆಪ್ಟೆಂಬರ್’ನಲ್ಲಿ ಕಾರ್ಯಾರಂಭ ಮಾಡಲಿದೆ.
ಇದನ್ನೂ ಓದಿ: Narendra Modi: ಗಡ್ಡ ಬೋಳಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ 100ರೂ ಕಳಿಸಿದ ಚಹಾ ಮಾರಾಟಗಾರ!
ಇವೆಲ್ಲ ವಾರ್ಷಿಕವಾಗಿ ತಲಾ 12.7 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನಾ ಸಾಮರ್ಥ್ಯದ ಘಟಕಗಳಾಗಿವೆ (ಒಟ್ಟು ಉತ್ಪಾದನೆ 63.5 ಲಕ್ಷ ಟನ್). ಇಂಧನ ಕ್ಷಮತೆಯನ್ನು ಹೆಚ್ಚಿಸಲು ಅನಿಲ ಆಧಾರಿತ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಲಾಗಿದೆ. ಭಾರತ ದೇಶವು ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಗಳಿಸಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ.
ಇದನ್ನೂ ಓದಿ: Olympic: ಒಲಿಂಪಿಕ್ಸ್ ನಡೆಯಲಿರುವ ಜಪಾನ್ ಸೇರಿ ಡಜನ್‌ಗಟ್ಟಲೆ ದೇಶಗಳಿಗೆ ಪ್ರಯಾಣದ ಎಚ್ಚರಿಕೆ ಸಡಿಲಗೊಳಿಸಿದ ಅಮೆರಿಕ
ಪುನಶ್ಚೇತನಗೊಳ್ಳುತ್ತಿರುವ ಈ ಘಟಕಗಳು ದೇಶವು ಯೂರಿಯಾ ಸ್ವಾವಲಂಬನೆ ಗಳಿಸುವತ್ತ ಮಹತ್ವದ ಹೆಜ್ಜೆಗಳಾಗಿವೆ ಎಂದು ಕೇಂದ್ರ ರಾಸಾಯನಿಕ ಖಾತೆಯ ಸಚಿವರೂ ಆದ ಡಿ.ವಿ. ಸದಾನಂದಗೌಡ ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ