news18-kannada Updated:July 23, 2020, 2:55 PM IST
ಸಚಿವ ಬಿ. ಶ್ರೀರಾಮುಲು
ಬೆಂಗಳೂರು(ಜುಲೈ 23): ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಪತ್ರಿಕಾಗೋಷ್ಠಿ ಮುಗಿದ ಬಳಿಕ ಈ ಆರೋಪಗಳ ಬಗ್ಗೆ ಮೊದಲಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ತಮ್ಮ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಕೂಡ ಅವ್ಯಹಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಬಾರಿ ಅವರು ಆರೋಗ್ಯ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದರು. ಅದಕ್ಕೆ ನಾವು ಉತ್ತರ ಕೊಟ್ಟಿದ್ದೆ. ಆರೋಗ್ಯ ಇಲಾಖೆಯಿಂದ ಕೇವಲ 290 ಕೋಟಿ ರೂ ಮಾತ್ರ ಖರ್ಚು ಆಗಿದೆ ಎಂದು ಹೇಳಿದ್ದೆ. ಈಗ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆ 750 ಕೋಟಿ ಖರ್ಚು ಮಾಡಿದೆ ಎಂದು ಹೇಳುತ್ತಿದ್ದಾರೆ. ನಾನು ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಉಪಕರಣಗಳ ಡಿಮ್ಯಾಂಡ್ ಇದ್ದಂಥ ಸಂದರ್ಭದಲ್ಲಿ ಬೆಲೆ ಏರು ಪೇರು ಆರಿಬಹುದು ಅಷ್ಟೇ. ಆದರೆ, ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಅವ್ಯವಹಾರ ಆಗಿದ್ದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಬಿ. ಶ್ರೀರಾಮುಲು ಹೇಳಿದರು.
ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟಿನಲ್ಲಿ ಭ್ರಷ್ಟಾಚಾರ: ಸರ್ಕಾರದಿಂದ 2,000 ಕೋಟಿ ಅವ್ಯವಹಾರ: ಸಿದ್ದರಾಮಯ್ಯ ಆರೋಪ
ಇನ್ನೊಂದೆಡೆ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರೂ ಸಿದ್ದರಾಮಯ್ಯರ ಆರೋಪವನ್ನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸಕ್ಕೆ ಹೋಲಿಸಿದರು. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ, ಮುಖ್ಯಮಂತ್ರಿಯಾಗಿದ್ದವರು. ಯಾವುದೇ ದಾಖಲೆ ಇಲ್ಲದೇ ಮಾತನಾಡೋದು ಸರಿಯಲ್ಲ. 20 ಪತ್ರ ಬರೆದು ಮಾಹಿತಿ ಸಿಕ್ಕಿಲ್ಲ ಅಂತಾರೆ. ಹಾಗಾದರೆ ಮಾಹಿತಿ ಇಲ್ಲದೇ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರಾ? ಅವರು ಗಾಳಿಯಲ್ಲಿ ಗುದ್ದಾಡೋ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಜಗದೀಶ್ ಶೆಟ್ಟರ್ ಪ್ರತ್ಯಾರೋಪ ಮಾಡಿದರು.
ಇನ್ನು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಕೊರೋನಾ ಸಮಯದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ಧಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ ದಿಂಬಿನಲ್ಲಿ ಭ್ರಷ್ಟಾಚಾರ ಆಗಿತ್ತು. ಆರೋಗ್ಯ ಇಲಾಖೆಯಲ್ಲಿ 400-500 ಕೋಟಿ ರೂ ಅಕ್ರಮ ಆಗಿತ್ತು. ಈ ಬಗ್ಗೆ ದಾಖಲೆ ಕೂಡ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಅಬಕಾರಿ ಸಚಿವರೂ ಆದ ಅವರು ಹೇಳಿದರು.
ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಆರೋಪಗಳನ್ನ ತಳ್ಳಿಹಾಕಿದ ರೇಣುಕಾಚಾರ್ಯ, ಸರ್ಕಾರ ಎಲ್ಲಾ ದಾಖಲಾತಿ ಇಟ್ಟುಕೊಂಡಿದ್ದು, ಶೀಘ್ರದಲ್ಲೇ ಕೊಡುತ್ತೇವೆ. ಸರ್ಕಾರದ ವಿರುದ್ಧ ಮಾತನಾಡೋಕೆ ವಿಪಕ್ಷ ನಾಯಕರಿಗೆ ಯಾವುದೇ ವಿಷಯ ಇಲ್ಲ. ಹೀಗಾಗಿ ಇಂಥ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ 3 ವರ್ಷ ಸುಮ್ಮನೆ ಇರೋಕೆ ಆಗುತ್ತಿಲ್ಲ. ಹೀಗಾಗಿ ನಿತ್ಯ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಇದನ್ನೂ ಓದಿ: ಬೀದಿಲಿ ನಿಂತು ಲೆಕ್ಕ ಕೇಳುವುದಲ್ಲ, ಎಲ್ಲಿ ಕೇಳಬೇಕೋ ಅಲ್ಲಿ ಕೇಳಿ ; ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ತಿರುಗೇಟು
ಇದೇ ವೇಳೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಮಾಡಿರುವ ಪ್ರತಿಯೊಂದು ಆರೋಪಗಳಿಗೂ ಉತ್ತರ ನೀಡಲು ಸರ್ಕಾರದ ಸಚಿವರು ಇವತ್ತು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸುತ್ತಿದ್ಧಾರೆ. ಬಿ ಶ್ರೀರಾಮುಲು ಮೊದಲಾದವರು ಈ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಈ ಆರೋಪಗಳನ್ನ ಗಂಭೀರವಾಗಿ ಪರಿಗಣಿಸಿರುವುದು ತಿಳಿದುಬಂದಿದೆ. ಈ ಆರೋಪಗಳ ವಿಚಾರದಲ್ಲಿ ಆರೋಗ್ಯ ಸಚಿವ ಬಿ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ವಿರುದ್ಧವೂ ಸಿಎಂ ಕೆಂಡಾಮಂಡಲವಾಗಿದ್ದಾರೆನ್ನಲಾಗಿದೆ.
Published by:
Vijayasarthy SN
First published:
July 23, 2020, 2:32 PM IST