HOME » NEWS » Coronavirus-latest-news » BIOLOGICAL E OF INDIA WILL MANUFACTURE VACCINE OF JOHNSON AND JOHNSON SNVS

Biological E - ಮಹಿಳೆಯರ ಪಾರಮ್ಯದ ಭಾರತೀಯ ಕಂಪನಿಯಿಂದ ಲಸಿಕೆ ಉತ್ಪಾದನೆ; ಕ್ವಾಡ್ ದೇಶಗಳಿಂದ ಧನಸಹಾಯ

ನಿನ್ನೆ ವರ್ಚುವಲ್ ಆಗಿ ನಡೆದ ಕ್ವಾಡ್ ರಾಷ್ಟ್ರಗಳ ಸಭೆಯಲ್ಲಿ ಕೋವಿಡ್ ಲಸಿಕೆ ಉತ್ಪಾದನೆಯ ವಿಚಾರವನ್ನು ಗಹನವಾಗಿ ಚರ್ಚಿಸಲಾಗಿದೆ. ಕ್ವಾಡ್ ದೇಶಗಳ ಲಸಿಕೆಯನ್ನ ಭಾರತದಲ್ಲಿ ಉತ್ಪಾದಿಸಲು ನಿರ್ಧರಿಸಲಾಗಿದೆ. ಅದರಂತೆ ಅಮೆರಿಕದ ಒಂದು ಲಸಿಕೆಯನ್ನು ಹೈದರಾಬಾದ್​ನ ಬಯೋಲಾಜಿಕಲ್ ಇ ಸಂಸ್ಥೆ ತಯಾರಿಸಲಿದೆ.

Vijayasarthy SN | news18
Updated:March 13, 2021, 2:04 PM IST
Biological E - ಮಹಿಳೆಯರ ಪಾರಮ್ಯದ ಭಾರತೀಯ ಕಂಪನಿಯಿಂದ ಲಸಿಕೆ ಉತ್ಪಾದನೆ; ಕ್ವಾಡ್ ದೇಶಗಳಿಂದ ಧನಸಹಾಯ
ಸಾಂದರ್ಭಿಕ ಚಿತ್ರ
  • News18
  • Last Updated: March 13, 2021, 2:04 PM IST
  • Share this:
ನವದೆಹಲಿ(ಮಾ. 13): ಹೈದರಾಬಾದ್​ನ ಬಯೋಲಾಜಿಕಲ್ ಇ (Biological E) ಫಾರ್ಮಾಸ್ಯೂಟಿಕಲ್ ಸಂಸ್ಥೆ ಅಮೆರಿಕದ ಜಾನ್ಸನ್ ಅಂಡ್ ಜಾನ್ಸನ್ (Johnson and Johnson) ಕಂಪನಿಯ ಲಸಿಕೆಯನ್ನ ಉತ್ಪಾದನೆ ಮಾಡಲಿದೆ. ನಿನ್ನೆ ಶುಕ್ರವಾರ ನಡೆದ ಕ್ವಾಡ್ ರಾಷ್ಟ್ರಗಳ ಸಭೆಯಲ್ಲಿ (Quad Summit) ಇದರ ತೀರ್ಮಾನವಾಗಿದೆ. ಮುಂದಿನ ವರ್ಷಾಂತ್ಯದೊಳಗೆ ಅಂದರೆ 2022ರಷ್ಟರಲ್ಲಿ ನೂರು ಕೋಟಿ ಲಸಿಕೆ ಡೋಸ್​ಗಳನ್ನ ಪಡೆಯಬೇಕೆಂಬ ಅಮೆರಿಕದ ಗುರಿ ಈಡೇರಿಕೆಗೆ ಭಾರತವೂ ಸಹಾಯವಾಗಲಿದೆ. ಅಮೆರಿಕದಲ್ಲಿ ಅನೇಕ ವ್ಯಾಕ್ಸಿನ್​ಗಳು ಅಭಿವೃದ್ಧಿಯಾಗುತ್ತಿದ್ದು, ಅದರ ಪೈಕಿ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಅಮೆರಿಕದ ಹಣಕಾಸು ಸಂಸ್ಥೆ ಡಿಎಫ್​ಸಿ (Development Finance Corporation) ಆಯ್ಕೆಮಾಡಿಕೊಂಡಿದೆ.

ಕ್ವಾಡ್ ರಾಷ್ಟ್ರಗಳ ಗುಂಪಿನಲ್ಲಿ ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ ಇವೆ. ನಿನ್ನೆ ನಡೆದ ಸಭೆಯಲ್ಲಿ ನರೇಂದ್ರ ಮೋದಿ ಸೇರಿದಂತೆ ಈ ದೇಶಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಎಲ್ಲರೂ ಜಂಟಿಯಾಗಿ ಸೇರಿ ಲಸಿಕೆ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಬಗ್ಗೆ ಚರ್ಚೆಯಾಯಿತು. ಭಾರತವೇ ಲಸಿಕೆ ಉತ್ಪಾದನೆಗೆ ಆಯಕಟ್ಟಿನ ಜಾಗವಾಗಿದೆ. ಸದ್ಯಕ್ಕೆ ಅಮೆರಿಕದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತಯಾರಿಸಿರುವ ಲಸಿಕೆಯನ್ನ ಭಾರತದಲ್ಲಿ ಉತ್ಪಾದಿಸಲು ನಿರ್ಧರಿಸಲಾಗಿದೆ. ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಕಂಪನಿಯು ಈ ಲಸಿಕೆಯನ್ನ ತನ್ನ ಘಟಕದಲ್ಲಿ ಉತ್ಪಾದಿಸಲಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಇನ್ನಷ್ಟು ಲಸಿಕೆಗಳ ಉತ್ಪಾದನಾ ಕಾರ್ಯವನ್ನ ಭಾರತಕ್ಕೆ ವಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Quad Summit 2021: ವಸುದೈವ ಕುಟುಂಬಂ ಎಂಬ ತತ್ವದಂತೆ ನಾವು ಮತ್ತಷ್ಟು ಆಪ್ತವಾಗಿ ಕಾರ್ಯನಿರ್ವಹಿಸೋಣ: ಪ್ರಧಾನಿ ಮೋದಿ

ಭಾರತದಲ್ಲಿ ಈಗಾಗಲೇ ಸೀರಂ ಇನ್ಸ್​ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಲಸಿಕೆಗಳನ್ನ ಉತ್ಪಾದಿಸುತ್ತಿವೆ. ಸೀರಂ ಇನ್ಸ್​ಟಿಟ್ಯೂಟ್ ಸಂಸ್ಥೆ ಉತ್ಪಾದಿಸುತ್ತಿರುವ ಲಸಿಕೆಯನ್ನ ಆಸ್ಟ್ರಾ ಜೆನೆಕಾ ಎಂಬ ಬ್ರಿಟನ್ ಕಂಪನಿ ಅಭಿವೃದ್ಧಿಪಡಿಸಿದರೆ, ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆ ದೇಶೀಯವಾಗಿಯೇ ಅಭಿವೃದ್ಧಿಗೊಂಡಿದೆ. ಭಾರತದಲ್ಲಿ ಇನ್ನೂ ನಾಲ್ಕೈದು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ.

ಇನ್ನು, ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಲಸಿಕೆಯನ್ನ ಉತ್ಪಾದಿಸುವ ಅವಕಾಶ ಪಡೆದಿರುವ ಬಯೋಲಾಜಿಕಲ್ ಇ ಸಂಸ್ಥೆ ಕೆಲವೊಂದು ವಿಚಾರದಲ್ಲಿ ವಿಶೇಷತೆ ಹೊಂದಿದೆ. ಇದು ಮಹಿಳೆಯರೇ ಮುನ್ನಡೆಸುವ ಸಂಸ್ಥೆಯಾಗಿದೆ. 1953ರಲ್ಲಿ ಪ್ರಾರಂಭವಾಗಿರುವ ಈ ಕಂಪನಿಯ ನಿರ್ವಾಹಕ ನಿರ್ದೇಶಕಿ ಮತ್ತು ಸಿಇಒ ಮಹಿಮಾ ದಾತ್ಲಾ ಅವರು. ಜಾಗತಿಕ ಲಿಂಗ ಸಮಾನತೆಯ ಆಶಯ ಈಡೇರಿಸುವ ಉದ್ದೇಶದಿಂದಲೂ ಅಮೆರಿಕದ ಡಿಎಫ್​ಸಿ ಸಂಸ್ಥೆಯು ಜಾನ್ಸನ್ ಅಂಡ್ ಜಾನ್ಸನ್​ನ ಲಸಿಕೆಯನ್ನ ನಾರಿಚಾಲಿತ ಬಯೋಲಾಜಿಕಲ್ ಇ ಗೆ ವಹಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತದ ಲಸಿಕೆ ಸಾಮರ್ಥ್ಯವನ್ನು ಐತಿಹಾಸಿಕ ಉಪ್ಪಿನ ಚಳವಳಿಗೆ ಹೋಲಿಸಿದ ಪ್ರಧಾನಿ ಮೋದಿ

ಇನ್ನು, ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಕ್ವಾಡ್ ಗುಂಪಿನ ಇತರ ರಾಷ್ಟ್ರಗಳು ಧನಸಹಾಯ ನೀಡುತ್ತಿವೆ. ಅಮೆರಿಕದ ಡಿಎಫ್​ಸಿ ಸಂಸ್ಥೆ ಒಂದು ಲಸಿಕೆ ಯೋಜನೆಗೆ 5 ಮಿಲಿಯನ್ ನಿಂದ 500 ಮಿಲಿಯನ್ ಡಾಲರ್ (36 ಕೋಟಿ ರೂನಿಂದ 3500 ಕೋಟಿ ರೂ) ವರೆಗೂ ಧನ ಸಹಾಯ ಒದಗಿಸಲಿದೆ. ಜಪಾನ್​ನ ವಿವಿಧ ಸಂಸ್ಥೆಗಳಿಂದಲೂ ಹಣದ ನೆರವು ಹರಿದುಬಲಿದೆ. ಆಸ್ಟ್ರೇಲಿಯಾ ಕೂಡ ನೂರಾರು ಕೋಟಿ ಮೊತ್ತದಷ್ಟು ಹಣವನ್ನು ಸಹಾಯವಾಗಿ ಕೊಡಲಿದೆ.ಈ ಹಣಕಾಸು ನೆರವಿನಿಂದ ಭಾರತದಲ್ಲಿ ತಯಾರಾಗುವ ಲಸಿಕೆಗಳನ್ನ ಕೇವಲ ಕ್ವಾಡ್ ರಾಷ್ಟ್ರಗಳಿಗಷ್ಟೇ ಅಲ್ಲ ಲಸಿಕೆ ಅತ್ಯಗತ್ಯತೆ ಇರುವ ಇತರ ಬಡ ರಾಷ್ಟ್ರಗಳಿಗೆ ಪೂರೈಸುವ ಉದ್ದೇಶ ಇದೆ. ಲಸಿಕೆ ವಿಚಾರದಲ್ಲಿ ಚೀನಾದ ರಾಜಕಾರಣವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕ್ವಾಡ್ ಗುಂಪು ಈ ಅಸ್ತ್ರ ಪ್ರಯೋಗಿಸುತ್ತಿರುವಂತಿದೆ.
Published by: Vijayasarthy SN
First published: March 13, 2021, 2:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories