ಬೆಂಗಳೂರು(ಜುಲೈ.20): ಇಂದು ಭೀಮನ ಅಮಾವಾಸ್ಯೆ. ನಾಳೆಯಿಂದ ಶ್ರಾವಣ ಮಾಸ ಆರಂಭ. ಹೀಗಾಗಿ ವಿಶೇಷವಾಗಿ ಹಿಂದೂ ಮಹಿಳೆಯರ ಪಾಲಿಗೆ ಪವಿತ್ರ ಹಬ್ಬ. ಆಷಾಢ ಮಾಸದ ಕೊನೆಯ ದಿನವಾದ ಇಂದು ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಆಚರಿಸುವ ಈ ಹಬ್ಬಕ್ಕೆ ಜ್ಯೋತಿ ಭೀಮೇಶ್ವರ ವ್ರತ ಎಂದು ಸಹ ಹೆಸರಿದೆ. ಇನ್ನೇನು ವಾರದ ಲಾಕ್ಡೌನ್ ಮುಗಿಯಲು ಒಂದು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಇಂದು ಭೀಮನ ಅಮಾವಾಸ್ಯೆ ಪ್ರಯುಕ್ತ ಹಲವು ದೇವಸ್ಥಾನಗಳಲ್ಲಿ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದಾರೆ.
ಬುಧವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರು ಲಾಕ್ಡೌನ್ ಮುಗಿಯಲಿದೆ. ಇಂದು ವಿಶೇಷವಾಗಿ ಮಹಿಳೆಯರಿಗೆ ಭೀಮನ ಅಮಾವಾಸ್ಯೆ ಹಬ್ಬ. ಹೀಗಾಗಿ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದ ಮುಂದೆ ಭಕ್ತಾದಿಗಳು ಸಾಲು ಸಾಲು ಆಗಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಇತ್ತ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡಿ ಮಹಾಕಾಳಿ ದೇವಾಲದಲ್ಲಿ ಸಹ ಸಾಕಷ್ಟು ಭಕ್ತಾದಿಗಳನ್ನು ಕಾಣಬಹುದು. ಸದ್ಯ ಲಾಕ್ ಡೌನ್ ಇದ್ದರೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವರ ದರ್ಶನ ಪಡೆಯಲು ನೂರಾರು ಜನರು ಆಗಮಿಸಿದ್ದಾರೆ.
ಇಂದು ಭೀಮನ ಅಮಾವಾಸ್ಯೆ ಪ್ರಯುಕ್ತ ಬೆಂಗಳೂರಿನ ಮಾರುಕಟ್ಟೆಯಲ್ಲಿ ಜನರು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದು, ಕೊರೋನಾ ಇದ್ದರೂ ಜನರು ಮಾಸ್ಕ್ ಧರಿಸುವುದನ್ನು ಮರೆತು ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.
ಮೈಸೂರು ರಸ್ತೆಯ ಫ್ಲೈ ಓವರ್ ಕೆಳಭಾಗದಲ್ಲಿ ತರಕಾರಿ, ಹಣ್ಣು, ಸೊಪ್ಪು ಮತ್ತು ಇತರೆ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಯದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಇದನ್ನೂ ಓದಿ : ಎಸ್ಎಸ್ಎಲ್ಸಿ ಆಯ್ತು ಇದೀಗ ಸಿಇಟಿ ಪರೀಕ್ಷೆ ಸರದಿ; ಕೋವಿಡ್ ಹೆಚ್ಚಳ ಹಿನ್ನೆಲೆ ಪರೀಕ್ಷೆ ಮುಂದೂಡಲು ಹೆಚ್ಚಿದ ಒತ್ತಾಯ
ಇನ್ನು ಶ್ರೀರಾಮಪುರದಲ್ಲಿ ಜನರ ಓಡಾಟ ಹಾಗೂ ವಾಹನಗಳ ಸಂಚಾರವಿದೆ. ದೇವಸ್ಥಾನ ಕೂಡ ತೆರೆದಿದೆ. ಯಾವುದೇ ರೀತಿಯ ಸಾಮಾಜಿಕ ಅಂತರ ಕೂಡ ಇಲ್ಲದೆ ಜನರು ಗುಂಪು ಗುಂಪಾಗಿ ನೆರೆದಿದ್ದಾರೆ. ಸದ್ಯ ಟೌನ್ ಹಾಲ್ ಮುಂದೆ ವಾಹನಗಳ ಓಡಾಟ ಜೋರಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ