Bharat Biotech – ವ್ಯಾಕ್ಸಿನ್ ಅಡ್ಡಪರಿಣಾಮ; ಯಾರಿಗೆ ಬೇಡ ಲಸಿಕೆ? - ಭಾರತ್ ಬಯೋಟೆಕ್​ನಿಂದ ಪಟ್ಟಿ

ಗರ್ಭಿಣಿಯರು, ಬ್ಲಡ್ ಥಿನಿಂಗ್ ಮೆಡಿಕೇಶನ್​ನಲ್ಲಿರುವವರು ಮೊದಲಾದವರು ತಮ್ಮ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಬಾರದು ಎಂದು ಭಾರತ್ ಬಯೋಟೆಕ್ ತನ್ನ ವೆಬ್​ಸೈಟ್​ನಲ್ಲಿ ಫ್ಯಾಕ್ಟ್ ಶೀಟ್ ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ನವದೆಹಲಿ(ಜ. 19): ಮೊನ್ನೆಮೊನ್ನೆ ಶುರುವಾದ ಲಸಿಕೆ ಅಭಿಯಾನದಲ್ಲಿ 3 ಲಕ್ಷದಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ. ನೂರಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಅಡ್ಡಪರಿಣಾಮಗಳಾಗಿರುವುದು ಕಂಡುಬಂದಿದೆ. ಕರ್ನಾಟಕದಲ್ಲಿ ಲಸಿಕೆ ತೆಗೆದುಕೊಂಡವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆದರೆ, ಅವರ ಸಾವಿಗೆ ಲಸಿಕೆ ಕಾರಣವಲ್ಲ ಎಂದು ತಜ್ಞರು ಖಚಿತಪಡಿಸಿದ್ದಾರೆ. ಆದರೆ, ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ತಯಾರಿಸಿರುವ ಭಾರತ್ ಬಯೋಟೆಕ್ ತನ್ನ ವೆಬ್ ಸೈಟ್​ನಲ್ಲಿ ಫ್ಯಾಕ್ಟ್ ಶೀಟ್ ಪ್ರಕಟಿಸಿದೆ. ಇದರಲ್ಲಿ ಯಾರಾರು ಲಸಿಕೆ ಪಡೆಯಬಾರದು ಎಂದು ನಿರ್ದಿಷ್ಟಪಡಿಸಿ ಮಾಹಿತಿ ಹಾಕಿದೆ.

    ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಯನ್ನ ತೆಗೆದುಕೊಳ್ಳಬಾರದವರ ಪಟ್ಟಿ:
    * ಅಲರ್ಜಿ ಸಮಸ್ಯೆ ಇರುವವರು
    * ಜ್ವರದಿಂದ ಬಳಲುತ್ತಿರುವವರು
    * ಬ್ಲೀಡಿಂಗ್ ಸಮಸ್ಯೆ ಇರುವವರು
    * ರಕ್ತ ತೆಳುವಾಗಲು ಔಷಧ ಪಡೆಯುತ್ತಿರುವವರು
    * ಗರ್ಭಿಣಿಯರು
    * ಹಾಲುಣಿಸುವ ತಾಯಂದಿರು
    * ರೋಗನಿರೋಧಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಹ ಔಷಧ ತೆಗೆದುಕೊಳ್ಳುತ್ತಿರುವವರು
    * ದೇಹದಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು

    ಇದನ್ನೂ ಓದಿ: Vaccine Drive - ಸೆರಮ್ ಇನ್ಸ್​ಟಿಟ್ಯೂಟ್​ನಿಂದ ಭಾರತಕ್ಕೆ 1 ಕೋಟಿ ಉಚಿತ ವ್ಯಾಕ್ಸಿನ್

    ಮೇಲೆ ಹೇಳಿದ ಅವಸ್ಥೆಯಲ್ಲಿರುವವರು ಅಥವಾ ಸಮಸ್ಯೆಯಲ್ಲಿರುವವರು ಕೋವ್ಯಾಕ್ಸಿನ್ ಲಸಿಕೆ ಪಡೆಯಬಾರದು. ಹಾಗೆಯೇ ಬೇರೆ ಸಂಸ್ಥೆಯ ಲಸಿಕೆಯ ಡೋಸ್ ಪಡೆದವರೂ ಕೂಡ ಈ ವ್ಯಾಕ್ಸಿನ್ ತೆಗೆದುಕೊಳ್ಳುವಂತಿಲ್ಲ ಎಂದು ಭಾರತ್ ಬಯೋಟೆಕ್ ಸಂಸ್ಥೆ ತನ್ನ ಫ್ಯಾಕ್ಟ್ ಶೀಟ್​ನಲ್ಲ ತಿಳಿಸಿದೆ.

    ಕ್ಲಿನಿಕಲ್ ಟ್ರಯಲ್ ಮೋಡ್​ನಲ್ಲಿ ಸೀಮಿತ ರೀತಿಯಲ್ಲಿ ಲಸಿಕೆ ಬಳಸಲು ಸಿಡಿಎಸ್​ಸಿಒ ಅನುಮತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆಯ ಸಾರ್ವಜನಿಕ ಆರೋಗ್ಯ ಯೋಜನೆಯ ಅಡಿಯಲ್ಲಿ ಗುರುತಿಸಲಾದ ವ್ಯಕ್ತಿಗಳಿಗೆ ಈ ಲಸಿಕೆ ನೀಡಲಾಗುತ್ತದೆ. ಕೋವ್ಯಾಕ್ಸಿನ್ ಲಸಿಕೆ ನೀಡುವ ನಿರ್ಧಾರ ಸರ್ಕಾರಿ ಸಿಬ್ಬಂದಿಗೆ ಬಿಟ್ಟಿದ್ದು. ಜನರು ಇಚ್ಛರಿಸಿದರೆ ಕೋವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಲಡ್ಡಿಯಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.

    ಭಾರತದಲ್ಲಿ ಸೆರಮ್ ಇನ್ಸ್​ಟಿಟ್ಯೂಟ್​ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಗೆ ಕೇಂದ್ರ ಸರ್ಕಾರ ತುರ್ತು ಬಳಕೆಯ ಅನುಮೋದನೆ ನೀಡಿದೆ. ಕೋವಿಶೀಲ್ಡ್​ನ ವ್ಯಾಪಕ ಬಳಕೆಗೆ ನಿರ್ಧರಿಸಲಾಗಿದೆ. ಭಾರತ್ ಬಯೋಟೆಕ್​ನ ವ್ಯಾಕ್ಸಿನ್ ಅನ್ನು ಬಹಳ ಸೀಮಿತವಾಗಿ ಬಳಕೆ ಮಾಡಲು ನಿಶ್ಚಯಿಸಲಾಗಿದೆ.

    ಇದನ್ನೂ ಓದಿ: Indo-China Conflict: ಅರುಣಾಚಲ ಪ್ರದೇಶದ ಗಡಿಯಲ್ಲಿ ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!

    ದೇಶದಲ್ಲಿ ಈವರೆಗೆ ದಾಖಲಾಗಿರುವ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 1 ಕೋಟಿ 5 ಲಕ್ಷ ದಾಟಿದೆ. ಇವುಗಳಲ್ಲಿ ಬಹುತೇಕರು ಗುಣಮುಖರಾಗಿದ್ದು, ಸದ್ಯ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ಇದೆ. ಈವರೆಗೆ 1.52 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಆದರೆ, ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದು ಸಮಾಧಾನದ ವಿಷಯ. ಒಟ್ಟು ಪ್ರಕರಣಗಳಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಸಕ್ರಿಯ ಪ್ರಕರಣಗಳಲ್ಲಿ 13 ಸ್ಥಾನದಲ್ಲಿದೆ. ನಿನ್ನೆ ಒಂದು ದಿನದಲ್ಲಿ ದಾಖಲಾದ ಪ್ರಕರಣಗಳು ಕೇವಲ 10,064 ಮಾತ್ರ. ಇದು ಕಳೆದ 8 ತಿಂಗಳಲ್ಲಿ ದಾಖಲಾಗಿರುವ ಅತಿ ಕಡಿಮೆ ಪ್ರಕರಣ.
    Published by:Vijayasarthy SN
    First published: