ಬೆಂಗಳೂರು (ಜೂನ್ 21): ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ಇಂದಿನಿಂದ 2ನೇ ಹಂತದ ಅನ್ಲಾಕ್ ಜಾರಿಯಾಗಲಿದ್ದು, ಲಾಕ್ಡೌನ್ ತೆರವಾದ ಹಿನ್ನೆಲೆ ಜನರಿಗೆ ಮತ್ತಷ್ಟು ರಿಲೀಫ್ ಸಿಕ್ಕಂತಾಗಿದೆ. ಇಂದು ಬೆಳಗ್ಗೆ 5 ಗಂಟೆಯಿಂದ ವೀಕ್ ಎಂಡ್ ಲಾಕ್ ಡೌನ್ ತೆರವಾಗಿದ್ದು, ಬೆಂಗಳೂರಿನಲ್ಲಿ ಜಾರಿಯಲ್ಲಿದ್ದ 144 ಸೆಕ್ಷನ್ ಸಹ ತೆರವಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಹೋಟೆಲ್, ರೆಸ್ಟೋರೆಂಟ್, ಜಿಮ್ ಸೇರಿ ಹಲವು ಉದ್ಯಮಗಳು ಓಪನ್ ಆಗಲಿವೆ. ಹಾಗಿದ್ದರೆ ಇಂದಿನಿಂದ ಮತ್ತೆ ಯಾವುದಕ್ಕೆ ಅನುಮತಿ ನೀಡಲಾಗಿದೆ? ಯಾವುದಕ್ಕೆ ನಿಷೇಧ ಹೇರಲಾಗಿದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರಿನಲ್ಲಿ ಮೂರು ತಿಂಗಳಿಂದ ನಿಂತಿದ್ದ ಬಸ್ ಗಳ ಸಂಚಾರ ಇಂದಿನಿಂದ ಆರಂಭವಾಗಲಿದೆ. ಶೇ. 50ರಷ್ಟು ಪ್ರಯಾಣಿಕರೊಂದಿಗೆ ಬಸ್ ಗಳ ಸಂಚಾರ ಶುರುವಾಗಲಿದೆ. ಹೋಟೆಲ್ , ರೆಸ್ಟೋರೆಂಟ್ ನಲ್ಲಿ ಶೇ. 50ರಷ್ಟು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆ 6 ಗಂಟೆಯಿಂದ ಸಂಜೆ 6 ರ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಇಂದಿನಿಂದ ಬೆಂಗಳೂರು ಸಿಟಿ ಫುಲ್ ಅನ್ ಲಾಕ್ ಆಗಲಿದೆ.
ನಿನ್ನೆ ರಾತ್ರಿಯೇ ಎಲ್ಲಾ ಕಡೆ ಬ್ಯಾರಿಗೇಟ್ ತೆರವು ಮಾಡಿರೋ ಪೊಲೀಸರು ಎಲ್ಲಾ ಫ್ಲೈಓವರ್ ಗಳ ಬಳಿ ಅಳವಡಿಸಿದ್ದ ಬ್ಯಾರಿಗೇಟ್ ತೆರವುಗೊಳಿಸಿದ್ದಾರೆ. ಕ್ಲೋಸ್ ಮಾಡಿದ್ದ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಬೆಂಗಳೂರಿನಲ್ಲಿ ಇಂದಿನಿಂದ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ. ಆದರೂ ಕೊರೋನಾ ಸೋಂಕು ಹೆಚ್ಚಾಗಬಾರದು ಎಂಬ ಕಾರಣಕ್ಕೆ ಕೆಲವು ನಿರ್ಬಂಧಗಳನ್ನು ಕೂಡ ಹೇರಲಾಗಿದೆ.
ಇದನ್ನೂ ಓದಿ: Crime News| ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಗೆ ವಾಮಾಚಾರ ಮಾಡಿ ನರಬಲಿಗೆ ಯತ್ನ; ಅದೃಷ್ಟವಶಾತ್ ತಪ್ಪಿದ ಅನಾಹುತ
ಬೆಂಗಳೂರು ಮಾತ್ರವಲ್ಲದೆ, ಕೊರೋನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಿರುವ 16 ಜಿಲ್ಲೆಗಳಲ್ಲಿ ಇಂದಿನಿಂದ 2ನೇ ಹಂತದ ಅನ್ಲಾಕ್ ಘೋಷಣೆ ಮಾಡಲಾಗಿದೆ. ಬೆಂಗಳೂರು, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಾತ್ರ ಇಂದಿನಿಂದ ಲಾಕ್ಡೌನ್ ನಿಯಮ ಸಡಿಲಿಕೆಯಾಗಲಿದೆ.
ಬೆಂಗಳೂರಿನಲ್ಲಿ ಇಂದಿನಿಂದ ಯಾವುದಕ್ಕೆ ಅನುಮತಿ?:
* ಹೋಟೆಲ್ ಆರಂಭಿಸಲು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸಂಜೆ 5 ಗಂಟೆಯವರೆಗೂ ಅವಕಾಶ.
* ಹೋಟೆಲ್ಗಳಲ್ಲಿ ಕುಳಿತು ತಿನ್ನಲು ಅವಕಾಶ. ಆದರೆ, ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅನುಮತಿ.
* ಬಾರ್ನಲ್ಲಿ ಕುಳಿತು ಊಟ ಮಾಡಲು ಅವಕಾಶ. ಮದ್ಯ ಪೂರೈಕೆಗೆ ಅವಕಾಶ ಇಲ್ಲ
* ಬಸ್, ಮೆಟ್ರೋ ಸಂಚಾರಕ್ಕೆ ಶೇ.50 ಆಸನ ಸಾಮರ್ಥ್ಯದೊಂದಿಗೆ ಅವಕಾಶ
* ರೆಸಾರ್ಟ್ ಮತ್ತು ಲಾಡ್ಜ್ ಗಳಲ್ಲಿ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ
* ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ
* ಹವಾನಿಯಂತ್ರಣವಿಲ್ಲದೆ ಜಿಮ್ ಗಳು ಕಾರ್ಯ ನಿರ್ವಹಿಸಲು ಅವಕಾಶ.
* ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಕ್ರೀಡೆಗೆ ಅವಕಾಶ
ಯಾವುದಕ್ಕೆ ನಿಷೇಧ?:
* ಜುಲೈ 5ರವರೆಗೆ ಬೆಂಗಳೂರಿನಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ
* ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ
* ಸಿನಿಮಾ ಮಂದಿರ, ದೇಗುಲ, ಮಾಲ್ಗಳನ್ನು ತೆರೆಯಲು ನಿರ್ಬಂಧ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ