ಬೆಂಗಳೂರು(ಜೂನ್ 16): ರಾಜ್ಯದಲ್ಲಿ ದಾಖಲಾಗುತ್ತಿದ್ದ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದರೂ ಸಾವಿನ ಸಂಖ್ಯೆ ಬಹುತೇಕ ನಿಯಂತ್ರಣದಲ್ಲಿತ್ತು. ಇತ್ತೀಚಿನ ದಿನಗಳಿಂದ ಸಾವು ಕೈಮೀರಿ ಹೋಗುವ ಸೂಚನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಸಾವು ನಿರಂತರ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಏಳು ಸಾವು ಸಂಭವಿಸಿದೆ. ಇದರಲ್ಲಿ ಬೆಂಗಳೂರೊಂದರಲ್ಲೇ ಐವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್-19ನಿಂದ ಇದರೂವರೆಗೆ ಬಲಿಯಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಶತಕದ ಗಡಿ ಮುಟ್ಟಲು ಆರಷ್ಟೇ ಬಾಕಿ ಇದೆ. ಆದರೆ, ಇನ್ನೂ 72 ರೋಗಿಗಳು ಐಸಿಯುನಲ್ಲಿದ್ದಾರೆ. ಸಾವಿನ ಸಂಖ್ಯೆ ಬಹಳಷ್ಟು ಏರಿಕೆಯಾಗುವ ಸಾಧ್ಯತೆ ತೋರುತ್ತಿದೆ.
ಇದೇ ಅವಧಿಯಲ್ಲಿ ರಾಜ್ಯದಲ್ಲಿ 317 ಹೊಸ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 7,530 ತಲುಪಿದೆ. ಇವತ್ತು ದಾಖಲಾದ 317 ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು 47 ಇದೆ. ರಾಜಧಾನಿಯಲ್ಲಿ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಪ್ರಕರಣ ದಾಖಲಾಗಿದ್ದು ಇದೇ ಮೊದಲು. ಆದರೆ, ದಕ್ಷಿಣ ಕನ್ನಡ, ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಇವತ್ತು ಬೆಂಗಳೂರಿಗಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಗಮನಾರ್ಹ.
ಇದನ್ನೂ ಓದಿ: ವಿಕಾಸಸೌಧ, ಶಕ್ತಿಸೌಧಕ್ಕೂ ಕಾಲಿಟ್ಟ ಕೊರೋನಾ; ಕಚೇರಿಗಳು ಸೀಲ್‌ಡೌನ್, ಆತಂಕದಲ್ಲಿ ವಿಧಾನಸೌಧ ಸಿಬ್ಬಂದಿ
ಇದನ್ನೂ ಓದಿ: ಮುಂದಿನ ದಿನಗಳಲ್ಲಿ 15ರಿಂದ 20 ಸಾವಿರ ಕೊರೋನಾ ಪರೀಕ್ಷೆಗೆ ನಿರ್ಧಾರ; ಸಚಿವ ಸುಧಾಕರ್
ಒಟ್ಟಾರೆ ಕೊರೋನಾ ಪ್ರಕರಣಗಳಲ್ಲಿ ಎರಡು ಜಿಲ್ಲೆಗಳು ಸಹಸ್ರ ಸಂಖ್ಯೆಯ ಮೈಲಿಗಲ್ಲು ದಾಟಿವೆ. ಕಲಬುರ್ಗಿಯಲ್ಲಿ 1007 ಹಾಗೂ ಉಡುಪಿಯಲ್ಲಿ 1035 ಪ್ರಕರಣಗಳು ಈವರೆಗೆ ದಾಖಲಾಗಿವೆ. ಉಡುಪಿಯ ವಿಶೇಷತೆ ಎಂದರೆ ಇಲ್ಲಿಯವರೆಗೆ ಚೇತರಿಕೆ ಕಂಡವರ ಸಂಖ್ಯೆಯೂ ಎಲ್ಲರಿಗಿಂತ ಅತ್ಯಧಿಕ. ಅಲ್ಲಿ 817 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 217 ಮಾತ್ರ ಇದೆ.
ಅಂದಹಾಗೆ, ಪಾಸಿಟಿವ್ ಅಂಶ ಎಂದರೆ ಇವತ್ತು ಒಂದೇ ದಿನ 317 ಹೊಸ ಪ್ರಕರಣಗಳು ದಾಖಲಾದ ಅವಧಿಯಲ್ಲೇ 322 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಂದರೆ, ಸೋಂಕಿತರಿಗಿಂತ ಗುಣಮುಖಿತರ ಸಂಖ್ಯೆಯೇ ಅಧಿಕ ಇರುವ ದಿನಗಳಲ್ಲಿ ಇವತ್ತೂ ಒಂದು. ಆಸ್ಪತ್ರೆವಾಸದ ಅವಧಿಯನ್ನ ಒಂದು ವಾರಕ್ಕೆ ಇಳಿಸಿರುವುದೂ ಇದಕ್ಕೆ ಒಂದು ಕಾರಣವೇನೋ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ