ಇಂದಿನಿಂದ ಲಾಠಿ ಇಲ್ಲದೆ ಕರ್ತವ್ಯ ನಿರ್ವಹಿಸುವಂತೆ ಪೊಲೀಸರಿಗೆ ಕಮಿಷನರ್ ಸೂಚನೆ

ಅನಗತ್ಯವಾಗಿ ಬೈಕ್​ಗಳಲ್ಲಿ ತಿರುಗಾಡುತ್ತಿದ್ದರೆ ಅಂತಹವರ ಬೈಕ್​ಗಳನ್ನು ಕಸಿದು, ಸಂಜೆ ಬಂದು ತೆಗೆದುಕೊಂಡು ಹೋಗುವಂತೆ ತಿಳಿಸಬೇಕು, ಇಲ್ಲೂ ಸಹ ಪೊಲೀಸರು ಶಾಂತಚಿತ್ತರಾಗಿ ವರ್ತಿಸಿ, ಅವರ ಅನಿವಾರ್ಯತೆಗಳನ್ನು ಆಲಿಸಬೇಕು ಎಂದು ಹೇಳಿದ್ದಾರೆ.

ಬೈಕ್​​ ಸವಾರನಿಗೆ ತರಾಟೆಗೆ ತೆಗೆದುಕೊಂಡ ಪೊಲೀಸರು

ಬೈಕ್​​ ಸವಾರನಿಗೆ ತರಾಟೆಗೆ ತೆಗೆದುಕೊಂಡ ಪೊಲೀಸರು

 • Share this:
  ಬೆಂಗಳೂರು: ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ 14ರವರೆಗೆ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಮದ್ದಿಲ್ಲದ ಕೊರೋನಾ ಕಾಯಿಲೆಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾರಕ ಸೋಂಕನ್ನು ತಡೆಗಟ್ಟಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಇಡೀ ದೇಶವನ್ನು ಲಾಕ್​ಡೌನ್​ ಮಾಡಿದ್ದರು ಜನರು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದಾರೆ. ಇಂತಹವರಿಗೆ ಪೊಲೀಸರು ಕಂಡಕಂಡಲ್ಲಿ ಲಾಠಿ ರುಚಿ ತೋರಿಸುತ್ತಿದ್ದಾರೆ.

  ಕೆಲವರು ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಅಡ್ಡಾಡುತ್ತಾರೆ. ಆದರೆ, ಕೆಲವಷ್ಟು ಮಂದಿ ತುರ್ತು ಕೆಲಸ ಮೇಲೆ ಹೊರಗೆ ಓಡಾಡುತ್ತಿದ್ದಾರೆ. ಕೆಲವರಿಗೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗುವವರು, ಬೆಳಗ್ಗೆ ಪತ್ರಿಕೆ, ಹಾಲು ಹಾಕುವ ಹುಡುಗರು, ಇನ್ನಿತರ ಅಗತ್ಯ ಕೆಲಸದ ಮೇಲೆ ಹೊರಗೆ ಹೋಗುವವರ ಮೇಲೂ ಪೊಲೀಸರು ಮನಸೋಇಚ್ಛೆ ಬಂದಂತೆ ಥಳಿಸಿರುವ ನೂರಾರು ಪ್ರಕರಣಗಳು ಕಳೆದ ಮೂರು ದಿನಗಳಲ್ಲಿ ವರದಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದು, ಜನರಿಗೆ ಅನಗತ್ಯವಾಗಿ ಪೊಲೀಸರು ಹೊಡೆಯದಂತೆ ಸೂಚನೆ ನೀಡಲಾಗಿದೆ.

  ಈ ವಿಚಾರವಾಗಿ ಇಂದು ಬೆಂಗಳೂರಿನ ಎಲ್ಲ ಪೊಲೀಸರಿಗೂ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಕಟ್ಟುನಿಟ್ಟಿನ ಕೆಲ ಸೂಚನೆಗಳನ್ನು ನೀಡಿದ್ದಾರೆ. ಇಂದಿನಿಂದ ಕಾನೂನು ಸುವ್ಯವಸ್ಥೆ ಮತ್ತು ಸಂಚಾರಿ ಪೊಲೀಸರು ಲಾಠಿ ಇಲ್ಲದೆ ಫೀಲ್ಡ್​ನಲ್ಲಿ ಕೆಲಸ ಮಾಡಬೇಕು, ಪೂರ್ಣ ಯೂನಿಫಾರಂ ಧರಿಸಿ, ಲಾಠಿಯನ್ನು ಆಯಾ ಪೊಲೀಸ್ ಠಾಣೆಯಲ್ಲಿಯೇ ಇಟ್ಟು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಸುಖಾಸುಮ್ಮನೆ ಎಲ್ಲರ ಮೇಲೂ ಅನಗತ್ಯವಾಗಿ ಲಾಠಿ ಬೀಸದಂತೆ ಈ ಕ್ರಮ ಎಂದು ಹೇಳಿದ್ದಾರೆ.

  ಹಾಗೆಯೇ ಬೆಳಗ್ಗೆ ಪೇಪರ್​ ಹಾಕುವ ಹುಡುಗರಿಗೆ ಯಾವುದೇ ತೊಂದರೆ ನೀಡದಂತೆ ಹೇಳಿದ್ದಾರೆ. ಅವರು ಅವರ ಕೆಲಸ ಮುಗಿಸಿಕೊಂಡು ಹೊರಟುಹೋಗುತ್ತಾರೆ. ಅವರಿಗೆ ಯಾವುದೇ ರೀತಿಯಾಗಿ ಅವರ ಕೆಲಸಕ್ಕೆ ಅಡಚಣೆ ಉಂಟು ಮಾಡಬಾರದು. ಮತ್ತು ಇಂದಿನಿಂದ ಫುಡ್​ ಡೆಲಿವರಿಗೆ ಅವಕಾಶ ನೀಡಲಾಗಿದ್ದು, ಅದಕ್ಕಾಗಿಯೇ 12,500 ಪಾಸುಗಳನ್ನು ವಿತರಿಸಲಾಗಿದೆ. ಅವರಿಗೂ ಸಹ ಅನಗತ್ಯವಾಗಿ ತೊಂದರೆ ನೀಡಬಾರದು. ಯಾರನ್ನು ತಡೆದರೂ ಕುಲಂಕಷವಾಗಿ ವಿಚಾರಿಸಿ ಆನಂತರ ಕ್ರಮ ತೆಗೆದುಕೊಳ್ಳಬೇಕೇ ಹೊರತು ಏಕಾಏಕಿ ಕ್ರಮಕ್ಕೆ ಮುಂದಾಗಬಾರದು. ಅನಗತ್ಯವಾಗಿ ಬೈಕ್​ಗಳಲ್ಲಿ ತಿರುಗಾಡುತ್ತಿದ್ದರೆ ಅಂತಹವರ ಬೈಕ್​ಗಳನ್ನು ಕಸಿದು, ಸಂಜೆ ಬಂದು ತೆಗೆದುಕೊಂಡು ಹೋಗುವಂತೆ ತಿಳಿಸಬೇಕು, ಇಲ್ಲೂ ಸಹ ಪೊಲೀಸರು ಶಾಂತಚಿತ್ತರಾಗಿ ವರ್ತಿಸಿ, ಅವರ ಅನಿವಾರ್ಯತೆಗಳನ್ನು ಆಲಿಸಬೇಕು ಎಂದು ಹೇಳಿದ್ದಾರೆ.

  ಹಾಗೆಯೇ ಪ್ರತಿ ಏರಿಯಾಗಳಲ್ಲೂ ಕನಿಷ್ಠ ಹತ್ತು ಮೈಕುಗಳನ್ನು ಅಳವಡಿಸಿ, ಸಾರ್ವಜನಿಕರು ಮನೆಯಲ್ಲಿ ಇರಿ, ಮನೆಯಿಂದ ಯಾರೂ ಹೊರಗೆ ಬರಬಾರದು ಎಂದು ನಿರಂತರವಾಗಿ ಸೂಚನೆಗಳನ್ನು ನೀಡುತ್ತಿರಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

  ಇದನ್ನು ಓದಿ: ಕೊರೋನಾ ಭೀತಿಯಿಂದ ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಡಿದುಕೊಂಡ ನೂರಾರು ಹಳ್ಳಿಗಳು; ಆರ್ಥಿಕತೆ ಮೇಲೆ ತೀವ್ರ ಹೊಡೆತ

  ಜೊತೆಗೆ ಎಲ್ಲ ಪೊಲೀಸರ ಸುರಕ್ಷತೆ ಬಗ್ಗೆಯೂ ಆಯುಕ್ತರ ಕೆಲ ಸೂಚನೆಗಳನ್ನು ನೀಡಿದ್ದಾರೆ. ಪೊಲೀಸರ ಮೇಲೆ ಎಲ್ಲರೂ ತುಂಬಾ ನಂಬಿಕೆ, ಗೌರವ ಇಟ್ಟುಕೊಂಡಿದ್ದಾರೆ. ಅದರಂತೆ ನೀವು ಸಹ ಕೆಲಸ ಮಾಡಿದ್ದೀರಾ. ನಿಮ್ಮ ಆರೋಗ್ಯವನ್ನು ನೀವು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಆಗಾಗ್ಗೆ ಹ್ಯಾಂಡ್​ ಸ್ಯಾನಿಟೈಸರ್ ಬಳಸಬೇಕು. ಮಾಸ್ಕ್​ಗಳನ್ನು ಧರಿಸಿ ಕೆಲಸ ಮಾಡಿ ಎಂದು ಹೇಳಿದ್ದಾರೆ.

   
  First published: