ಪಾದರಾಯನಪುರ ಗಲಾಟೆ ಆರೋಪಿಗಳು ಬೆಂಗಳೂರಿಗೆ ಶಿಫ್ಟ್‌; ರೆಡ್‌ಜೋನ್‌ನಲ್ಲಿ ಹೆಚ್ಚಿದ ಆತಂಕ

ಪಾದರಾಯನಪುರ ಗಲಾಟೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ 116 ಆರೋಪಿಗಳಿದ್ದು, ಅವರ ಜೊತೆಗೆ 17 ಹಳೆ ಖೈದಿಗಳನ್ನೂ ಸೇರಿಸಿ ಒಟ್ಟು 133 ಜನರನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುತ್ತಿದೆ. ಒಂದು ಬಸ್‌ನಲ್ಲಿ ಹಳೆಯ ಖೈದಿಗಳು, ಮತ್ತೊಂದು ಬಸ್‌ನಲ್ಲಿ ಪಾದರಾಯನಪುರ ಆರೋಪಿಗಳನ್ನು ಕರೆತರಲಾಗುತ್ತಿದೆ.

ಪಾದರಾಯನಪುರ ಗಲಾಟೆ ದೃಶ್ಯ.

ಪಾದರಾಯನಪುರ ಗಲಾಟೆ ದೃಶ್ಯ.

  • Share this:
ರಾಮನಗರ (ಏಪ್ರಿಲ್ 24); ತೀವ್ರ ಪ್ರತಿರೋಧದ ನಂತರ ಪಾದರಾಯನಪುರ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್‌ ಮಾಡಲಾಗುತ್ತಿದ್ದು, ರೆಡ್‌ ಜೋನ್‌ ಬೆಂಗಳೂರಿನಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

ಇಡೀ ರಾಜ್ಯದ ಗಮನ ಸೆಳೆದಿದ್ದ ಪಾದರಾಯನಪುರ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿ ರಾಮನಗರ ಜೈಲಿಗೆ ಶಿಫ್ಟ್‌ ಮಾಡಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲೇ ಎಚ್ಚರಿಕೆ ನೀಡಿದ್ದರು. ಬೆಂಗಳೂರಿನಿಂದ ಆರೋಪಿಗಳನ್ನು ರಾಮನಗರಕ್ಕೆ ಕರೆತಂದು ಬಂಧಿಸುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಸೂಚಿಸಿದ್ದರು. ಆದರೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ತದನಂತರ ಬಂಧಿತ ಆರೋಪಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿ ಈ ಪೈಕಿ ಇಬ್ಬರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಸಂಸದ ಡಿ.ಕೆ. ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಅನೇಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಜೈಲು ಸಿಬ್ಬಂದಿಗಳು ಸಹ ನಿನ್ನೆ ಜೈಲಿನ ಹೊರಗೆ ಪ್ರತಿಭಟನೆ  ನಡೆಸಿದ್ದರು.

ಹೀಗಾಗಿ ಕೊನೆಗೂ ಒತ್ತಡಕ್ಕೆ ಮಣಿದ ಸರ್ಕಾರ ಪಾದರಾಯನಪುರ ಗಲಾಟೆ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲು ಮುಂದಾಗಿದೆ.

ಪಾದರಾಯನಪುರ ಗಲಾಟೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ 116 ಆರೋಪಿಗಳಿದ್ದು, ಅವರ ಜೊತೆಗೆ 17 ಹಳೆ ಖೈದಿಗಳನ್ನೂ ಸೇರಿಸಿ ಒಟ್ಟು 133 ಜನರನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುತ್ತಿದೆ. ಒಂದು ಬಸ್‌ನಲ್ಲಿ ಹಳೆಯ ಖೈದಿಗಳು, ಮತ್ತೊಂದು ಬಸ್‌ನಲ್ಲಿ ಪಾದರಾಯನಪುರ ಆರೋಪಿಗಳನ್ನು ಕರೆತರಲಾಗುತ್ತಿದ್ದು, ಈ ಬಸ್‌ ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ ಆಗಮಿಸಲಿದೆ ಎಂದು ಹೇಳಲಾಗುತ್ತಿದೆ.

ಆದರೆ, ಮೊದಲೇ ರೆಡ್‌ ಜೋನ್ ಎಂಬ ಕುಖ್ಯಾತಿ ಗಳಿಸಿರುವ ಬೆಂಗಳೂರು ನಗರಕ್ಕೆ ಪಾದರಾಯನಪುರ ಆರೋಪಿಗಳನ್ನು ಶಿಫ್ಟ್‌ ಮಾಡುತ್ತಿರುವುದು ಈ ಭಾಗದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

(ವರದಿ -ಎ.ಟಿ. ವೆಂಕಟೇಶ್, ರಾಮನಗರ)

ಇದನ್ನೂ ಓದಿ : ಲಾಕ್​ಡೌನ್​ ಉಲ್ಲಂಘನೆ; 6 ತಿಂಗಳ ಶಿಶು, 2 ವರ್ಷದ ಮಗು ವಿರುದ್ಧ ಕೇಸ್ ದಾಖಲು!
First published: