Lockdown - ಜುಲೈ 14ರಿಂದ ಜುಲೈ 22ರವರೆಗೆ ಒಂದು ವಾರ ಕಾಲ ಬೆಂಗಳೂರು ಮತ್ತು ಗ್ರಾಮಾಂತರ ಲಾಕ್​ಡೌನ್

ಜುಲೈ 14ರಿಂದ ಒಂದು ವಾರ ಕಾಲ ಬೆಂಗಳೂರನ್ನು ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು(ಜುಲೈ 11): ಕೊರೋನಾ ಸೋಂಕು ಕೈಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರವನ್ನು ಒಂದು ವಾರ ಕಾಲ ಲಾಕ್​ಡೌನ್ ಮಾಡಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನ ಒಂದು ವಾರ ಕಾಲ ಲಾಕ್ ಡೌನ್ ಮಾಡಿ ಅಧಿಕೃತ ಘೋಷಣೆ ಮಾಡಲಾಗಿದೆ. ಜುಲೈ 14, ಮಂಗಳವಾರ ರಾತ್ರಿ 8ಗಂಟೆಯಿಂದ ಜುಲೈ 23, ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.

ಮೂಲಗಳ ಪ್ರಕಾರ, ಇಡೀ ರಾಜ್ಯವನ್ನೇ ಲಾಕ್​ಡೌನ್ ಮಾಡುವ ಆಲೋಚನೆಯೂ ಸರ್ಕಾರಕ್ಕೆ ಇತ್ತು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ನಡೆಸಿದ್ದರು. ಈ ವೇಳೆ, ಲಾಕ್ ಡೌನ್ ಕ್ರಮದ ಕುರಿತ ಗಂಭೀರ ಸಮಾಲೋಚನೆ ನಡೆಸಿದರು. ಯಡಿಯೂರಪ್ಪ ಅವರು ಲಾಕ್​ಡೌನ್ ಕುರಿತು ಕೇಂದ್ರ ಸಚಿವರೊಂದಿಗೂ ಸಮಾಲೋಚನೆ ನಡೆಸಿದ್ದರು. ಎಂಟು ವಲಯಗಳ ಸಚಿವರು ಪ್ರತ್ಯೇಕವಾಗಿ ಶಾಸಕರು ಮತ್ತು ಪಾಲಿಕೆ ಸದಸ್ಯರ ಜೊತೆ ಚರ್ಚೆ ನಡೆಸಿ ತಮ್ಮ ಸಲಹೆಗಳನ್ನ ಮುಖ್ಯಮಂತ್ರಿಗೆ ತಿಳಿಸಿದ್ದರು. ಜೊತೆಗೆ ತಜ್ಞರ ಜೊತೆ ಸಿಎಂ ಚರ್ಚೆ ನಡೆಸಿದ್ದರು. ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಾಧಕ ಬಾಧಕಗಳನ್ನ ಸಿಎಂ ಪರಾಮರ್ಶೆ ಮಾಡಿದ್ದರು. ಅವರೆಲ್ಲರ ಅಭಿಪ್ರಾಯ ಪಡೆದ ನಂತರ ಯಡಿಯೂರಪ್ಪ ಅವರು ಲಾಕ್​ಡೌನ್ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದರೆನ್ನಲಾಗಿದೆ.

ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ಹತ್ಯೆ; ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಸಂಬಂಧಿಕರಿಂದ ನಾಲ್ವರ ಕೊಲೆ

ಲಾಕ್​ಡೌನ್ ವಿಚಾರದಲ್ಲೂ ಸರ್ಕಾರ ವಿವಿಧ ಆಯಾಮಗಳಲ್ಲಿ ಆಲೋಚಿಸಿದೆ. ಅತಿ ಹೆಚ್ಚು ಕೊರೋನಾ ಸೋಂಕು ಹರಡುತ್ತಿರುವ ಬೆಂಗಳೂರು ನಗರವನ್ನು ಮಾತ್ರ ಲಾಕ್​ಡೌನ್ ಮಾಡುವುದು ಬಹಳ ಪ್ರಮುಖವಾಗಿ ಕೇಳಿಬಂದ ವಿಚಾರವಾಗಿತ್ತು. ಇಡೀ ರಾಜ್ಯವನ್ನೇ ಲಾಕ್​ಡೌನ್ ಮಾಡುವ ಪ್ರಸ್ತಾಪವೂ ಇದೆ. ಇದೇ ವೇಳೆ, ಬೆಂಗಳೂರಿನಂತೆ ಕೊರೋನಾ ಸೋಂಕು ಹೆಚ್ಚು ತೀವ್ರತೆ ಇರುವ ಇನ್ನೂ ಮೂರ್ನಾಲ್ಕು ಜಿಲ್ಲೆಗಳನ್ನ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ. ಆಯ್ದ ಜಿಲ್ಲೆಗಳನ್ನ ಲಾಕ್​ಡೌನ್ ಮಾಡುವುದು ಹಾಗೂ ಅಂತರಜಿಲ್ಲೆ ಪ್ರಯಾಣವನ್ನು ನಿಷೇಧಿಸುವ ಬಗ್ಗೆಯೂ ಚರ್ಚೆಗಳಾಗಿವೆ.ರಾಜ್ಯದಲ್ಲಿ ಈಗಾಗಲೇ ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 35 ಸಾವಿರ ದಾಟಿದೆ. ಬೆಂಗಳೂರಿನಲ್ಲಂತೂ ಇದು 16 ಸಾವಿರದ ಗಡಿ ದಾಟಿಬಿಟ್ಟಿದೆ. ಹೆಚ್ಚೂಕಡಿಮೆ ನಗರದ ಪ್ರತಿಯೊಂದು ಪ್ರದೇಶದಲ್ಲೂ ಸೋಂಕು ವ್ಯಾಪಿಸಿದೆ. ಸರಕಾರಕ್ಕೆ ಒಂದು ಕಡೆ ಆರ್ಥಿಕ ಪುನಶ್ಚೇತನದ ಚಿಂತೆಯಾದರೆ, ಇನ್ನೊಂದೆಡೆ ಕೈಮೀರಿ ಹೋಗುತ್ತಿರುವ ಕೊರೋನಾ ಪರಿಸ್ಥಿತಿ ಆತಂಕ ಮೂಡಿಸಿದೆ. ಯಡಿಯೂರಪ್ಪ ಅವರು ಅಳೆದುತೂಗಿ ಒಂದು ವಾರ ಲಾಕ್​ಡೌನ್​ ಮಾಡುವ ನಿರ್ಧಾರಕ್ಕೆ ಬಂದರೆನ್ನಲಾಗಿದೆ.
Published by:Vijayasarthy SN
First published: