Bellary Sealdown: ಬಳ್ಳಾರಿಯ ಗ್ರಾಮಗಳಲ್ಲಿ ಸ್ವಯಂ ಸೀಲ್​ಡೌನ್; ಕೊರೋನಾ ನಿಯಂತ್ರಣಕ್ಕೆ ಪಣ

Bellary Lockdown: ಬಳ್ಳಾರಿ ಜಿಲ್ಲೆಯ ಸುಮಾರು 237 ಗ್ರಾಮ ಪಂಚಾಯಿತಿಗಳಲ್ಲಿ 235 ಗ್ರಾಮ ಪಂಚಾಯಿತಿಗಳಿಗೆ  ಈಗಾಗಲೇ ಕೊರೋನ ಸೋಂಕು ಲಗ್ಗೆ ಇಟ್ಟಿದೆ. ಹೀಗಾಗಿ ಜನರು ತಮ್ಮ ಹಳ್ಳಿಗಳಲ್ಲಿ ತಾವೇ ಸ್ವತಃ ತಮ್ಮ ಗ್ರಾಮಗಳನ್ನ ಸ್ವಯಂ ಸೀಲ್ ಡೌನ್ ಮಾಡಿಕೊಳ್ಳುತ್ತಿದ್ದಾರೆ.

ಬಳ್ಳಾರಿಯಲ್ಲಿ ಸೀಲ್​ಡೌನ್

ಬಳ್ಳಾರಿಯಲ್ಲಿ ಸೀಲ್​ಡೌನ್

 • Share this:
  ಬಳ್ಳಾರಿ (ಮೇ 24): ಕೊರೋನಾ ಸೋಂಕು ಈಗ ಪ್ರತಿಯೊಂದು ಹಳ್ಳಿಗಳಿಗೂ ತಲುಪಿದೆ. ಸೋಂಕು ಇಲ್ಲದೆ ಊರುಗಳೇ ಇಲ್ಲದಂತಾಗಿದೆ‌. ಅಷ್ಟೊಂದು ಸೋಂಕು ತನ್ನ ಅಟ್ಟ ಹಾಸ ಮೇರೆದಿದೆ. ಇದರಿಂದ ಹಳ್ಳಿಗಳಲ್ಲಿ ಸ್ವಯಂ ಜಾಗೃತರಾಗಿ ತಮ್ಮ ಹಳ್ಳಿಗಳಿಗೆ ಸೋಂಕು ತಗಲದಂತೆ ಗ್ರಾಮಸ್ಥರು ತಮ್ಮ ಗ್ರಾಮಗಳನ್ನ ತಾವೇ ಸೀಲ್ ಡೌನ್ ಮಾಡಿಕೊಳ್ಳುತ್ತಿದ್ದಾರೆ.

  ಹೌದು, ಬಳ್ಳಾರಿ ಜಿಲ್ಲೆಯ ಸುಮಾರು 237 ಗ್ರಾಮ ಪಂಚಾಯಿತಿಗಳಲ್ಲಿ 235 ಗ್ರಾಮ ಪಂಚಾಯಿತಿಗಳಿಗೆ  ಈಗಾಗಲೇ ಕೊರೋನ ಸೋಂಕು ಲಗ್ಗೆ ಇಟ್ಟಿದೆ. ಅಂದರೆ ಬಳ್ಳಾರಿ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಕೊರೋನ ತನ್ನ ಕಬಂಧ ಬಾಹುವನ್ನ ಚಾಚಿದಂತಾಯಿತು. ಜಿಲ್ಲೆಯ ಪ್ರತಿಯೊಂದು ಭಾಗಕ್ಕೂ ಕೊರೋನಾ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದೆ.

  ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ 85930 ಜನರಿಗೆ ಕೊರೋನಾ ಸೋಂಕು ದೃಢಪಟ್ಟರೆ, 1224 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಸೋಂಕನ್ನು ತಡೆಗಟ್ಟಲು ಸರ್ಕಾರ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಕಷ್ಟು ಹರ ಸಾಹಸ ಪಟ್ಟರೂ ಕೊರೋನಾ ಮಾತ್ರ ಕಂಟ್ರೋಲ್ ಗೆ ಬರುತ್ತಿಲ್ಲ. ಹೀಗಾಗಿ, ಅವಳಿ ಜಿಲ್ಲೆಯಲ್ಲಿ ಕೊರೋನಾ ಕಂಟ್ರೋಲ್ ಮಾಡಲೇಬೇಕು ಎಂದು ಜಿಲ್ಲಾಡಳಿತ ಐದು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದ ಕೊಂಚ ಮಟ್ಟಿಗೆ ಕೊರೋನಾ ಕಂಟ್ರೋಲ್ ಆದರೂ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ, ಜಿಲ್ಲಾಡಳಿತ ಸರ್ಕಾರ ರೂಲ್ಸ್ ಗಳಿಗಿಂತ ಜನರೇ ಸ್ವಯಂಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಮಹಾಮಾರಿಯನ್ನು ಕಂಟ್ರೋಲ್ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  ಇದನ್ನೂ ಓದಿ: LockDown: ಚಿಕ್ಕಮಗಳೂರಿನಲ್ಲಿ ಮತ್ತೆ 4 ದಿನ ಸಂಪೂರ್ಣ ಲಾಕ್​ಡೌನ್; ನಿಯಮ ಕಠಿಣಗೊಳಿಸಲು ಮುಂದಾದ ಜಿಲ್ಲಾಡಳಿತ

  ಹೀಗಾಗಿ ಜನರು ಸಹ ಜಾಗೃತರಾಗಿ, ತಮ್ಮ ಹಳ್ಳಿಗಳಲ್ಲಿ ತಾವೇ ಸ್ವತಃ ತಮ್ಮ ಗ್ರಾಮಗಳನ್ನ ಸ್ವಯಂ ಸೀಲ್ ಡೌನ್ ಮಾಡಿಕೊಳ್ಳುತ್ತಿದ್ದಾರೆ. ಯಾರೂ ಕೂಡ ಗ್ರಾಮಗಳಿಂದ ಆಚೆ ಹೋಗುವ ಹಾಗಿಲ್ಲ. ಮತ್ತು ಹೊರಗಿನಿಂದ ಯಾರೂ ಕೂಡ ತಮ್ಮ ಗ್ರಾಮಗಳಿಗೆ ಎಂಟ್ರಿ ಕೊಡುವಂತಿಲ್ಲ ಎಂಬ ನಿಯಮಗಳನ್ನ ತಾವೇ ಹಾಕಿಕೊಂಡು ಪಾಲನೆ ಮಾಡುತ್ತಿದ್ದಾರೆ. ಇದರಿಂದ ಆ ಹಳ್ಳಿಗಳಲ್ಲಿ ಕೊಂಚ ಮಟ್ಟಿಗೆ ಕೊರೋನಾ ಕಂಟ್ರೋಲ್ ಆಗಿದೆ. ಸೀಲ್ ಡೌನ್ ಮಾಡಿ ಗ್ರಾಮಗಳಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಕಳುಹಿಸಿ ಕೊರೋನಾ ಟೆಸ್ಟ್ ಮಾಡಿಸಿ ಅಂಥವರನ್ನ ಸ್ವಯಂ ಆಗಿ ಮನೆಯಲ್ಲಿಯೇ ಹೋಂ ಐಸೋಲೇಶನ್ ಮಾಡಿಸಿ ಹದಿನೈದು ದಿನ ಮನೆ ಬಿಟ್ಟು ಆಚೆ ಬಾರದಂತೆ ನೋಡಿಕೊಳ್ಳುತ್ತಾರೆ.

  ಇದನ್ನೂ ಓದಿ: Haveri Coronavirus: ಜೂನ್ ಅಂತ್ಯಕ್ಕೆ ಕರ್ನಾಟಕದಲ್ಲಿ ಕೊರೋನಾ ಕಂಟ್ರೋಲ್; ಸಚಿವ ಡಾ. ಕೆ. ಸುಧಾಕರ್

  ಜೊತೆಗೆ, ಯಾರಾದರೂ ಊರಿನಿಂದ ಸಂಬಂಧಿಕರು ಬಂದರೆ ಅವರನ್ನು ಕೂಡ 15 ದಿನಗಳ ಕಾಲ ಕ್ವಾರೆಂಟೈನ್ ಮಾಡಿಸಿ ತದನಂತರದಲ್ಲಿ ಊರಿನೊಳಗೆ ಪ್ರವೇಶ ಕೊಡಿಸುತ್ತಾರೆ. ಹೀಗಾಗಿ, ಬಳ್ಳಾರಿಯ ಜೇನು ಕುಂಟೆ ಗ್ರಾಮ ಇದುವರೆಗೂ ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ.

  ಇನ್ನು, ಈ ಜೇನುಕುಂಟೆ ಗ್ರಾಮದಲ್ಲಿ ಸುಮಾರು 140ಕ್ಕೂ ಅಧಿಕ ಜನರಿಗೆ ಕೊರೊನ ಟೆಸ್ಟ್ ಮಾಡಿಸಿದರೂ ಯಾರಿಗೂ ಪಾಸಿಟಿವ್ ಬಂದಿಲ್ಲ. ಹೀಗಾಗಿ ಈ ಗ್ರಾಮ ಕೊರೊನ ಸೋಂಕು ಇಲ್ಲದ ಗ್ರಾಮವಾಗಿದೆ.

  ಒಟ್ಟಾರೆಯಾಗಿ ಜನರು ತಮಗೆ ತಾವೇ ಜಾಗೃತರಾಗಿ ಸ್ವಯಂ ಲಾಕ್ ಡೌನ್ ವಿಧಿಸಿಕೊಂಡು ಕೊರೋನಾ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಹೀಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೆಲವೊಂದಿಷ್ಟು ಹಳ್ಳಿಗಳು ಸ್ವಯಂ ಆಗಿ ಜಾಗೃತಗೊಂಡು ತಮ್ಮ ಹಳ್ಳಿಗಳನ್ನು ತಾವೆ ಸೀಲ್ ಡೌನ್  ಮಾಡಿಕೊಂಡಿವೆ. ಇಂತಹ ಕಾರ್ಯಕ್ಕೆ ಎಲ್ಲ ಗ್ರಾಮಗಳು ಮುಂದಾದರೆ ಆದಷ್ಟು ಬೇಗ ಸೋಂಕನ್ನ ಹೊಡೆದೋಡಿಸಲು ಸಾಧ್ಯವಾಗುತ್ತದೆ.

  (ವರದಿ: ವಿನಾಯಕ ಬಡಿಗೇರ)
  Published by:Sushma Chakre
  First published: