Bellary Coronavirus: ಬಳ್ಳಾರಿಯಲ್ಲಿ ಹಳ್ಳಿಗಳ ಮೇಲೂ ಕೊರೋನಾ ವಕ್ರದೃಷ್ಟಿ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಗಿಹಳ್ಳಿ ತಾಂಡದಲ್ಲಿ ಒಂದು ದಿನದಲ್ಲಿ ಸುಮಾರು ಆರು ಜನರನ್ನು ಕೊರೋನಾ ವೈರಸ್ ಬಲಿ ಪಡೆದಿದೆ. ಕೇವಲ 3 ದಿನಗಳಲ್ಲಿ ಈ ಹಳ್ಳಿಯಲ್ಲಿಯೇ ಸುಮಾರು 15 ಜನರನ್ನು ಬಲಿ ಪಡೆದುಕೊಂಡಿದೆ.

ಬಳ್ಳಾರಿ ಆಸ್ಪತ್ರೆ

ಬಳ್ಳಾರಿ ಆಸ್ಪತ್ರೆ

 • Share this:
  ಬಳ್ಳಾರಿ (ಮೇ 10): ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ಚಾಚುತ್ತಾ ಬರುತ್ತಿದೆ. ಇತ್ತ ಹಳ್ಳಿಗಳಲ್ಲೂ ಕೂಡ ವೈರಸ್ ತನ್ನ ವಕ್ರದೃಷ್ಟಿ ಬೀರಲು ಶುರು ಮಾಡಿಕೊಂಡಿದೆ. ಒಂದು ಹಳ್ಳಿಯಲ್ಲಿ ಒಂದೇ ದಿನ ಆರು ಜನರನ್ನು ಕೊರೊನಾ ವೈರಸ್ ಬಲಿ ಪಡೆದಿದೆ. ಈಗ ಹಳ್ಳಿಗಳಲ್ಲೂ ಮರಣ ಮೃದಂಗವನ್ನು ಬಾರಿಸಲು ವೈರಸ್ ಶುರು ಮಾಡಿಕೊಂಡಿದೆ. ಹೀಗಾಗಿ, ಇಡೀ ಊರಿನಲ್ಲಿ ಸ್ಮಶಾನಮೌನರ ವಾತಾವರಣ ಆವರಿಸಿಕೊಂಡಿದೆ.

  ಹೌದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಗಿಹಳ್ಳಿ ತಾಂಡದಲ್ಲಿ ಒಂದು ದಿನದಲ್ಲಿ ಸುಮಾರು ಆರು ಜನರನ್ನು ಕೊರೋನಾ ವೈರಸ್ ಬಲಿ ಪಡೆದಿದೆ. ಕೇವಲ 3 ದಿನಗಳಲ್ಲಿ ಈ ಹಳ್ಳಿಯಲ್ಲಿಯೇ ಸುಮಾರು 15 ಜನರನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ ಈ ಜೋಗಿಹಳ್ಳಿ ತಾಂಡದಲ್ಲಿ ಇಡೀ ಊರಿಗೂರೇ ಖಾಲಿ ಖಾಲಿ ಕಾಣುತ್ತಿದೆ. ಇತ್ತ ಕೊರೊನಾ ವೈರಸ್‌ಗೆ ಹೆದರಿ ಎಷ್ಟೋ ಜನ ಊರು ಬಿಟ್ಟು ಮತ್ತೊಂದು ಊರಿಗೆ ಸೇರಿದ್ದಾರೆ. ಈ ಜೋಗಿಹಳ್ಳಿ ತಾಂಡದಲ್ಲಿಯೇ ಸುಮಾರು 70ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ‌. ಈಗ ಇಡೀ ಊರಿಗೂರೇ ಸೋಂಕಿತರಾಗುವ ಭಯ ಕಾಡುತ್ತಿದೆ.

  ಅದರಲ್ಲೂ ಪ್ರಮುಖವಾಗಿ ಈ ಗ್ರಾಮದಲ್ಲಿ ಇಷ್ಟೆಲ್ಲ ಸಾವು- ನೋವುಗಳು ಕಂಡರೂ ಜನ  ಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ಕೊಡದೆ ನಿರ್ಲಕ್ಷ್ಯ ತೋರುತ್ತಿರುವುದು ಜನರಲ್ಲಿ ಮತ್ತಷ್ಟು ಆಕ್ರೋಶ ಹುಟ್ಟುಹಾಕಿದೆ. ಈ ತಾಂಡಾದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದೆ. ಆದರೆ ಈ ಆಸ್ಪತ್ರೆಯಲ್ಲಿ ಒಬ್ಬ ನರ್ಸ್​ ಹೊರತುಪಡಿಸಿದರೆ ಇಲ್ಲಿ ಯಾವೊಬ್ಬ ವೈದ್ಯರೂ ಇಲ್ಲ. ಇದರಿಂದ ಜನ ರೊಚ್ಚಿಗೇಳುವಂತೆ ಮಾಡಿದೆ. ಇಷ್ಟು ಸಾವು ಆಗಲು ಕಾರಣ ಸೂಕ್ತ ಚಿಕಿತ್ಸೆ ಸಿಗದಿರುವುದು ಎಂಬುವುದು ಇಲ್ಲಿನ ಗ್ರಾಮಸ್ಥರ ಆರೋಪವಾಗಿದೆ‌.

  ದೇಶಕ್ಕೆ ಸ್ವತಂತ್ರ ಬಂದು ಎಪತ್ತು ವರ್ಷಗಳು ಕಳೆದರೂ ಹಳ್ಳಿಗಳಲ್ಲಿ ಇನ್ನೂ ಕೂಡ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಜನ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲ ನೇರ ಕಾರಣ ಜಿಲ್ಲಾಡಳಿತ ವೈಫಲ್ಯ ಮತ್ತು ರಾಜ್ಯ ಸರ್ಕಾರದ ವೈಫಲ್ಯ. ಈ ತಾಂಡಾದಲ್ಲಿ ಎಷ್ಟೋ ಜನರು ಕೊರೊನಾ ಟೆಸ್ಟ್ ಮಾಡಿಸಿಕೊಂಡರೂ ಇನ್ನೂ ಕೂಡ ಕೋವಿಡ್ ವರದಿ ಬಂದಿಲ್ಲ. 8-10 ದಿನಗಳು ಕಳೆದರೂ ಕೋವಿಡ್ ವರದಿ ಇಲ್ಲ. ನಂತರದಲ್ಲಿ ವರದಿ ಬಂದರೆ ಅಷ್ಟೊತ್ತಿಗಾಗಲೇ ಆ ವ್ಯಕ್ತಿ ಎಷ್ಟು ಜನರನ್ನ ಸಂಪರ್ಕ ಮಾಡಿರುತ್ತಾನೋ ಗೊತ್ತಿಲ್ಲ ಇಂತಹ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ‌.

  ಇಷ್ಟಾದರೂ ಕೂಡ ಇನ್ನು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೆ, ನಿರ್ಲಕ್ಷ್ಯ ಭಾವ ತೋರಿದರೆ ಮತ್ತಷ್ಟು ಕೊರೊನಾ ಉಲ್ಬಣವಾಗುವುದರಲ್ಲಿ ಸಂದೇಹ ವಿಲ್ಲ. ಒಟ್ಟಾರೆಯಾಗಿ ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಜನರ ಪರವಾಗಿ ನಿಂತುಕೊಂಡು ಜನರ ಆರೋಗ್ಯ ದೃಷ್ಟಿಯಿಂದ ಹಗಲು ರಾತ್ರಿ ಕೆಲಸ ಮಾಡುವಂತಹ ಅನಿವಾರ್ಯತೆಯಿದೆ. ಹೀಗಾಗಿ ಅದರ ಜೊತೆಗೆ ಜನರು ಕೂಡ ಸರ್ಕಾರಕ್ಕೆ ಕೈಜೋಡಿಸಿ ಕೊರೊನಾ ಹೊಡೆದೋಡಿಸಲು ಸಹಕರಿಸಬೇಕಾಗಿದೆ.

  ಇನ್ನಾದರೂ ಜಿಲ್ಲಾಡಳಿತ ಈ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿರುವ ಪರಿಸ್ಥಿತಿಯನ್ನು ಅವಲೋಕನ ಮಾಡಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.

  (ವರದಿ: ವಿನಾಯಕ ಬಡಿಗೇರ)
  Published by:Sushma Chakre
  First published: