Bellary: ಬಳ್ಳಾರಿಯ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೊರೋನಾ ಸೋಂಕಿತೆ ನರಳಾಟ

ಬಳ್ಳಾರಿಯ ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಕೊರೋನಾ ಸೋಂಕಿತೆಯೊಬ್ಬರು ಸುಮಾರು ಎರಡು ಗಂಟೆಗಳ ಕಾಲ ಬೆಡ್ ಸಿಗದೆ ಚೇರ್ ಮೇಲೆ ಮಲಗಿ, ನರಳಾಡುವ ದೃಶ್ಯಗಳು ಕಂಡು ಬಂದವು.

ಬೆಡ್ ಸಿಗದೆ ಸೋಂಕಿತೆಯ ನರಳಾಟ

ಬೆಡ್ ಸಿಗದೆ ಸೋಂಕಿತೆಯ ನರಳಾಟ

 • Share this:
  ಬಳ್ಳಾರಿ (ಮೇ 14): ದಿನೇದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿತರಿಗೆ ಸೂಕ್ತ ಬೆಡ್ ಸಿಗದೆ ನರಳಾಡುವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜಿಲ್ಲಾಡಳಿತ ನಮ್ಮಲ್ಲಿ ಬೆಡ್‌ಗಳ ಕೊರತೆ ಇಲ್ಲ, ಎಲ್ಲವೂ ಸಕಲ ಸಿದ್ದವಾಗಿವೆ ಎಂದು ದೊಡ್ಡದಾಗಿ ಬಿಲ್ಡಪ್ ತೆಗೆದುಕೊಳ್ಳುತ್ತಿದೆ. ಆದರೆ ನಿಜಕ್ಕೂ ಸಮಯಕ್ಕೆ ಸರಿಯಾಗಿ ಕೊರೊನಾ ಸೋಂಕಿತರಿಗೆ ಬೆಡ್ ಸಿಗದೆ ನರಳಾಡುವ ಪರಿಸ್ಥಿತಿ ಇದೆ. ನಿನ್ನೆ ಕೊರೋನಾ ಸೋಂಕಿತೆಯೊಬ್ಬರು ಸುಮಾರು ಎರಡು ಗಂಟೆಗಳ ಕಾಲ ಬೆಡ್ ಸಿಗದೆ ಚೇರ್ ಮೇಲೆ ಮಲಗಿ, ನರಳಾಡುವ ಪರಿಸ್ಥಿತಿಯ ದೃಶ್ಯಗಳು ಕಂಡು ಬಂದವು.

  ಹೌದು, ಗಣಿನಾಡು ಬಳ್ಳಾರಿಯ ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯಲ್ಲಿ ಬೆಡ್‌ಗಳೇ ಖಾಲಿ ಇಲ್ಲ, ಕೊರೊನಾ ಸೋಂಕಿತರಿಗೆ ಇಲ್ಲಿ ಸಮಯಕ್ಕೆ ಸರಿಯಾಗಿ ಬೆಡ್‌ಗಳು ಸಿಗುತ್ತಿಲ್ಲ. ಸೋಂಕಿತರಿಗೆ ಬೆಡ್‌ಗಳು ಸಿಗದೆ ನರಳಾಡುವ ಪರಿಸ್ಥಿತಿ ಎದುರಾಗಿದೆ. ನಿನ್ನೆ ವಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕೊರೊನಾ ಸೋಂಕಿತೆಯೊಬ್ಬರು ಬೆಡ್ ಸಿಗದೆ 2 ಗಂಟೆಗಳ ಕಾಲ ಚೇರ್ ಮೇಲೆ ಮಲಗಿ ನರಳಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಕೊರೋನಾ ಸೋಂಕಿತೆಯ ಸಂಬಂಧಿಕರು ದಯವಿಟ್ಟು ನಮಗೆ ಬೆಡ್ ವ್ಯವಸ್ಥೆ ಮಾಡಿ ಕೊಡಿ ಎಂದು ಅಲ್ಲಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಅಷ್ಟಾದರೂ ಕರುಣೆ ಬಾರದೆ ಆ ಸೋಂಕಿತೆಗೆ ಬೆಡ್ ವ್ಯವಸ್ಥೆ ಮಾಡಿಕೊಡಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಡ್‌ಗಳು ಸಿಗುವುದಿಲ್ಲ, ಸ್ವಲ್ಪ ಸಮಯ ಕಾಯಿರಿ ಎಲ್ಲಾದರೂ ಬೆಡ್ ಖಾಲಿಯಾದರೆ ನಿಮಗೆ ಕೊಡುತ್ತೇವೆ, ಅಲ್ಲಿಯವರೆಗೂ ಕಾಯಿರಿ ಎಂದು ಸಬೂಬು ಹೇಳುತ್ತಿದ್ದರು.

  ಸೋಂಕಿತೆಗೆ ಬೆಡ್ ಸಿಗದೆ ಬಿಸಿಲಿನಲ್ಲಿ ಚೇರ್ ಮೇಲೆ ಮಲಗಿ, ಚಿಕಿತ್ಸೆಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿತ್ತು. ಸತತ ಎರಡು ಗಂಟೆಗಳ ಕಾಲ ಆ ಸೋಂಕಿತೆ ನರಳಾಡಿದರೂ ಬೆಡ್ ಸಿಗಲಿಲ್ಲ. ನಂತರದಲ್ಲಿ ಆಕೆಗೆ ಬೆಡ್ ವ್ಯವಸ್ಥೆ ಮಾಡಿಸಿ ವಿಮ್ಸ್ ಆಸ್ಪತ್ರೆಯಿಂದ ಬೇರೆ ಕಡೆಗೆ ಶಿಫ್ಟ್​ ಮಾಡಿಸಲಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಬಳ್ಳಾರಿ ಜಿಲ್ಲೆ ಕೊರೊನಾ ವೈರಸ್ ಜಿಲ್ಲೆಯಾಗಿ ಪರಿಣಮಿಸುತ್ತಿದೆ. ಪ್ರತಿದಿನ 25 ಅಧಿಕ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ, ಅದೇ ರೀತಿ ಪ್ರತಿದಿನ 1500 ಕ್ಕೂ ಅಧಿಕ ಸೋಂಕಿತರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.

  ಕೊರೊನ ಕಂಟ್ರೋಲ್ ಮಾಡಲು ಬಳ್ಳಾರಿ ಜಿಲ್ಲಾಡಳಿತ ಹರ ಸಾಹಸ ಪಡುತ್ತಿದೆ, ಹಲವು ಯೋಜನೆಗಳನ್ನ ರೂಪಿಸಿದೆ ಇಷ್ಟಾದರೂ ಮಹಾಮಾರಿ ವೈರಸ್ ತನ್ನ ಅಟ್ಟಹಾಸವನ್ನು ಕಡಿಮೆ ಮಾಡಿಕೊಳ್ಳುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಳ್ಳಾರಿ ಜಿಲ್ಲೆಯನ್ನು ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿ ಇದ್ದರೆ, ಸಾವಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ನಂ. 2ನೇ ಸ್ಥಾನದಲ್ಲಿದೆ.

  ಇನ್ನಾದರು ಗಣಿನಾಡಿನ ಜನತೆ, ಎಚ್ಚೆತ್ತುಕೊಂಡು ಸರ್ಕಾರದ ಮಾರ್ಗಸೂಚಿಯ ಪ್ರಕಾರವಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಜೀವದ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಿದೆ.

  (ವರದಿ: ವಿನಾಯಕ ಬಡಿಗೇರ)
  Published by:Sushma Chakre
  First published: