HOME » NEWS » Coronavirus-latest-news » BBMP INHUMAN TREATMENT OF THE POOR PEOPLE FOOD KIT MAK

ಬಡವರಿಗೆ ನೀಡುವ ಆಹಾರದ ಕಿಟ್‌ನಲ್ಲೂ ಗೋಲ್‌ಮಾಲ್ ಮಾಡಿ ಅಮಾನವೀಯತೆ ಮೆರೆದ ಪಾಲಿಕೆ; ಇದಕ್ಕೆ ಯಾರು ಹೊಣೆ?

ಪ್ರಾಣಿಗಳು ತಿನ್ನೋಕೆ ಹಿಂದೇಟು ಹಾಕುವಷ್ಟು ಕಳಪೆ ದಿನಸಿ ವಿತರಿಸಿರುವುದಕ್ಕೆ ಯಾರನ್ನು ಹೊಣೆ ಮಾಡಬೇಕು ಗೊತ್ತಾಗುತ್ತಿಲ್ಲ. ಬಿಬಿಎಂಪಿ ಆಡಳಿತ ವ್ಯವಸ್ಥೆ ಪ್ರಶ್ನಿಸಿದರೆ ತನಿಖೆಯ  ಮಾತನ್ನೇಳಿ ಸುಮ್ಮನಾಗುತ್ತಾರೆ. ಆದರೆ, ಅದೆಷ್ಟು ಪ್ರಕರಣಗಳಲ್ಲಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ? ಎನ್ನುವುದು ಎಲ್ಲರಿಗೂ ಗೊತ್ತಿದೆ.

news18-kannada
Updated:May 29, 2020, 3:11 PM IST
ಬಡವರಿಗೆ ನೀಡುವ ಆಹಾರದ ಕಿಟ್‌ನಲ್ಲೂ ಗೋಲ್‌ಮಾಲ್ ಮಾಡಿ ಅಮಾನವೀಯತೆ ಮೆರೆದ ಪಾಲಿಕೆ; ಇದಕ್ಕೆ ಯಾರು ಹೊಣೆ?
ಕಳಪೆ ಆಹಾರದ ಕಿಟ್‌ ವಿರೋಧಿಸಿ ಪಾಲಿಕೆ ಎದುರು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು.
  • Share this:
ಬೆಂಗಳೂರು (ಮೇ 29): ಲಾಕ್‌ಡೌನ್‌ ವೇಳೆ ಬಡವರು ವಲಸೆ ಕಾರ್ಮಿಕರು ತಿನ್ನೋಕೆ ಅನ್ನವಿಲ್ಲದೆ ಹಸಿವು ಹಸಿವು ಎಂದು ಕೂಗಿ ಕೂಗಿ ಮೊರೆಯಿಟ್ಟರೂ ರಾಜ್ಯ ಸರ್ಕಾರವಾಗಲಿ, ಪಾಲಿಕೆಯಾಗಲಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಈಗ ಲಾಕ್‌ಡೌನ್‌ ಸಡಿಲವಾಗಿದೆ. ಬಡವರು ತಮ್ಮ ಆಹಾರಕ್ಕೆ ಕನಿಷ್ಟ ತಾವೇ ಒಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಡ ಬೇಡ ಅಂದರೂ ಸಹ ಪಾಲಿಕೆ ಆಹಾರ ಪೂರೈಕೆ ಮಾಡುತ್ತಿದೆ. ಹೋಗ್ಲಿ ಈಗ ಕೊಡುತ್ತಿರುವ ಫುಡ್ ಪ್ಯಾಕೇಟ್‌ ಗಳಾದ್ರೂ ತಿನ್ನೋಕೆ ಯೋಗ್ಯವಾಗಿದೆಯೇ? ಎಂದು ನೋಡಿದರೆ ಪಾಲಿಕೆಯ ಅಸಲಿ ಬಂಡವಾಳ ಬಯಲಾಗಿದೆ.

ನ್ಯೂಸ್ -18 ಕನ್ನಡದ ರಿಯಾಲಿಟಿ ಚೆಕ್ ನಲ್ಲಿ ಬಿಬಿಎಂಪಿ ವಿತರಿಸುತ್ತಿರುವ ಫುಡ್ ಪ್ಯಾಕೆಟ್ ಗಳ ಅಸಲಿಯತ್ತು ಬಯಲಾಗಿದೆ. ಬಡವರ ಹಸಿವು ನೀಗಿಸುವುದಕ್ಕೆಂದು ಬಿಬಿಎಂಪಿ ಫುಡ್ ಪ್ಯಾಕೆಟ್ ಗಳನ್ನು ವಿತರಿಸುವ ಕೆಲಸ ಲಾಕ್‌ಡೌನ್‌ ವೇಳೆ ಶುರುವಿಟ್ಟುಕೊಂಡಿತ್ತು. ಪ್ರತಿ ವಾರ್ಡ್ ನ ಜನಸಂಖ್ಯೆಗೆ ಅನುಗುಣವಾಗಿ ಇಂತಿಷ್ಟು ಎಂದು ನಿಗದಿ ಪಡಿಸಿತ್ತು. ವಿತರಣೆಗೂ ಪ್ರತ್ಯೇಕ ಮಾನದಂಡ ರೂಪಿಸಲಾಗಿತ್ತು.

ಆದರೆ, ಆರಂಭದಲ್ಲಿ ಅನುಮಾನ ಬಾರದಂತೆ ಯಾವುದೇ ಅಕ್ರಮಕ್ಕೆ ಆಸ್ಪದ ಕೊಡದ ರೀತಿಯಲ್ಲಿ ಆಯಾ ವಾರ್ಡ್ ನ ಕಂದಾಯಾಧಿಕಾರಿಗಳು ಆಹಾರದ ಕಿಟ್‌ ವಿತರಣೆ ಮಾಡಿದ್ದರು. ಆದರೆ, ನಂತರದಲ್ಲಿ ಫುಡ್ ಪ್ಯಾಕೆಟ್ ಗಳ ವಿತರಣೆಯಲ್ಲಿ ಬಹು ದೊಡ್ಡ ಗೋಲ್ ಮಾಲ್ ನಡೆದಿದೆ. ಈ ಕುರಿತು ನ್ಯೂಸ್ 18 ಕನ್ನಡ ವರದಿಯನ್ನೂ ಪ್ರಸಾರ ಮಾಡಿತ್ತು.

ಇದು ಒತ್ತಟ್ಟಿಗಿರಲಿ, ಲಾಕ್ ಡೌನ್ ಮುಗಿದ ಮೇಲೆ ಬೇಡ ಎಂದ್ರೂ ವಾರ್ಡ್ ಗಳಲ್ಲಿರುವ ಬಡವರಿಗೆ ವಿತೌಟ್ ಕಂಡೀಶನ್ ಫುಟ್ ಪಾಕೆಟ್ಸ್ ವಿತರಿಸಲಾಗುತ್ತಿದೆ. ಕೆಲವರು ರಿಜೆಕ್ಟ್ ಮಾಡಿದರೂ ಬಲವಂತವಾಗಿ ಅವರ ಮನೆಗಳ ಮುಂದೆ ಇಟ್ಟು ಹೋಗಲಾಗುತ್ತಿದೆ. ಸಿಕ್ಕಿದ್ದು ಸೀರುಂಡೆ ಎಂದು ಅದನ್ನು ಪಡೆದುಕೊಂಡವರು ಅವುಗಳನ್ನು ಒಪನ್ ಮಾಡುತ್ತಿದ್ದಂತೆ ಹೌಹಾರಿ ಹೋಗಿದ್ದಾರೆ. ಇದಕ್ಕೆ ಕಾರಣ ಫುಟ್ ಪ್ಯಾಕೆಟ್ಸ್ ಗಳಲ್ಲಿರುವ ಕಳಪೆ ಗಿಂತ ಕಳಪೆ ಗುಣಮಟ್ಟದ  ದಿನಸಿ ವಸ್ತುಗಳು.

ಬಹುತೇಕ ವಾರ್ಡ್ ಗಳಲ್ಲಿ ಬಡವರಿಗೆ ವಿತರಿಸಲಾಗಿರುವ ಫುಡ್ ಪ್ಯಾಕೆಟ್ ಗಳಲ್ಲಿರುವ ದಿನಸಿ ವಸ್ತುಗಳು ಬಳಕೆಗೆ ಯೋಗ್ಯವಲ್ಲದಷ್ಟು ಹಾಳಾಗಿ ಹೋಗಿವೆ .ಕಲ್ಲು ಮಣ್ಣು ಬೆರೆತಿರುವ ಅಕ್ಕಿ. ಮುಗ್ಗುಲು ವಾಸನೆಯ ಹಿಟ್ಟು... ಹುಳು ಹಿಡಿದಿರುವ ಬೇಳೆ ಕಾಳು. ಕಪ್ಪಾಗಿ ಹೋಗಿರುವ ಅಡುಗೆ ಎಣ್ಣೆ ..ಕಾಟಾಚಾರಕ್ಕೆನ್ನುವಂತೆ ನೀಡಿರುವ ಖಾರದ ಪುಡಿ, ಉಪ್ಪು, ಸಕ್ಕರೆಯನ್ನು ನೋಡಿದಾಕ್ಷಣ ಜನರು ಬೆಚ್ಚಿಬಿದ್ದಿದ್ದಾರೆ.

ಬಡವರು ನಿರ್ಗತಿಕರು ಅಂದ್ರೆ ಏನ್ ಕೊಟ್ರೂ ತಿಂತಾರೆ  ಎಂಬ ಉದಾಸೀನತೆಯಾ? ಎಂದು ಪ್ರಶ್ನಿಸುತ್ತಾರೆ ಸಗಾಯಪುರಂ ವಾರ್ಡ್ ನ ಜನ. ನ್ಯೂಸ್ 18 ಕನ್ನಡಕ್ಕೆ ದೊರೆತ ಮಾಹಿತಿ ಪ್ರಕಾರ ಸಗಾಯಪುರಂ ವಾರ್ಡ್ ಗೆ ತೆರಳಿದಾಗ ಅಲ್ಲಿನ ಚಿತ್ರಣ ಕಂಡು ನಮಗೂ ಆಕ್ರೋಶ ಮೂಡಿತು. ಬಡವರು ಎಂದಾಕ್ಷಣ ಕೊಟ್ಟಿದ್ದನ್ನೆಲ್ಲ  ತಿನ್ನುತ್ತಾರೆಂದುಕೊಂಡೇ ಕಳಪೆ ಗುಣಮಟ್ಟದ ಆಹಾರ ವಿತರಿಸಿರುವುದನ್ನು ಪ್ರಶ್ನಿಸಲು ಸಹಾಯಕ ಕಂದಾಯಾಧಿಕಾರಿ ರಾಧಾ ಅವರನ್ನು ಪ್ರಶ್ನಿಸಿದರೆ ಮೊಬೈಲ್ ಸ್ವಿಚಾಫ್-ನಾಟ್ ರಿಚಬಲ್.

ತಮಗೆ ನೀಡಿರುವ ಕಳಪೆ ಆಹಾರದ ಬಗ್ಗೆ ಪ್ರಶ್ನಿಸಲು ಜನ ಅನೇಕ ಬಾರಿ ಫೋನ್ ಮಾಡಿದ್ರೂ  ಈ ರಾಧಮ್ಮ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ವಂತೆ. ಕೇಳಿದ್ರೆ ಜಂಟಿ ಆಯುಕ್ತರ ಕಚೇರಿಯಿಂದ ಬಂದದ್ದನ್ನು‌ ಸಪ್ಲೈ ಮಾಡೋದಷ್ಟೇ ನಮ್ ಕೆಲಸ ಎಂದ್ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ತಿದ್ದಾರಂತೆ. ಇದು ಕೇವಲ ಸಗಾಯಪುರಂ ವಾರ್ಡ್ ನ ಒಂದರ ಕಥೆಯಲ್ಲ. ಬಿಬಿಎಂಪಿ ಅನೇಕ ವಾರ್ಡ್ ಗಳಲ್ಲಿ ವಿತರಿಸಿರುವ ಆಹಾರದ ಪೊಟ್ಟಣಗಳು ಇದೇ ಕತೆಯನ್ನು ಸಾರಿ ಹೇಳುತ್ತವೆ.ಪ್ರಾಣಿಗಳು ತಿನ್ನೋಕೆ ಹಿಂದೇಟು ಹಾಕುವಷ್ಟು ಕಳಪೆ ದಿನಸಿ ವಿತರಿಸಿರುವುದಕ್ಕೆ ಯಾರನ್ನು ಹೊಣೆ ಮಾಡಬೇಕು ಗೊತ್ತಾಗುತ್ತಿಲ್ಲ. ಬಿಬಿಎಂಪಿ ಆಡಳಿತ ವ್ಯವಸ್ಥೆ ಪ್ರಶ್ನಿಸಿದರೆ ತನಿಖೆಯ  ಮಾತನ್ನೇಳಿ ಸುಮ್ಮನಾಗುತ್ತಾರೆ. ಆದರೆ, ಅದೆಷ್ಟು ಪ್ರಕರಣಗಳಲ್ಲಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ? ಎನ್ನುವುದು ಎಲ್ಲರಿಗೂ ಗೊತ್ತಿದೆ. ಲಾಕ್  ಡೌನ್ ನೆವದಲ್ಲಿ ತನಿಖೆಯನ್ನು ಗಜಪ್ರಸವದಂತೆ ಎಳೆದರೂ ಕೂಡ ಆಶ್ಚರ್ಯವಿಲ್ಲ.

ಹೀಗಾಗಿ ಈ ವಿಷಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಭಾವಿಸುವುದು ಕೂಡ ಮೂರ್ಖತನವಾದೀತು. ಹಾಗಾದ್ರೆ... ಬಡವರು ಎಂದರೆ ಈ ಮಟ್ಟದ ಉದಾಸೀನತೆ- ತಾತ್ಸಾರ -ನಿರ್ಲಕ್ಷ ತೋರುವುದು ಎಷ್ಟು ಸರಿ..? ಅವರು ಬಡವರು ಎಂದಾಕ್ಷಣ ಪಶುಗಳು ತಿನ್ನೋಕೂ ಹೇಸಿಗೆ ಪಡುವಂಥ ಕಳಪೆ ಆಹಾರ ಪದಾರ್ಥಗಳನ್ನು ಕೊಡೋದು ನ್ಯಾಯನಾ..? ಎಂಬುದು ಜನ ಸಾಮಾನ್ಯರ ಪ್ರಶ್ನೆ.

ಇರೋ ಟಾರ್ಗೆಟ್ ರೀಚ್ ಮಾಡಲಿಕ್ಕೆ ಅವಸರವಸರವಾಗಿ ಫುಡ್ ಪ್ಯಾಕೆಟ್ ವಿತರಿಸಿ  ಕೈತೊಳೆದುಕೊಳ್ಳುವ ಧಾವಂತದಲ್ಲಿದೆ ಬಿಬಿಎಂಪಿ. ಆದರೆ, ಅದಕ್ಕೆ ಅವಕಾಶ ಕೊಡದೆ ಇದರಲ್ಲಿ ಆಗಿರುವ ಅನ್ಯಾಯ- ಅಕ್ರಮ ಪತ್ತೆ ಮಾಡಬೇಕಿದೆ. ಬಡವರಿಗೆ ತಿನ್ನಲು ಯೋಗ್ಯವಾದ ಆಹಾರ ಪೂರೈಸಬೇಕಿದೆ.

ಇದನ್ನೂ ಓದಿ : ಹೈಕಮಾಂಡ್‌ ಸೂಚಿಸಿದರೆ ಈಗಲೂ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಸಿದ್ದ: ರಮೇಶ್ ಜಾರಕಿಹೊಳಿ
First published: May 29, 2020, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories