ಬೆಂಗಳೂರು(ಆಗಸ್ಟ್.19): ವಿಶ್ವದೆಲ್ಲೆಡೆ ಕೊರೋನಾ ವೈರಸ್ ಹತೋಟಿಗೆ ತರಲು ಸರ್ವ ಪ್ರಯತ್ನ ನಡೆಯುತ್ತಿದೆ. ಆದರೆ ಇಂಥ ಕೊರೋನಾ ಸೋಂಕು ಬಂದದ್ದನ್ನೇ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ವಾಸನೆ ಹೊಡೆಯುತ್ತಿದೆ. ಕಂಟೈನ್ಮೆಂಟ್ ಹೆಸರಿನಲ್ಲಿ ಬಿಬಿಎಂಪಿ ಕೋಟಿ ಕೋಟಿ ಲೂಟಿ ಮಾಡಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ಇದರ ಬಿಲ್ ನೋಡಿ ಬಿಬಿಎಂಪಿ ಆಯುಕ್ತರು ಶಾಕ್ ಆಗಿದ್ದಾರೆ. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಇದೀಗ ಬಿಬಿಎಂಪಿ ಆಯುಕ್ತರು ಎಚ್ಚೆತ್ತುಕೊಂಡು ಬಿಲ್ ತಡೆಹಿಡಿದಿದ್ದಾರೆ.
ಎಲ್ಲರೂ ಕೊರೋನಾ ವೈರಸ್ ಬಾರದಿರಲಿ ಎಂದು ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದರೆ, ಬಿಬಿಎಂಪಿ ಅಧಿಕಾರಿಗಳು ಕಂಟೈನ್ಮೆಂಟ್ ಮಾಡುವ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಇಂಜಿನಿಯರಿಂಗ್ ವಿಭಾಗವು ಕೊರೋನಾ ಹಿನ್ನೆಲೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಅನ್ವಯ ಕಂಟೈನ್ಮೆಂಟ್ ವಲಯವನ್ನು ಗುರುತಿಸಿ ಅಲ್ಲಿಯ ಸ್ಥಳೀಯರು ಹೊರಹೋಗದಂತೆ ಸೀಲ್ ಡೌನ್ ಮಾಡುತ್ತಿದೆ. ಇದಕ್ಕೆ ಬೇಕಾದ ಮೂರು ತಗಡು, ಮೂರು ಕಂಬಗಳು ಹಾಕಿ ರಸ್ತೆ, ಏರಿಯಾ ಬಂದ್ ಮಾಡಲು ಕಂಟೈನ್ಮೆಂಟ್ ಹೆಸರಿನಲ್ಲಿ ಕೋಟಿಗಟ್ಟಲೆ ಬಿಲ್ ಹಾಕಿ ಗೋಲ್ ಮಾಲ್ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಒಂದು ಮನೆಯಲ್ಲಿ ಕೊರೋನಾ ಕೇಸ್ ಹೆಚ್ವಳವಾದರೆ ಆ ಮನೆಯ ನೂರು ಮೀಟರ್ ಸೀಲ್ಡೌನ್ ಮಾಡಿ ಕಂಟೈನ್ಮೆಂಟ್ ರೀತಿ ರಸ್ತೆ ಬಂದ್ ಮಾಡಲಾಗುತ್ತದೆ. ಇದಕ್ಕೆ ಮೂರು ತಗಡು, ಮೂರು ಕೋಲು ಇಟ್ಟು ರಸ್ತೆ ಬಂದ್ ಮಾಡಲು ದಿನವೊಂದಕ್ಕೆ ಬರೋಬ್ಬರಿ 70 ಸಾವಿರ ಕೊಡಬೇಕಂತೆ. ಅತ್ಯಂತ ಕಡಿಮೆ ಕೊಟೇಷನ್ ಆಗಿದ್ದೇ 69,140 ರೂಪಾಯಿ ಎನ್ನುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕಾರಣಕ್ಕಾಗಿಯೇ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ಹೆಸರಿನಲ್ಲಿ ಭಾರೀ ಅವ್ಯವಹಾರದ ವಾಸನೆ ಹೊಡೆಯುತ್ತಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ 33 ಸಾವಿರ ಕಂಟೋನ್ಮೆಂಟ್ ಗಳನ್ನು ಗುರುತಿಸಿದೆ. ಕಂಟೈನ್ಮೆಂಟ್ ಒಂದಕ್ಕೆ 70 ಸಾವಿರದಂತಾದ್ರೆ, 14 ದಿನಗಳಿಗೆ 7.26 ಲಕ್ಷ ಕೊಡಬೇಕು. ಇದರ ಅನ್ವಯ ನೋಡಿದ್ರೆ 33 ಸಾವಿರ ಕಂಟೋನ್ಮೆಂಟ್ಗೆ ಸಾವಿರಾರು ಕೋಟಿ ಕೊಡಬೇಕಾಗುತ್ತದೆ. ಇದರಲ್ಲಿ ಸಕ್ರಿಯ ಕಂಟೈನ್ಮೆಂಟ್ ಝೋನ್ ಗಳು 13,482 ಇದಕ್ಕೆಲ್ಲ ಇನ್ನಷ್ಟು ಕೋಟಿ ಬಿಬಿಎಂಪಿ ಕೊಡಬೇಕಾಗುತ್ತದೆ. ನಿಜಕ್ಕೂ ಒಂದು ಕಂಟೈನ್ಮೆಂಟ್ಗೆ 70 ಸಾವಿರದಷ್ಟು ಕೆಲಸವಿದೆಯೇ ಎಂಬ ಬಗ್ಗೆ ಅನುಮಾನಗೊಂಡ ಬಿಬಿಎಂಪಿ ಆಯಕ್ತರಾದ ಮಂಜುನಾಥ್ ಪ್ರಸಾದ್ ಅವರು ಹೆಚ್ಚುವರಿ ಬಿಲ್ ಹಾಕಿರುವುದಕ್ಕೆ ಫುಲ್ ಗರಂ ಆಗಿದ್ದು, ಅಂದಾಜುಪಟ್ಟಿ ಇಲ್ಲದೆ, ಎಸ್ ಆರ್ ನಿಯಮ ಪಾಲಿಸದವರ ಬಿಲ್ ತಡೆಹಿಡಿಯಲು ಆಯಕ್ತರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗಕ್ಕೆ ಸಂಪೂರ್ಣ ದಾಖಲೆಯನ್ನು ಬಿಬಿಎಂಪಿ ಆಯುಕ್ತ ಕೇಳಿದ್ದಾರೆ. ಬಿಬಿಎಂಪಿ ಕಮಿಷಿನರ್ ಮಂಜುನಾಥ್ ಪ್ರಸಾದ್ ಹೇಳುವ ಪ್ರಕಾರ, ರಾಜರಾಜೇಶ್ವರಿ ನಗರ ವಲಯದ ಕಂಟೈನ್ಮೆಂಟ್ ಗಳಿಗೆ ಕಳೆದ ಎರಡುವರೆ ತಿಂಗಳಿನಲ್ಲಿ ಒಂದುವರೆ ಕೋಟಿ ಖರ್ಚಾಗಿರಬಹುದು. ಅದೇ ರೀತಿ ಬೆಂಗಳೂರಿನ ಎಂಟು ವಲಯ ಸೇರಿಸಿದರೆ 20 ಕೋಟಿ ಖರ್ಚಾಗಿರಬಹುದು. ಕೆಲವೆಡೆ ಕಂಟೈನ್ಮೆಂಟ್ ಮಾಡಲು ಬೇಕಾದ ಪರಿಕರ ಖರೀದಿಸಿ ಬಳಕೆ ಮಾಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ