ಬೆಂಗಳೂರು(ಏ. 19): ಕೊರೋನಾ ಸಂಕಷ್ಟದ ಮಧ್ಯೆ ನಾಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಮಂಡನೆಯಾಗಲಿದೆ. ಕೊರೋನಾ ವೈರಸ್ ಸೋಂಕು ತಡೆಯುವ ಕಾರ್ಯಕ್ಕೆ ಈ ಬಜೆಟ್ ಹೆಚ್ಚು ಒತ್ತು ಕೊಡುವ ನಿರೀಕ್ಷೆ ಇದೆ. ಅದು ಬಿಟ್ಟು ಇನ್ನೂ ಕೆಲ ಮಹತ್ವದ ಘೋಷಣೆಗಳು ಬರುವ ಸಾಧ್ಯತೆ ಇದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ಬಿಬಿಎಂಪಿ ಮಂಡಳಿ ಸಭೆಯಲ್ಲಿ ಬಜೆಟ್ ಮಂಡನೆಯಾಗಲಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಬಜೆಟ್ ಮಂಡಿಲಿದ್ದು, ಅದರ ಗಾತ್ರ ಸುಮಾರು 11 ಸಾವಿರ ಕೋಟಿ ರೂ ಇರಲಿದೆ.
ಸುಮಾರು 50 ಮಂದಿ ಈ ಕೌನ್ಸಿಲ್ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಮೇಯರ್, ಉಪಮೇಯರ್, ಬಿಬಿಎಂಪಿ ಕಮಿಷನರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಆಡಳಿತ ಪಕ್ಷದ ನಾಯಕರು, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಜೆಟ್ ಮಂಡನೆಯಾಗಲಿದೆ. ಕೊರೋನಾ ಸುರಕ್ಷೆ ದೃಷ್ಟಿಯಿಂದ ಕಾರ್ಪೊರೇಟರ್ಗಳು ಬಿಬಿಎಂಪಿ ಕಚೇರಿಗೆ ಬರುವುದಿಲ್ಲ. ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಬಜೆಟ್ ವೀಕ್ಷಣೆಗೆ ವಿಡಿಯೋ ಕಾನ್ಫೆರೆನ್ಸ್ ಮಾಡಲಾಗಿದೆ. ಕಾರ್ಪೊರೇಟರ್ಗಳು ತಮ್ಮತಮ್ಮ ವ್ಯಾಪ್ತಿಯ ವಲಯಗಳಲ್ಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ಬಜೆಟ್ ವೀಕ್ಷಿಸಬಹುದಾಗಿದೆ.
ನಾಳೆ ಬಜೆಟ್ ಮಂಡಿಸಲಿರುವ ಎಲ್. ಶ್ರೀನಿವಾಸ್ ಅವರು ಬಜೆಟ್ನಲ್ಲಿ ಏನೇನಿರಬಹುದೆಂದು ಒಂದಷ್ಟು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರು. ಅದರಂತೆ ಕೊರೋನಾ ಮೂಲೋತ್ಪಾಟನೆ ಮತ್ತು ಜಾಗೃತಿಗೆ ಹೆಚ್ಚು ಒತ್ತುಕೊಡಲಾಗುತ್ತದೆ. ಇದು ವಾಸ್ತವಿಕ ಮತ್ತು ಉಳಿತಾಯ ಬಜೆಟ್ ಆಗಿರಲಿದೆ ಎಂದವರು ತಿಳಿಸಿದರು. ಬಜೆಟ್ನಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲು ಹಾಗೂ ಕೊರೋನಾ ಚಿಕಿತ್ಸೆಗೆ ಪೂರಕವಾದಂತಹ ವ್ಯವಸ್ಥೆ ನಿರ್ಮಿಸಲು ವಿವಿಧ ಯೋಜನೆಗಳನ್ನ ಪ್ರಕಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೊರೋನಾ ಕ್ರಮದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ; ವರದಿಯಲ್ಲೇನಿದೆ?
ಬಜೆಟ್ನಲ್ಲಿ ಏನೇನಿರಲಿದೆ?
* ಕೊರೋನಾ ಎದುರಿಸಲು ಪ್ರತಿ ವಾರ್ಡ್ಗೆ 25 ಲಕ್ಷದಂತೆ 198 ವಾರ್ಡ್ಗಳಿಗೆ 49 ಕೋಟಿ ರೂ.
ಈ 25 ಲಕ್ಷ ಹಣದಲ್ಲಿ ಶ್ರಮಿಕರಿಗೆ ಸಹಾಯಧನ, ದಿನಸಿ ವಿತರಣೆಗೆ ಒತ್ತು
ಕೊರೊನಾ ಸಂಬಂಧಿತ ತುರ್ತು ಕೆಲಸಗಳಿಗಷ್ಟೇ ಮಿಕ್ಕ ಹಣ ಬಳಕೆ
* ಸಾಮಾಜಿಕ ನ್ಯಾಯ ಕಲ್ಪಿಸಲು ವಿವಿಧ ಯೋಜನೆ
* ಪೌರ ಕಾರ್ಮಿಕರಿಗೆ ಸೂರುಭಾಗ್ಯ: ಪ್ರಾರಂಭಿಕ ಹಂತದಲ್ಲಿ 10 ಕೋಟಿ
* ಬೆಂಗಳೂರಿನ 8 ಕಡೆ ಸ್ವಾಗತ ಕಮಾನ್
* ಬಿಬಿಎಂಪಿ ಆಸ್ಪತ್ರೆಗಳು ಮೇಲ್ದರ್ಜೆಗೆ
* ಕೊರೊನಾ ಚಿಕಿತ್ಸೆಗೂ ಪೂರಕವಾಗುವಂತೆ ವ್ಯವಸ್ಥೆ
* ಬೃಹತ್ ಹಾಗೂ ಬಹುಸುಸಜ್ಜಿತ ಮಕ್ಕಳ ಆಸ್ಪತ್ರೆ ನಿರ್ಮಾಣ
* ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ ಕ್ರಮ
* ಶಾಲಾ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ
* ಶಾಲಾ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ
* ಹೃದಯಸಂಬಂಧಿ ಸಮಸ್ಯೆಯ ರೋಗಿಗಳಿಗೆ ಉಚಿತ ಸ್ಟಂಟ್ ವಿತರಣೆ.
* ಬಿಬಿಎಂಪಿ ಶಾಲೆಗಳಲ್ಲಿ ‘ಸ್ಮಾರ್ಟ್’ ಶಿಕ್ಷಣ
* ಎಸ್ಸೆಸ್ಸೆಲ್ಸಿ ಮಕ್ಕಳಿಗೆ 25 ಸಾವಿರ ಪ್ರೋತ್ಸಾಹ ಧನ
* ಪಿಯುಸಿ ಮಕ್ಕಳಿಗೆ 30 ಸಾವಿರ ಪ್ರೋತ್ಸಾಹ ಧನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ