ಬೆಂಗಳೂರಿನಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆ, ಖರೀದಿಗೆ ನಿರ್ಬಂಧ ವಿಧಿಸಿಲ್ಲ; ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ

ಹೋಮ್ ಕ್ವಾರಂಟೈನ್​​​ನಲ್ಲಿರುವ ನಾಗರೀಕರು 14 ದಿನಗಳನ್ನು ಪೂರೈಸಿ, ಕೊರೋನಾದ ಯಾವುದೇ ಸೋಂಕು ತಗುಲಿಲ್ಲವಾಗಿದ್ದಲ್ಲಿ, ಅಂಥವರು ಸಕ್ಷಮ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ, ಕೊರೋನಾ ಸೋಂಕು ಇಲ್ಲದಿರುವ ಬಗ್ಗೆ ವೈದ್ಯರಿಂದ ವೈದ್ಯಕೀಯ ದೃಡೀಕರಣ ಪಡೆದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ. ಆದರೆ ಕ್ವಾರಂಟೈನ್​​ ಅವಧಿ ಪೂರ್ಣಗೊಳ್ಳದಿರುವ ವ್ಯಕ್ತಿಗಳು ಸಮಾಜದ ಮಧ್ಯೆ ಬೇಕಾಬಿಟ್ಟಿ ತಿರುಗುತ್ತಿರುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

news18-kannada
Updated:April 1, 2020, 2:44 PM IST
ಬೆಂಗಳೂರಿನಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆ, ಖರೀದಿಗೆ ನಿರ್ಬಂಧ ವಿಧಿಸಿಲ್ಲ; ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ
ಜಿಲ್ಲಾಧಿಕಾರಿಗಳ ಸಭೆ
  • Share this:
ಯಲಹಂಕ‌(ಏ.01): ಬೆಂಗಳೂರು ನಗರದಲ್ಲಿ ಸಾರ್ವಜನಿಕ ಅಗತ್ಯ ವಸ್ತುಗಳ ಸಾಗಾಣಿಕೆಗಾಗಲಿ ಅಥವಾ ಖರೀದಿಗಾಗಲಿ ಯಾವುದೇ ನಿರ್ಬಂಧ ವಿಧಿಸಿಲ್ಲ, ಆದರೆ ನಿಗದಿತ ಸಮಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಈ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಿದ್ದೇವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ರವರ ಸಮ್ಮುಖದಲ್ಲಿ ಯಲಹಂಕದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾರಕ ರೋಗ ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ ಮತ್ತು ಮಾಹಿತಿ ಸಂಗ್ರಹಿಸಲು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರೈತರು ಬೆಳೆದ ತರಕಾರಿ, ಇನ್ನಿತರೆ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಜಿಲ್ಲಾಡಳಿತ ಯಾವುದೇ ನಿರ್ಬಂಧ ಹೇರಿಲ್ಲ. ತರಕಾರಿ ಸಾಗಿಸುವ ವಾಹನ ತಡೆಯದಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ದೈನಂದಿನ ವಸ್ತುಗಳು ಜನತೆಯ ಅಗತ್ಯತೆಗಳಾಗಿದ್ದು, ಅವುಗಳನ್ನು ಜನರಿಗೆ ತಲುಪಿಸದಂತೆ ತಡೆಯಲು ಸಾಧ್ಯವೇ ಇಲ್ಲ, ಅವುಗಳು ಜನತೆಗೆ ತಲುಪಲೇಬೇಕು ಆದರೆ ಕೊರೋನಾ ರೋಗ ಸಮುದಾಯದ ಹಂತಕ್ಕೆ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜನತೆ ಗುಂಪು ಗುಂಪಾಗಿ ಒಂದೆಡೆ ಸೇರದಂತೆ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆಯೇ ಹೊರತು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು ನಮ್ಮ ಉದ್ದೇಶವಲ್ಲ ಎಂದರು.

ರೈತರು-ಗ್ರಾಹಕರ ಹಿತ ಕಾಯಲು ಕೆಲವು ಮಹತ್ವದ ತೀರ್ಮಾನ ತೆಗೆದುಕೊಂಡ ಸಿಎಂ ಬಿಎಸ್‌ವೈ; ಏನದು?

ಹೋಮ್ ಕ್ವಾರಂಟೈನ್​​​ನಲ್ಲಿರುವ ನಾಗರೀಕರು 14 ದಿನಗಳನ್ನು ಪೂರೈಸಿ, ಕೊರೋನಾದ ಯಾವುದೇ ಸೋಂಕು ತಗುಲಿಲ್ಲವಾಗಿದ್ದಲ್ಲಿ, ಅಂಥವರು ಸಕ್ಷಮ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ, ಕೊರೋನಾ ಸೋಂಕು ಇಲ್ಲದಿರುವ ಬಗ್ಗೆ ವೈದ್ಯರಿಂದ ವೈದ್ಯಕೀಯ ದೃಡೀಕರಣ ಪಡೆದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ. ಆದರೆ ಕ್ವಾರಂಟೈನ್​​ ಅವಧಿ ಪೂರ್ಣಗೊಳ್ಳದಿರುವ ವ್ಯಕ್ತಿಗಳು ಸಮಾಜದ ಮಧ್ಯೆ ಬೇಕಾಬಿಟ್ಟಿ ತಿರುಗುತ್ತಿರುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೋನಾ ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಕಾಯ್ದುಕೊಳ್ಳುವುದು ಮತ್ತು ಸ್ವಚ್ಛತೆಯ ಮುಂಜಾಗ್ರತೆ ವಹಿಸುವುದರ ಹೊರತಾಗಿ ಅನ್ಯ‌ ಮಾರ್ಗವಿಲ್ಲ ಈ ನಿಟ್ಟಿನಲ್ಲಿ ಜನತೆ ಜಾಗ್ರತೆ ವಹಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ 'ಕೊರೋನಾ ವೈರಸ್ ಸಮುದಾಯದ ಹಂತಕ್ಕೆ ತಲುಪದಂತೆ ತಡೆಯುವ ನಿಟ್ಟಿನಲ್ಲಿ ಯಲಹಂಕ ಕ್ಷೇತ್ರದಲ್ಲಿ ಅತ್ಯಂತ ಜಾಗರೂಕತೆಯಿಂದ ಕ್ರಮ ವಹಿಸಲಾಗಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಪಡಿತರ ವಿತರಿಸಲು ಈಗಾಗಲೇ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಪಡಿತರ ವಿತರಿಸಲಾಗುವುದು.

ಇದರ ಹೊರತಾಗಿ ಕ್ಷೇತ್ರದಲ್ಲಿ ನೆಲೆಸಿರುವ ಬಿಪಿಎಲ್ ಕಾರ್ಡ್ ಹೊಂದದೆ ಇರುವ ನಿರ್ಗತಿಕರನ್ನು ಗುರುತಿಸಿ ಅಂಥವರಿಗೆ ಅಕ್ಕಿ, ಗೋಧಿ, ಎಣ್ಣೆ, ಬೇಳೆ ಮುಂತಾದ ಅಗತ್ಯ ವಸ್ತುಗಳನ್ನು ನೀಡಲು ಭರದ ಸಿದ್ಧತೆ ನಡೆಸಲಾಗಿದ್ದು, ಇದುವರೆಗೂ ಸಂಗ್ರಹಿಸಿರುವ ಆಹಾರ ಸಾಮಗ್ರಿಗಳ ಪ್ಯಾಕಿಂಗ್ ಕಾರ್ಯ ನಡೆಯುತ್ತಿದ್ದು, ಪೂರ್ಣಗೊಂಡ ಒಡನೆಯೇ ಅವರಿಗೆ ತಲುಪಿಸಲಾಗುವುದು. ಒಂದು ವೇಳೆ ಕೊರೋನಾ ಕರ್ಫ್ಯೂ ಅವಧಿ ವಿಸ್ತರಣೆಯಾಗುವ ಸಂಭವವಿದ್ದರೆ, ಆ ವೇಳೆಗೂ ಸಹ ನಿರ್ಗತಿಕ ನಾಗರೀಕರಿಗೆ ಆಹಾರ ಪೂರೈಸಲು ಆಹಾರ ಸಂಗ್ರಹಿಸಲಿದ್ದೇವೆ. ಕ್ಷೇತ್ರದ ಜನತೆ ಆಹಾರ ಪೂರೈಕೆಯ ಬಗ್ಗೆ ಯಾವುದೇ ಆತಂಕ್ಕೆ ಒಳಗಾಗ ಬೇಕಿಲ್ಲ ಎಂದರು.ಇದರ ಹೊರತಾಗಿ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರನ್ನು ಪಟ್ಟಿ ಮಾಡಿ ಅವರಿಗೆ ಊಟ,ತಿಂಡಿ ನೀಡಲು ಸಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮ ಮತ್ತು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯಪಡೆ ರಚಿಸಿದ್ದು ಇದರ ಮೂಲಕ ಬಡವರಿಗೆ, ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಆಯಾ ಗ್ರಾ.ಪಂ.ಗಳ ಪಿಡಿಓ ಗಳು ಇದರ ನಿರ್ವಹಣೆಯ ಹೊಣೆ ಹೊತ್ತು ಮುನ್ನಡೆಸಲು ಸೂಚಿಸಲಾಗಿದೆ. ಪಿಡಿಓ ಗಳು ತಮ್ಮ ವ್ಯಾಪ್ತಿಯಲ್ಲಿ ನೆಲೆಸಿರುವ ನಿರಾಶ್ರಿತರ ಪಟ್ಟಿ ನೀಡಿದರೆ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದರು.

ಮಾರಕ ರೋಗ ಕೊರೋನಾವನ್ನು ದೇಶದಿಂದ ಓಡಿಸಲು ಜನತೆ ಕರ್ಫ್ಯೂ ಆಚರಣೆಯನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ದೇಶವನ್ನು ಗೆಲ್ಲಿಸಬೇಕೆಂಬುದೇ ನಮ್ಮ ಮಹತ್ವದ ಗುರಿಯಾಗಿದೆ. ಇದಕ್ಕಾಗಿ ನಾವು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ, ಜನತೆ ಸಹಕರಿಸಬೇಕಷ್ಟೇ ಎಂದರು. ಇದೇ ಸಂದರ್ಭದಲ್ಲಿ ಯಲಹಂಕ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಗಳ ಪಿಡಿಓ ಗಳು ತಮ್ಮ ಗ್ರಾ.ಪಂ‌. ವ್ಯಾಪ್ತಿಯಲ್ಲಿನ ಸಮಸ್ಯೆಗಳು, ಅಗತ್ಯವಿರುವ ಸೌಕರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬೆಂ.ಉತ್ತರ ಉಪವಿಭಾಗಾಧಿಕಾರಿ ರಂಗನಾಥ್, ಬೆಂ.ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಬಿಬಿಎಂಪಿ ಯಲಹಂಕ ವಿಭಾಗದ ಜಂಟಿ ಆಯುಕ್ತ ಡಾ.ಅಶೋಕ್, ಬೆಂ.ಉತ್ತರ ತಹಶೀಲ್ದಾರ್ ಶಿವರಾಜ್, ಯಲಹಂಕ ತಹಶಿಲ್ದಾರ್ ಎನ್ ರಘುಮೂರ್ತಿ, ಯಲಹಂಕ ಉಪವಿಭಾಗದ ಎಸಿಪಿ ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾ ಜಿಲ್ಲಾ ಸಂಯೋಜನಾ ಅಧಿಕಾರಿ ಡಾ.ಸಿದ್ಧರಾಮಣ್ಣ ಸೇರಿದಂತೆ ಬೆಂ.ಈಶಾನ್ಯ ವಿಭಾಗದ ವಿವಿಧ ಠಾಣೆಗಳ ಇನ್ಸ್ಷೆಕ್ಟರ್ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading