ಬೆಂಗಳೂರು(ಆಗಸ್ಟ್. 03): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು ಕಳೆದ ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಅದರೆ, ನಿನ್ನೆ ರಾತ್ರಿ ಸಿಎಂಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರಾತ್ರಿಯೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ಯಮಂತ್ರಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಚಿವರು, ಶಾಸಕರು, ಆಧಿಕಾರಿಗಳು ಈಗ ಸ್ವಯಂ ಕ್ವಾರಂಟೈನ್ ಗೆ ಒಳಗಾಗುತ್ತಿದ್ದಾರೆ.
ಇದೀಗ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ತಮ್ಮ ಮನೆಯಲ್ಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಬೆಂಗಳೂರು ಪೊಲೀಸ್ ಕಮೀಷನರ್ ಆಗಿ ಕಳೆದ ಶನಿವಾರವಷ್ಟೇ ಕಮಲ್ ಪಂತ್ ಅವರು ಆಧಿಕಾರ ಸ್ವೀಕಾರ ಮಾಡಿದ್ದರು. ಆದರೆ, ಸಿಎಂ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಇದ್ದ ಹಿನ್ನಲೆಯಲ್ಲಿ ತಾವೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಇನ್ನೂ ಕ್ವಾರಂಟೈನ್ ನಲ್ಲಿ ಇರುವುದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ಕಮೀಷನರ್ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಿದ್ದಾರೆ. ತಮ್ಮ ವ್ಯಾಪ್ತಿಯ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ಕೆಲಸ ಮಾಡಲು ಕಮೀಷನರ್ ಮುಂದಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸುವುದು, ಸಂಬಂಧಿತ ಕೆಲಸ ಕಾರ್ಯ ನಿರ್ವಹಿಸಲು ಕಮಲ್ ಪಂತ್ ಮುಂದಾಗಿದ್ದಾರೆ.
ಕೊರೋನಾ ಪಾಸಿಟಿವ್ ವರದಿ ಬಂದ ಬಗ್ಗೆ ಭಾನುವಾರ ಬಿಎಸ್ವೈ ಟ್ವೀಟ್ ಮಾಡಿದ್ದರು. ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗ ಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ : ಸಿಎಂ ಗೃಹ ಕಚೇರಿಯಲ್ಲಿ 6 ಸಿಬ್ಬಂದಿ, ಕಾವೇರಿ ನಿವಾಸದಲ್ಲಿ ಅಡುಗೆಭಟ್ಟ, ಕಾರ್ ಡ್ರೈವರ್ಗೂ ಕೊರೋನಾ ಪಾಸಿಟಿವ್
ನಿನ್ನೆ ಕಾವೇರಿ ನಿವಾಸಲ್ಲಿರುವವರನ್ನು ಚೆಕ್ ಅಪ್ ಮಾಡುವ ವೇಳೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ ಬಿಎಸ್ವೈ ಹಾಗೂ ಅವರ ಮಗಳು ಪದ್ಮಾವತಿಗೆ ಪಾಸಿಟಿವ್ ಬಂದಿದೆ. ಸಿಎಂ ಹಾಗೂ ಪದ್ಮಾವತಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ