ಬೆಂಗಳೂರು (ಮಾ.27): ದೇಶಾದ್ಯಂತ 21 ದಿನ ಲಾಕ್ಡೌನ್ ಆದೇಶ ಹೊರಡಿಸಲಾಗಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಷ್ಟೇ ಅಲ್ಲ, ಸುಖಾಸುಮ್ಮನೆ ಸುತ್ತಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಈ ಮಧ್ಯೆ ನಗರ ಪೊಲೀಸ್ ಆಯುಕ್ತ ರ್ ಭಾಸ್ಕರ್ ರಾವ್, ಲಾಠಿ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.
“ಸಿ.ಎ.ಆರ್ ಮತ್ತು ಕೆ.ಎಸ್.ಆರ್.ಪಿ ಸಿಬ್ಬಂದಿ ಮಾತ್ರ ಲಾಠಿ ಬಳಸಬಹುದು. ಅದರಲ್ಲೂ ಅಗತ್ಯ ಬಿದ್ದರಷ್ಟೇ ಲಾಠಿ ಉಪಯೋಗಿಸಬೇಕು. ಉಳಿದವರು ಲಾಠಿ ಇಲ್ಲದೆ ಕರ್ತವ್ಯಕ್ಕೆ ತೆರಳಬೇಕು. ದಿನಪತ್ರಿಕೆ ಹಂಚುವ ಹುಡುಗರಿಗೆ, ಫುಡ್ ಡೆಲಿವರಿ ಬಾಯ್ ಗಳಿಗೆ ಅಡ್ಡಿಪಡಿಸಬಾರದು,” ಎಂದು ಸೂಚಿಸಿದ್ದಾರೆ.
ಇನ್ನು, ಬೈಕ್ಗಳಲ್ಲಿ ಅನಗತ್ಯ ತಿರುಗಾಡಿದರೆ ತಿಳಿಹೇಳಬೇಕು ಎಂದಿರುವ ಭಾಸ್ಕರ್ ರಾವ್,“ಬೈಕ್ಗಳಲ್ಲಿ ಯಾರಾದರೂ ಸುಮ್ಮನೆ ತಿರುಗಾಡಿದರೆ ಅವರಿಗೆ ತಿಳಿ ಹೇಳಬೇಕು. ಯಾವ ಕಾರಣಕ್ಕೂ ಲಾಠಿ ಪ್ರಯೋಗ ಮಾಡಬಾರದು. ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ಕಡ್ಡಾಯವಾಗಿ ಬಳಸಬೇಕು,” ಎಂದು ಸೂಚಿಸಿದ್ದಾರೆ.
“ಮೈಕ್ ಸೆಟ್ ಮೂಲಕ ಮನೆಯಿಂದ ಹೊರಗೆ ಬರಬೇಡಿ ಎಂದು ಸಲಹೆ ಸೂಚನೆ ನೀಡಿ. ಮಹಿಳೆಯರು, ಮಕ್ಕಳು, ಹಾಗೂ ವೃದ್ಧರ ಜೊತೆ ಗೌರವಯುತವಾಗಿ ಮಾತನಾಡಿ. ದಿನಸಿ ಅಂಗಡಿ, ಕಿರಾಣಿ ಶಾಪ್, ಮಾಂಸದ ಅಂಗಡಿಯವರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಿ,” ಎಂದು ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ.
ಇನ್ನು, ಬಿಎಂಟಿಸಿ ಬಸ್ನಲ್ಲಿ ತಿರುಗಾಡಲು ಪಾಸ್ ನೀಡಲಾಗುತ್ತಿದೆ. ಯಾರಿಗೆ ಎಷ್ಟು ಪಾಸ್ ನೀಡಬೇಕು ಅಂತ ನಿರ್ಧರಿಸೋ ಹೊಣೆಗಾರಿಕೆ ಆಯಾ ವಲಯದ ಡಿಸಿಪಿಗಳಿಗೆ ನೀಡಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ