• Home
  • »
  • News
  • »
  • coronavirus-latest-news
  • »
  • ಬೆಂಗಳೂರಿನ ಹೋಟೆಲ್, ಮಾಲ್, ಚಿತ್ರಮಂದಿರದಲ್ಲಿ ಮಾಸ್ಕ್ ಧರಿಸದಿದ್ದರೆ 1 ಲಕ್ಷ ರೂ.ವರೆಗೆ ದಂಡ!

ಬೆಂಗಳೂರಿನ ಹೋಟೆಲ್, ಮಾಲ್, ಚಿತ್ರಮಂದಿರದಲ್ಲಿ ಮಾಸ್ಕ್ ಧರಿಸದಿದ್ದರೆ 1 ಲಕ್ಷ ರೂ.ವರೆಗೆ ದಂಡ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bangalore Mask Fine: ಬೆಂಗಳೂರಿನ ಹೋಟೆಲ್, ಕಲ್ಯಾಣ ಮಂಟಪ, ಚಿತ್ರಮಂದಿರ, ಮಾಲ್, ಸಮಾರಂಭ, ಅಂಗಡಿ ಮುಂಗಟ್ಟುಗಳಲ್ಲಿ ಜನರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳದಿದ್ದರೆ ಅದರ ಮಾಲೀಕರು 10 ಸಾವಿರ ರೂ.ನಿಂದ 1 ಲಕ್ಷದವರೆಗೆ ದಂಡ ಪಾವತಿಸಬೇಕಾಗುತ್ತದೆ.

  • Share this:

ಬೆಂಗಳೂರು (ಡಿ. 6): ಲಾಕ್​ಡೌನ್ ತೆರವಾದ ನಂತರ ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಿ, ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ಹಲವೆಡೆ ಜನರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಓಡಾಡುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ದುಬಾರಿ ದಂಡ ವಿಧಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಆ ದಂಡದ ಪ್ರಮಾಣವನ್ನು ಇಳಿಸಲಾಗಿತ್ತು. ಆದರೆ, ಇದರಿಂದ ಮತ್ತೆ ಜನರು ನಿರ್ಲಕ್ಷ್ಯದಿಂದ ಓಡಾಡತೊಡಗಿದ್ದರಿಂದ ಬೆಂಗಳೂರಿನ ಹೋಟೆಲ್, ಮಾಲ್, ಚಿತ್ರಮಂದಿರ ಮುಂತಾದೆಡೆ ದುಬಾರಿ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಆದರೆ, ಈ ದಂಡವನ್ನು ಅಂಗಡಿ, ಹೋಟೆಲ್, ಚಿತ್ರಮಂದಿರಗಳ ಮಾಲೀಕರು ಪಾವತಿಸಬೇಕಾಗುತ್ತದೆ.


ಬೆಂಗಳೂರಿನ ಹೋಟೆಲ್, ಕಲ್ಯಾಣ ಮಂಟಪ, ಚಿತ್ರಮಂದಿರ, ಮಾಲ್, ಸಮಾರಂಭ, ಅಂಗಡಿ ಮುಂಗಟ್ಟುಗಳಲ್ಲಿ ಜನರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳದಿದ್ದರೆ ಅದರ ಮಾಲೀಕರು ದುಬಾರಿ ದಂಡ ಪಾವತಿಸಬೇಕಾಗುತ್ತದೆ. ಮಾಸ್ಕ್ ಧರಿಸದವರು ಕಂಡುಬಂದರೆ ಪರಿಶೀಲಿಸಬೇಕು. ಒಂದುವೇಳೆ ಎಚ್ಚರ ವಹಿಸದಿದ್ದರೆ ಅಲ್ಲಿಯ ಮಾಲೀಕರು, ಆಯೋಜಕರಿಗೆ ದಂಡ ವಿಧಿಸಲಾಗುವುದು.


ಸಾಂಕ್ರಮಿಕ ರೋಗಗಳ ಸುಗ್ರೀವಾಜ್ಞೆ ನಿಯಮದನ್ವಯ ನಿಯಮ ಉಲ್ಲಂಘನೆ ಮಾಡಿದರೆ ಈ ದಂಡ ವಿಧಿಸಲಾಗುವುದು. ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರತ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡ್‌ ಮಾರ್ಷಲ್ ದಂಡ ವಿಧಿಸಿಬಹುದು. 10 ಸಾವಿರ ರೂ.ನಿಂದ 1 ಲಕ್ಷದವರೆಗೆ ದಂಡ ವಿಧಿಸಲು ಬಿಬಿಎಂಪಿ ಕಮಿಷನರ್ ಮಂಜುನಾಥ್‌ ಪ್ರಸಾದ್ ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿಂದು ಮೋಡ ಕವಿದ ವಾತಾವರಣ, ಸಂಜೆ ಮಳೆ ಸಾಧ್ಯತೆ


ಯಾರ್ಯಾರಿಗೆ ಎಲ್ಲೆಲ್ಲಿ ದಂಡ?:
ಸ್ವಸಹಾಯ ಪದ್ಧತಿ ದರ್ಶಿನಿ ಹೋಟೆಲ್, ‌ಅಂಗಡಿ ಮುಂಗಟ್ಟುಗಳಲ್ಲಿ ಜನರು ಮಾಸ್ಕ್ ಧರಿಸದಿದ್ದರೆ 5,000 ರೂ. ದಂಡ, ಹವಾ ನಿಯಂತ್ರಿತವಲ್ಲದ ರೆಸ್ಟೋರೆಂಟ್, ಪಾರ್ಟಿ ಹಾಲ್, ಖಾಸಗಿ ಬಸ್ ನಿಲ್ದಾಣ, ಸಾರ್ವಜನಿಕ‌ ಸ್ಥಳಗಳಲ್ಲಿ 25,000 ರೂ., ಹವಾನಿಯಂತ್ರಿತ ರೆಸ್ಟೋರೆಂಟ್, ಪಾರ್ಟಿ ಹಾಲ್, ಬ್ರಾಂಡೆಡ್‌ ಶಾಪ್, ಸಿನಿಮಾ ‌ಹಾಲ್, ಮಲ್ಟಿಪ್ಲೆಕ್ಸ್, ಶಾಪಿಂಗ್‌ ಮಾಲ್​ಗಳಲ್ಲಿ 1 ಲಕ್ಷ ರೂ. ದಂಡ, ಸಾರ್ವಜನಿಕ‌ ಸಭೆ ಸಮಾರಂಭ, ರ್ಯಾಲಿ, ಕೂಟ ಆಚರಣೆಯ ಆಯೋಜಕರಿಗೆ - 50,000 ರೂ. ದಂಡ ವಿಧಿಸಲು ಬಿಬಿಎಂಪಿ ಆದೇಶಿಸಿದೆ.


ಬಿಬಿಎಂಪಿಯ ಈ ದುಬಾರಿ ದಂಡ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. 200-300 ರೂ. ದುಡಿಯುವ ಬೀದಿ ಬದಿ ವ್ಯಾಪಾರಿಗಳಿಗೆ 5,000 ರೂ. ದಂಡ ವಿಧಿಸಿದ್ದು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ನಡೆಸಲು ಬೇರೆ ದಾರಿ ಹುಡುಕಿಕೊಳ್ಳಲಿ. ಅದನ್ನು ಬಿಟ್ಟು ಈ ರೀತಿಯ ದಂಧೆಗೆ ಇಳಿಯುವುದು ಸರಿಯಲ್ಲ. ಈ ನಿಯಮವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು