ಬೆಂಗಳೂರು(ಮೇ 15): ದೇಶದಲ್ಲಿ ಕೊರೋನಾ ಸೋಂಕು ಅಟ್ಟಹಾಸ ಶುರುವಾದ ಬಳಿಕ ಎಷ್ಟೋ ಜನ ಅಕ್ಷರಶಃ ಅನಾಥ ಸ್ಥಿತಿಗೆ ತಲುಪಿದ್ರು. ಹೊತ್ತು ಊಟಕ್ಕೂ ಪರದಾಟ, ಮನೆ ಮಠ, ಬಂಧುಬಳಗ ಎಲ್ಲ ಕಳ್ಕೊಂಡು ಬೀದಿಗೆ ಬಂದಿದ್ದರು. ಅದೇ ರೀತಿ ಇಲ್ಲೊಂದು ವಿಶೇಷ ವರ್ಗದ ಜನ ಮಾಹಾಮಾರಿ ಕೊರೋನಾ ಕಾಟಕ್ಕೆ ನಲುಗಿ ಹೋಗಿದ್ದಾರೆ. ಮೊದಲೇ ಮಾತು ಬಾರದೆ ಮೂಕರಾಗಿದ್ದ ಅವರು ಕೊರೋನಾದಿಂದ ಸಂಪೂರ್ಣ ಮೂಗರಾಗಿಹೋಗಿದ್ದಾರೆ. ತಮ್ಮ ಜೊತೆ ದಿನನಿತ್ಯ ಮಾತಾನಾಡುತ್ತಿದ್ದ ತಮ್ಮಂಥ ಎಷ್ಟೋ ಜನರು ಮಾಸ್ಕ್ ಹಾಕಿಕೊಂಡು ಮಾತಾಡುತ್ತಿದ್ದರಿಂದ ಇವರೆಲ್ಲ ಏನೂ ತೋಚದ ಸ್ಥಿತಿಗೆ ತಲುಪಿದ್ದಾರೆ.
ಇಂತಹ ಮಾತು ಬಾರದ ಜನರಿಗಾಗಿಯೇ ಹೊಸ ರೀತಿಯ ಮಾಸ್ಕ್ವೊಂದು ತಯಾರಾಗಿದೆ. ಅದೇ ಸ್ಮೈಲ್ ಮಾಸ್ಕ್. ಹೌದು ರಾಜ್ಯದಲ್ಲಿ ಕೊರೋನಾ ಸೋಂಕು ಹರಡುತ್ತಿದ್ದಂತೆ ಪ್ರತಿಯೊಬ್ಬರೂ ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಆದೇಶ ಹೊರಡಿಸಿತು. ಸರ್ಕಾರದ ಸೂಚನೆಯಂತೆ ಎಲ್ಲರೂ ಮಾಸ್ಕ್ ಧರಿಸಿದ್ದರಿಂದ ಈ ವಿಶೇಷ ವ್ಯಕ್ತಿಗಳು ಅವರ ಮಾತು ಅಲಿಸಲಾಗದೇ ಅವರು ಏನ್ ಹೇಳ್ತಿದ್ದಾರೆ ಅನ್ನೋದು ಅರ್ಥವಾಗದೇ ಅಕ್ಷರಶಃ ದಿಕ್ಕು ತೋಚದಂತಾಗಿದ್ರಂತೆ.
ಈ ವೇಳೆ ಮಾತು ಬಾರದ ವ್ಯಕ್ತಿಗಳು ಮತ್ತು ಕಿವಿ ಕೇಳದ ವ್ಯಕ್ತಿಗಳಿಗಾಗಿ ಡಿಆರ್ಡಿಒ ವಿಜ್ಞಾನಿ ಹಾಗೂ ಬೆಂಗಳೂರಿನ ಸಂಪಂಗಿರಾಮನಗರ ನಿವಾಸಿ ವಿನೋದ್ ಕರ್ತವ್ಯ ಎಂಬುವರು ಹೊಸ ಪ್ರಯತ್ನವೊಂದನ್ನ ಮಾಡಿದ್ದಾರೆ. ಈ ವಿಶೇಷ ವರ್ಗದವರಿಗಾಗಿಯೇ ಹೊಸ ಸ್ಮೈಲ್ ಮಾಸ್ಕ್ ಅನ್ನ ವಿನೋದ್ ಸಿದ್ದಪಡಿಸಿದ್ದಾರೆ.
ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ಮಾರ್ಗಸೂಚಿ ಸಿದ್ಧ; ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿ 17 ನಿಯಮ ಕಡ್ಡಾಯ
ವಿನೋದ್ ಕರ್ತವ್ಯ ಕೊರೋನಾ ವಾರಿಯರ್ ಆಗಿ ಡಿಐಪಿಆರ್ ನಲ್ಲಿ ಕಳೆದ ಎರಡು ತಿಂಗಳಿಂದ ಕೆಲಸ ಮಾಡ್ತಿದ್ದಾರೆ. ಅವರ ಜೊತೆ ಕೆಲಸ ಮಾಡ್ತಿದ್ದ ಸಹೋದ್ಯೋಗಿಯೊಬ್ಬರಿಗೆ ಮಾತು ಬರುತ್ತಿಲ್ಲ. ಈ ವೇಳೆ ಅವರು ತಮ್ಮ ಕಷ್ಟವನ್ನ ವಿನೋದ್ ಬಳಿ ಹೇಳಿಕೊಂಡಿದ್ದಾರೆ. ತಮ್ಮ ಜೊತೆ ಪ್ರತಿನಿತ್ಯ ವ್ಯವಹರಿಸುವ ಜನರು ಮಾಸ್ಕ್ ಧರಿಸೋದ್ರಿಂದ ಅವರು ಏನು ಮಾತಾಡ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಅಂದಿದ್ದಾರೆ. ಯಾಕಂದ್ರೆ ತಮ್ಮ ಜೊತೆ ಮಾತಾಡುವ ವ್ಯಕ್ತಿಯ ತುಟಿಗಳ ಚಲನೆಯನ್ನು ಗಮನಿಸಿ ಅವರು ಏನು ಹೇಳಿದ್ರು ಅನ್ನೋದನ್ನ ಅರ್ಥೈಸಿಕೊಳ್ಳಲು ಈ ವಿಶೇಷ ವ್ಯಕ್ತಿಗಳಿಗೆ ಸಾಧ್ಯವಿದೆ. ಆದರೆ, ಮಾಸ್ಕ್ ಧರಿಸಿದ ವ್ಯಕ್ತಿಯ ತುಟಿಯ ಚಲನವಲನ ಅರಿಯಲು ಸಾಧ್ಯವಾಗುವುದಿಲ್ಲ. ಅವರಂಥ ಮೂಗರೊಂದಿಗಿನ ಸಂವಾದದಲ್ಲೂ ಈಗ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಗೆ ಒಂದು ಪರಿಹಾರ ಹುಡುಕಲು ವಿನೋದ್ ಕರ್ತವ್ಯ ಅವರ ಪ್ರಯತ್ನಗಳಿಗೆ ನೆರವಾಗಿದ್ದು ಅವರ ಕುಟುಂಬವರ್ಗ.
ತನ್ನ ಸ್ನೇಹಿತನ ಮೌನರೋಧನೆ ಕಂಡ ವಿನೋದ್ ಕರ್ತವ್ಯ ಕೂಡಲೇ ತನ್ನ ತಂದೆ ತಾಯಿ, ಪತ್ನಿಯ ಜೊತೆಗೂಡಿ ಒಂದು ಹೊಸ ವಿನ್ಯಾಸದ ಮಾಸ್ಕ್ ತಯಾರಿಗೆ ಸಿದ್ದತೆ ನಡೆಸಿದರು. ಬಾಯಿ ತುಟಿಯ ಚಲನವಲನ ಕಾಣುವಂತ ಮಾಸ್ಕ್ ತಯಾರಿಗೆ ಮುಂದಾದರು. ಜನ ಮಾತಾಡೋದನ್ನ ಮಾತು ಬಾರದ ವ್ಯಕ್ತಿಗಳು ಗಮನಿಸುವಂತೆ ಮಾಸ್ಕ್ ಡಿಸೈನ್ ಮಾಡಿದ್ರು. ಅದಕ್ಕಾಗಿ ಬಟ್ಟೆ ಹಾಗೂ ತೆಳು ವಿಂಡ್ ಶೀಟ್ ಬಳಸಿದರು. ಬಟ್ಟೆ ಹಾಗೂ ಸ್ಕ್ರಾಚ್ ಪ್ರೂಫ್ ಟ್ರಾನ್ಸ್ಪರೆಂಟ್ ಶೀಟ್ನಲ್ಲಿ ಮಾಸ್ಕ್ ಸಿದ್ದಪಡಿಸಿ ವ್ಯಕ್ತಿಯ ಬಾಯಿ ಮತ್ತು ಮೂಗು ಕಾಣುವಂತೆ ಮಾಸ್ಕ್ ಡಿಸೈನ್ ಮಾಡಿದ್ದಾರೆ. ಬಳಿಕ ಅದಕ್ಕೆ ಸ್ಮೈಲ್ ಮಾಸ್ಕ್ ಅಂತ ಹೆಸರು ಇಟ್ಟು ಕೆಲವರಿಗೆ ಸ್ಯಾಂಪಲ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವೈದ್ಯರ ಕ್ವಾರಂಟೈನ್ಗೆ ತತ್ವಾರ; ಸರ್ಕಾರದ ಮನವಿಗೆ ಕ್ಯಾರೇ ಅಂತಿಲ್ಲ ಸೋಷಿಯಲ್ ಕ್ಲಬ್ಗಳು
ಸದ್ಯ ಹೊಸ ವಿನ್ಯಾಸದ ಈ ಸ್ಮೈಲ್ ಮಾಸ್ಕ್ಗೆ ಹಲವು ವ್ಯಕ್ತಿಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ತಂದೆ ತಾಯಿ, ಪತ್ನಿ ಜೊತೆಗೂಡಿ ಮಾಸ್ಕ್ ಡಿಸೈನ್ ಮಾಡಿ ಅಲ್ಲಿಯೇ ಇರುವ ಟೈಲರ್ ಹತ್ತಿರ ಹೊಲಿಗೆ ಹಾಕಿಸಿ ಅಗತ್ಯ ಇರೋ ಮಾತು ಬಾರದ ವ್ಯಕ್ತಿಗಳಿಗೆ ಕೊಟ್ಟಿದ್ದಾರೆ. ಈಗಾಗಲೇ ಹಲವಾರು ಮಂದಿಗೆ ಈ ಸ್ಮೈಲ್ ಮಾಸ್ಕ್ ರೆಡಿ ಮಾಡಿ ವಿತರಿಸಿದ್ದಾರೆ. ವಿನೋದ್ ಕರ್ತವ್ಯ ಅವರ ಈ ಕೆಲಸ ಕಂಡು ಸರ್ಕಾರದ ಡೆಫ್ ಆಂಡ್ ಡಂಬ್ ವಿಭಾಗದ ಕಾರ್ಯದರ್ಶಿಗಳು 500 ಮಾಸ್ಕ್ ಸಿದ್ದಪಡಿಸಿ ಕೊಡುವಂತೆ ಸೂಚನೆ ನೀಡಿದ್ದಾರೆ.
ಮಾತು ಬಾರದವರು ಮಾಸ್ಕ್ ಧರಿಸಿಕೊಂಡು ತಮ್ಮತಮ್ಮಲ್ಲಿ ಮಾಮೂಲಿಯಂತೆ ಸಂವಹನ ನಡೆಸಲು ಈ ಸ್ಮೈಲ್ ಮಾಸ್ಕ್ ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ವಿನೋದ್ ಕರ್ತವ್ಯ ಅವರು ಮಾತುಬಾರದ, ಕಿವಿಕೇಳದ ಜನರ ಧ್ವನಿಯಾಗಿದ್ದಾರೆ. ಅವರ ಈ ಕಾರ್ಯ ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ