Bangalore Lockdown: ಇಂದು ರಾತ್ರಿಯಿಂದಲೇ ಲಾಕ್ ಡೌನ್ ಹಿನ್ನೆಲೆ ; ಬೆಂಗಳೂರಿನಿಂದ ತಮ್ಮ ಊರುಗಳತ್ತ ಮುಖಮಾಡಿದ ಜನರು

ಬೆಂಗಳೂರು ಲಾಕ್​​ಡೌನ್​: ಗುಳೆ ಹೊರಟಿರುವವರಲ್ಲಿ ಬಹುತೇಕರು ನಿನ್ನೆಯೇ ತಮ್ಮ ಮನೆಯಲ್ಲಿದ್ದ ಲಗೇಜ್‌ಗಳನ್ನ ಕಳುಹಿಸಿ ಇಂದು ತಮ್ಮಲ್ಲಿ ಬೈಕ್‌ ಕಾರುಗಳಲ್ಲಿ ಊರಿನತ್ತ ಮುಖ ಮಾಡಿದ್ದಾರೆ

ಬೆಂಗಳೂರಿನಿಂದ ಊರುಗಳತ್ತ ವಾಹನಗಳಲ್ಲಿ ತೆರಳುತ್ತಿರುವ ಜನರು

ಬೆಂಗಳೂರಿನಿಂದ ಊರುಗಳತ್ತ ವಾಹನಗಳಲ್ಲಿ ತೆರಳುತ್ತಿರುವ ಜನರು

  • Share this:
ಬೆಂಗಳೂರು(ಜುಲೈ.14): ರಾಜ್ಯದಲ್ಲಿ ಕೊರೋನಾ ವೈರಸ್ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಪ್ರತಿದಿನ 2000 ಲೆಕ್ಕದಲ್ಲಿ ಹೊಸ ಸೋಂಕಿತರು ದೃಢಪಡುತ್ತಿದ್ದರೆ, ರಾಜ್ಯ ರಾಜಧಾನಿಯಲ್ಲಿ ಪ್ರತಿದಿನ 1500 ಗಡಿಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಇಂದು ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದ್ದು, ಜನ ಬೆಂಗಳೂರು ಸಹವಾಸ ಸಾಕಪ್ಪ ಎಂದು ಗಂಟು ಮೂಟೆ ಸಮೇತ ತಮ್ಮೂರುಗಳತ್ತ ಮುಖ ಮಾಡಿದ್ದಾರೆ.

ಸೋಮವಾರ ಮುಂಜಾನೆ 5 ಗಂಟೆಯಿಂದ ಗುಳೆ ಹೋಗುವುದು ಪ್ರಾರಂಭವಾಗಿದ್ದು, ಜನರು ತಮ್ಮ ಮನೆಯಲ್ಲಿದ್ದ ಸಾಮಾಗ್ರಿಗಳನ್ನ ಗಂಟುಮೂಟೆ ಕಟ್ಟಿಕೊಂಡು ಸ್ವಂತ ವಾಹನಗಳು, ಕಾರು, ಕ್ಯಾಂಟರ್, ಟಾಟಾ ಏಸ್‌ ವಾಹನಗಳಲ್ಲಿ ತಮ್ಮೂರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳಲು ಬಂದಿದ್ದ ಜನರು, ಕೊರೋನಾ ಸೋಂಕಿನಿಂದ ಭಯಬಿದ್ದಿದ್ದಾರೆ.

ಅಷ್ಟೆ ಅಲ್ಲ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ಕೂಲಿ ನಾಲಿಯಿಲ್ಲದೆ ನಗರ ಬಿಟ್ಟು ಹಳ್ಳಿಗಳನ್ನ ಸೇರುವ ಪರಿಸ್ಥಿತಿಯಿಂದ ಬದುಕಿದ್ರೆ ಬಾಳೆ ಹಣ್ಣು ಮಾರಿಕೊಂಡು ಊರಿನಲ್ಲಿ ಜೀವನ ಮಾಡ್ತೀವಿ ಅಂತ ಊರುಗಳತ್ತ ಗುಳೆ‌ಹೊರಟಿದ್ದಾರೆ.

ಒಮ್ಮೆಲೆ ಸಾಕಷ್ಟು ಜನ ಬೆಂಗಳೂರು ತೊರೆಯಲು ಪ್ರಾರಂಭಿಸಿದ ಹಿನ್ನೆಲೆ ಟೋಲ್‌ಗಳಲ್ಲಿ ಟ್ರಾಫಿಕ್ ಉಂಟಾಗಿತ್ತು, ಇದನ್ನ ಗಮನಿಸಿದ ಪೊಲೀಸ್ ಇಲಾಖೆ ಮುಂದಿನ ಆದೇಶದವರೆಗೂ ತುಮಕೂರು ರಸ್ತೆಯ ನವಯುಗ ಹಾಗೂ ಜಾಸ್ ‌ಟೋಲ್‌ಸೇರಿದಂತೆ ಹಾಸನ ರಸ್ತೆಯ ಲ್ಯಾಂಕೋ ‌ಟೋಲ್‌ನಲ್ಲಿ ಸುಂಕ ವಸೂಲಾತಿಗೆ ಬ್ರೇಕ್ ಹಾಕಿದೆ.

ಗುಳೆ ಹೊರಟಿರುವವರಲ್ಲಿ ಬಹುತೇಕರು ನಿನ್ನೆಯೇ ತಮ್ಮ ಮನೆಯಲ್ಲಿದ್ದ ಲಗೇಜ್‌ಗಳನ್ನ ಕಳುಹಿಸಿ ಇಂದು ತಮ್ಮಲ್ಲಿ ಬೈಕ್‌ ಕಾರುಗಳಲ್ಲಿ ಊರಿನತ್ತ ಮುಖ ಮಾಡಿದ್ದಾರೆ. ಇಂದು ರಾತ್ರಿ 8 ಗಂಟೆವರೆಗೂ ಎಲ್ಲರಿಗೂ ಆವಕಾಶ ಇದ್ದು, ಇಂದು ಸಹ ಸಾಗರೋಪಾದಿಯಲ್ಲಿ ಜನ ಬೆಂಗಳೂರು ಬಿಟ್ಟು ತಮ್ಮೂರುಗಳತ್ತ ಹೊರಟಿದ್ದಾರೆ.

ಇದನ್ನೂ ಓದಿ : ಕೋವಿಡ್​ಗೆ ಸಜ್ಜಾಗದ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಕೇಸ್, ಲೈಸೆನ್ಸ್ ರದ್ದು; ಸಚಿವ ಕೆ.ಸುಧಾಕರ್ ಎಚ್ಚರಿಕೆ

8ನೇ ಮೈಲಿ ಜಾಲಹಳ್ಳಿ ಹೆಸರಘಟ್ಟ ಭಾಗದ ಕೆಲ ಜನರು ತಮ್ಮ ಲಗೇಜ್‌ಗಳನ್ನ ವಾಹನಹಳಲ್ಲಿ ಕಳುಹಿಸಿ ಕೆಎಸ್​ಆರ್​ಟಿಸಿ ಬ‌ಸ್‌ನಲ್ಲಿ ತಮ್ಮೂರುಗಳಿಗೆ ತೆರಳಲು ನವಯುಗ ಟೋಲ್‌ಬಳಿ ನಿಂತಿದ್ದರು. ಆದರೆ, ಬಸ್‌‌ಗಳಲ್ಲಿ ಸೋಂಕು ಹರಡದಂತೆ ಕ್ರಮ ವಹಿಸಿದ ಸಲುವಾಗಿ ಸೀಮಿತ ಸೀಟುಗಳಿಗೆ ಅವಕಾಶ ಮಾತ್ರ ಕಲ್ಪಿಸಿರುವುದರಿಂದ ಬಹುತೇಕ ಬಸ್‌ಗಳು ಮೆಜೆಸ್ಟಿಕ್ ಬಸ್‌ನಿಲ್ದಾಣದಲ್ಲಿ ಭರ್ತಿಯಾಗಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಗಂಟೆಗಟ್ಟಲೆ ಕಾಯ್ದ ಜನರು ಬಂದ ದಾರಿಗೆ ಸುಂಕ ಇಲ್ಲ ಎಂದುಕೊಂಡು ಮತ್ತೆ ಮೆಜೆಸ್ಟಿಕ್ ಕಡೆ ಪ್ರಯಾಣ ಬೆಳೆಸಿ ತಮ್ಮ ಊರುಗಳಿಗೆ ತೆರಳುವ ಬಸ್‌ ಹತ್ತಿ ಹೊರಟರು.



ರಾಜ್ಯದ 23 ಜಿಲ್ಲೆಗಳಿಗೆ ಬೆಂಗಳೂರು ನೆಲಮಂಗಲ ರಸ್ತೆ ಮುಖ್ಯದ್ವಾರವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಲಗೇಜ್ ತುಂಬಿಕೊಂಡು ಊರುಗಳತ್ತ ಮುಖ ಮಾಡಿವೆ. ಈಗ ಊರುಗಳಿಗೆ ಹೋಗುತ್ತಿರುವ ಬಹುಪಾಲು ಜನ ಮತ್ತೆ ಬೆಂಗಳೂರಿಗೆ ಬರುವ ಮನಸ್ಸು ಮಾಡುವುದು ಅನುಮಾನವಾಗಿದೆ.
Published by:G Hareeshkumar
First published: