ಬೆಂಗಳೂರು (ಏ. 19): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಬೆಂಗಳೂರು ಕೊರೋನಾ ಹಬ್ ಆಗಿ ಪರಿವರ್ತನೆಯಾಗಿದೆ. ನಗರದಲ್ಲಿ ದಿನನಿತ್ಯ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಅಂತ್ಯಕ್ರಿಯೆ ಮಾಡಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ಗಳು ಕೂಡ ಸಿಗುತ್ತಿಲ್ಲ, ಆ್ಯಂಬುಲೆನ್ಸ್ ಸೇವೆಯೂ ದೊರಕದಂತಾಗಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರೂ ಸೋಂಕು ಹರಡುವಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಜನರು ಇನ್ನಾದರೂ ಎಚ್ಚೆತ್ತುಕೊಂಡು ಅನಗತ್ಯವಾಗಿ ಹೊರಗೆ ಸಂಚಾರ ಮಾಡುವುದನ್ನು, ಗುಂಪಾಗಿ ಸೇರುವುದನ್ನು ಕಡಿಮೆ ಮಾಡದಿದ್ದರೆ ಆಪತ್ತು ಖಂಡಿತ!
ಬೆಂಗಳೂರಿನಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಇರೋ ಐಸಿಯು ಬೆಡ್ಗಳು ಭರ್ತಿಯಾಗಿವೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ 323 ಐಸಿಯು ಬೆಡ್, 265 ವೆಂಟಿಲೇಟರ್ ಇರೋ ಐಸಿಯು ಬೆಡ್ ಗಳಿವೆ. ಈ ಪೈಕಿ 316 ಐಸಿಯು ಬೆಡ್ ಗಳು ಫುಲ್, 260 ವೆಂಟಿಲೇಟರ್ ಇರೋ ಐಸಿಯು ಬೆಡ್ಗಳು ಭರ್ತಿಯಾಗಿವೆ. ನಿನ್ನೆ ರಾತ್ರಿ ಕೇವಲ 7 ಐಸಿಯು ಬೆಡ್ ಗಳು ಖಾಲಿ ಇದ್ದವು. 5 ವೆಂಟಿಲೇಟರ್ ಇರೋ ಐಸಿಯು ಬೆಡ್ ಗಳು ಖಾಲಿ ಇದ್ದವು. ಇದೀಗ ಖಾಲಿ ಇದ್ದ ಐಸಿಯು, ವೆಂಟಿಲೇಟರ್ ಬೆಡ್ಗಳು ಭರ್ತಿ ಆಗಿವೆ.
ಬಿಬಿಎಂಪಿ ಅಧಿಕಾರಿಗಳು ನಿನ್ನೆ ಐಸಿಯು ಬೆಡ್ ಗಾಗಿ ಪರದಾಡಿದರು. ಐಸಿಯು ಬೆಡ್ ಗಳು ಫುಲ್ ಆಗಿರುವ ಕಾರಣ ಸೋಂಕಿತರನ್ನು ಶಿಫ್ಟ್ ಮಾಡಲು ಅಧಿಕಾರಿಗಳು ಪರದಾಡ ಬೇಕಾಯಿತು. ಐಸಿಯು ಹಾಸಿಗೆಗಳು ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ. ಐಸಿಯು ಹಾಸಿಗೆ ವ್ಯವಸ್ಥೆ ಮಾಡಲು ಸರ್ಕಾರ ವಿಶೇಷ ತಂಡ ರಚನೆ ಮಾಡಿತ್ತು. ಐಎಎಸ್ ಹಾಗೂ ಉನ್ನತ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಆರೋಗ್ಯ ಇಲಾಖೆ ರಚನೆ ಮಾಡಿತ್ತು.
ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದ್ದು, ನಿನ್ನೆ ಬೆಂಗಳೂರಿನ ಸುಮನಹಳ್ಳಿ ಚಿತಾಗಾರದಲ್ಲಿ 31 ಕೋವಿಡ್ ಮೃತದೇಹಗಳ ದಹನ ಮಾಡಲಾಗಿದೆ. ಬೆಳಗ್ಗೆಯಿಂದಲೂ ತಡರಾತ್ರಿವರೆಗೂ ಸಿಬ್ಬಂದಿಗಳು ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ. ಇಂದು ಬೆಳಗಿನ ಜಾವ 4.30ವರೆಗೂ ಮೃತದೇಹ ದಹನ ಮಾಡಲಾಗಿದೆ. ಮತ್ತೆ ಇಂದು 9 ಗಂಟೆಯಿಂದ ದಹನ ಪ್ರಕ್ರಿಯೆ ಶುರುವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ