ಬೆಂಗಳೂರು (ಜು. 7): ಕೊರೋನಾ ವೈರಸ್ ರಾಜ್ಯದ ಉದ್ದಗಲಕ್ಕೂ ತನ್ನ ಬಾಹುಗಳನ್ನು ಚಾಚಿದೆ. ಬಡವ, ಸಿರಿವಂತ, ಪೊಲೀಸರು, ವೈದ್ಯರು, ಶಾಸಕರು ಸೇರಿದಂತೆ ಯಾರನ್ನೂ ಬೆಂಬಿಡದೆ ತನ್ನ ಕಪಿಮುಷ್ಟಿಯಲ್ಲಿ ಸಿಲುಕಿಸಿಕೊಂಡಿದೆ. ಚಿತ್ರರಂಗ ಹಾಗೂ ರಾಜಕಾರಣಿಗಳನ್ನು ಬಿಡದೆ ಈ ವೈರಸ್ ಕಾಡುತ್ತಿದೆ. ನಿನ್ನೆಯಷ್ಟೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ತಮಗೆ ಕೊರೋನಾ ಸೋಂಕು ತಗುಲಿರುವುದನ್ನು ಸಾಮಾಜಿಕ ಜಾಲತಾಣದ ಮುಖಾಂತರ ದೃಢಪಡಿಸಿದ್ದರು, ಇದರ ಬೆನ್ನಲ್ಲೇ ಚಂದನವನದ ಹಿರಿಯ ಹಾಸ್ಯ ನಟ ದೊಡ್ಡಣನವರಿಗೆ ಕೊರೋನಾ ಆತಂಕ ಎದುರಾಗಿದೆ.
ಕಳೆದ ಗುರುವಾರ ವಿಧಾನಸೌಧದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಭೆ ನಡೆಸಿದ್ದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸಹ ಪಾಲ್ಗೊಂಡಿದ್ದರು. ಸುಮಲತಾ ಅಂಬರೀಶ್ ಸಂಪರ್ಕಕ್ಕೆ ಬಂದಿದ್ದರಿಂದ ದೊಡ್ಡಣ್ಣನವರಿಗೂ ಕೊರೋನಾ ಆತಂಕ ಶುರುವಾಗಿದೆ. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾ ಅನುಮತಿ ನೀಡಿ ಆದೇಶ ಪತ್ರಕ್ಕೆ ಸಹಿ ಹಾಕಿದ್ದರು. ಈ ವೇಳೆ ದೊಡ್ಡಣ್ಣ ಸಹ ಜೊತೆಯಲ್ಲಿ ಇದ್ದಿದ್ದರಿಂದ ಅವರಿಗೂ ಸಹ ಆತಂಕ ಎದುರಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ