ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆ ಮುಂದಿನ ಫುಟ್​​ಪಾತ್​ನಲ್ಲೇ ಇಡೀ ದಿನ ನರಳಾಡಿದ ಸೋಂಕಿತ ಮಹಿಳೆ..!

ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ತಗುಲಿ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ಆಸ್ಪತ್ರೆಗೆ ಬಂದಾಗಲೇ ತೀವ್ರ ಜ್ವರದಿಂದ ಮಹಿಳೆ ಬಳಲುತ್ತಿದ್ದರು. ನಿತ್ರಾಣಗೊಂಡು ಸಹಾಯಕ್ಕಾಗಿ ಆಸ್ಪತ್ರೆಯವರ ಬಳಿ ಅಂಗಲಾಚಿದ್ದಾರೆ.

ಫುಟ್​​ಪಾತ್​ನ ಬೆಂಚಿನ ಮೇಲೆ ಮಲಗಿದ ಮಹಿಳೆ

ಫುಟ್​​ಪಾತ್​ನ ಬೆಂಚಿನ ಮೇಲೆ ಮಲಗಿದ ಮಹಿಳೆ

 • Share this:
  ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದ್ದು, ಸೋಂಕಿತರು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 58 ವರ್ಷದ ಸೋಂಕಿತ ಮಹಿಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಇಡೀ ದಿನ ಆಸ್ಪತ್ರೆ ಹೊರಗಿನ ಬೆಂಚ್ ಮೇಲೆ ನರಳಾಡಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

  ಚಿಕಿತ್ಸೆ ಸಿಗದೆ ಸೋಂಕಿತ ಮಹಿಳೆ ಫುಟ್ ಪಾತ್ ಮೇಲೆ ನರಳಾಡಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್​ಗೆ ಒಳಗಾಗುತ್ತಿದ್ದರು. ಕಳೆದ ಬಾರಿ ಡಯಾಲಿಸಿಸ್​ಗಾಗಿ ಬಂದಿದ್ದಾಗ ಮಹಿಳೆಯ ಸ್ಯಾಂಪಲ್ ಸಂಗ್ರಹಿಸಿ ಕೋವಿಡ್ ಟೆಸ್ಟ್​ಗೆ ಕಳುಹಿಸಲಾಗಿತ್ತು. ನಿನ್ನೆ ಮತ್ತೆ ಡಯಾಲಿಸಿಸ್​ಗೆ ಬಂದಾಗ ನಿಮ್ಮ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಖಾಸಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

  ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ತಗುಲಿ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ಆಸ್ಪತ್ರೆಗೆ ಬಂದಾಗಲೇ ತೀವ್ರ ಜ್ವರದಿಂದ ಮಹಿಳೆ ಬಳಲುತ್ತಿದ್ದರು. ನಿತ್ರಾಣಗೊಂಡು ಸಹಾಯಕ್ಕಾಗಿ ಆಸ್ಪತ್ರೆಯವರ ಬಳಿ ಅಂಗಲಾಚಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯವರು ಮಹಿಳೆಯನ್ನು ಆಸ್ಪತ್ರೆಯೊಳಕ್ಕೆ ಬಿಟ್ಟುಕೊಂಡಿಲ್ಲ. ಪಿಪಿಇ ಕಿಟ್ ಧರಿಸಿ ತಕ್ಷಣಕ್ಕೆ ಮಹಿಳೆಗೆ ಚಿಕಿತ್ಸೆ ನೀಡಲೂ ಮುಂದಾಗಿಲ್ಲ. ನಮ್ಮದು ಕೋವಿಡ್ ಆಸ್ಪತ್ರೆಯಲ್ಲ, ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿದ್ದಾರೆ.

  ದಿಕ್ಕು ತೋಚದಂತಾದ ಮಹಿಳೆ ಆಸ್ಪತ್ರೆ ಮುಂದೆ ಇರುವ ಫುಟ್ಪಾತ್​ನಲ್ಲೇ ಮಲಗಿ ನರಳಾಡಿದ್ದಾರೆ. ಒಂಟಿಯಾಗಿದ್ದ ಮಹಿಳೆ ಉರಿವ ಬಿಸಿಲಲ್ಲಿ ಊಟ-ನೀರು ಇಲ್ಲದೆ ಪರದಾಡಿದ್ದಾರೆ. ಮಹಿಳೆಯ ಪಕ್ಕದಲ್ಲೇ ಸಾಲುಗಟ್ಟಿ ನಿಂತಿದ್ದ ಖಾಸಗಿ ಆಸ್ಪತ್ರೆ ಆಂಬ್ಯುಲೆನ್​​ಗಳೂ ಸಹಾಯಕ್ಕೆ ಧಾವಿಸಿಲ್ಲ. ಕೋವಿಡ್ ಆಸ್ಪತ್ರೆಗೆ ದಾಖಲಾಗಲು 108, ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದ್ರೂ ಯಾರೊಬ್ಬರು ಸ್ಪಂದಿಸಿಲ್ಲ.

  ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಆರೋಗ್ಯ ಸಚಿವ ಸುಧಾಕರ್ ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆ ಮೀಸಲಿಡೋದಾಗಿ ತಿಳಿಸಿದ್ದರು. ಕಳೆದ ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲಿಡಲಾಗಿತ್ತು. ಇದೇ ರೀತಿ ಈಗಲೂ ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಒಂದು ವಾರದೊಳಗೆ ಶೇ.50 ರಷ್ಟು ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳವರು ಒಪ್ಪಿಕೊಂಡಿದ್ದಾರೆ. ಅಲ್ಪ ರೋಗಲಕ್ಷಣ ಹಾಗೂ ಲಕ್ಷಣರಹಿತ ರೋಗಿಗಳಿಗೆ ಹೋಟೆಲ್ ಗಳಲ್ಲಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು.

  ಇನ್ನೂ ಒಂದು ವಾರದ ಬಳಿಕ ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಬೆಡ್​ಗಳನ್ನು ನೀಡಲಿವೆ. ಅಲ್ಲಿಯವರೆಗೂ ಬೆಡ್ ಸಿಗದೇ ಪರದಾಡುತ್ತಿರುವವರ ಪಾಡೇನು ಎಂದು ಆರೋಗ್ಯ ಸಚಿವರೇ ಉತ್ತರಿಸಬೇಕಿದೆ.

  • ವರದಿ: ಕಾವ್ಯಾ ವಿ

  Published by:Harshith AS
  First published: