ಕೊರೋನಾ ಹೊಡೆತಕ್ಕೆ ಮಂಕಾಯ್ತು ಬಾಗಲಕೋಟೆ ನೆರೆ ಸಂತ್ರಸ್ತರ ಬದುಕು!

ಮಳೆಗಾಲ ಶುರುವಾಗಿರುವುದರಿಂದ ಬೇಗನೆ ಸರ್ಕಾರದವರು ಬಾಗಲಕೋಟೆಯ ಜನರಿಗೆ ಮನೆ ನಿರ್ಮಾಣದ ಹಣ ಕೊಟ್ಟರೆ ಅನುಕೂಲವಾಗುತ್ತದೆ. ಇಲ್ಲವಾದರೆ ಪ್ರವಾಹಕ್ಕಿಂತ ಮತ್ತಷ್ಟು ಕಷ್ಟ ಅನುಭವಿಸಬೇಕಾಗುತ್ತದೆ.

news18-kannada
Updated:May 24, 2020, 7:31 PM IST
ಕೊರೋನಾ ಹೊಡೆತಕ್ಕೆ ಮಂಕಾಯ್ತು ಬಾಗಲಕೋಟೆ ನೆರೆ ಸಂತ್ರಸ್ತರ ಬದುಕು!
ಸಣ್ಣ ಗುಡಿಸಲುಗಳನ್ನು ವಾಸಿಸುತ್ತಿರುವ ಬಾಗಲಕೋಟೆಯ ಪ್ರವಾಹ ಸಂತ್ರಸ್ತರು
  • Share this:
ಬಾಗಲಕೋಟೆ (ಮೇ 24): ಕಳೆದ ಹತ್ತು ತಿಂಗಳ ಹಿಂದೆ ಬಾಗಲಕೋಟೆ ಜಿಲ್ಲೆ ಮೂರು ನದಿಗಳ  ಮಹಾ ಪ್ರವಾಹಕ್ಕೆ ತುತ್ತಾಗಿತ್ತು. ಇದರಿಂದ ಜನರ ಬದುಕು ಬೀದಿಗೆ ಬಿದ್ದಿತ್ತು. ಇದೀಗ ಕೊರೋನಾ ಲಾಕ್​ಡೌನ್​ನಿಂದ ಸಂತ್ರಸ್ತರ ಬದುಕು ಶೋಚನೀಯವಾಗಿದೆ. ಯಾಕಂದರೆ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ಸೂರುಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ.

ಅತ್ತ ಅರ್ಧಕ್ಕೆ ನಿಂತ ಮನೆಗಳ ನಿರ್ಮಾಣ ಇತ್ತ ಮಳೆಗಾಲ ಶುರುವಾಗಿದ್ದರಿಂದ ಸಂತ್ರಸ್ತರಲ್ಲಿ ಮತ್ತಷ್ಟು ಚಿಂತೆ ಕಾಡತೊಡಗಿದೆ. ಆಗ ಮಹಾರಾಷ್ಟ್ರದ ಮಹಾಮಳೆ ರಾಜ್ಯಕ್ಕೆ ಕಾಡಿದರೆ ಇದೀಗ ಮಹಾರಾಷ್ಟ್ರದ ಲಿಂಕ್​ನಿಂದ  ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ನೆರೆಯಲ್ಲೂ ಮಹಾರಾಷ್ಟ್ರದ ಕಂಟಕ, ಕೊರೋನಾದಲ್ಲೂ ಮಹಾರಾಷ್ಟ್ರದ ಕಂಟಕಕ್ಕೆ ರಾಜ್ಯದ ಜನತೆ ಹೈರಾಣಾಗಿದ್ದಾರೆ.  2019ರ ಆಗಸ್ಟ್ ತಿಂಗಳಲ್ಲಿ  ಮಹಾರಾಷ್ಟ್ರದಲ್ಲಿ ಮಹಾಮಳೆ ಜೊತೆಗೆ ರಾಜ್ಯದಲ್ಲಿ  ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳ ಪ್ರವಾಹಕ್ಕೆ  ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರು ನಲುಗಿ ಹೋಗಿದ್ದಾರೆ.

ಜಿಲ್ಲೆಯ 198 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ 1 ಲಕ್ಷ ಜನರು ಪ್ರವಾಹದಿಂದ ಪಡಬಾರದ ಕಷ್ಟ ಅನುಭವಿಸಿದ್ದಾರೆ. ಶತಮಾನದಲ್ಲೇ ಹಿಂದೆಂದೂ ಕಂಡು ಕೇಳರಿಯದ ಪ್ರವಾಹವದು. ಮನೆ, ಹೊಲದಲ್ಲಿನ ಬೆಳೆ ಬಿಟ್ಟು ಜೀವ ಉಳಿಸಿಕೊಳ್ಳಲು ಮಕ್ಕಳು, ಮರಿ, ದನಕರುಗಳನ್ನು ಕಟ್ಟಿಕೊಂಡು ಆಶ್ರಯತಾಣಗಳಲ್ಲಿ ಸಂತ್ರಸ್ತರು ಆಶ್ರಯ ಪಡೆದಿದ್ದರು.  ರಾಜ್ಯದ ಜನ ಸಂತ್ರಸ್ತರಿಗೆ ಮಿಡಿದು ಅಗತ್ಯ ವಸ್ತುಗಳ ನೆರವು ನೀಡಿದರು. ಇದೀಗ ಮನೆ ಕಟ್ಟಿಕೊಂಡು ಮತ್ತೆ ಹೊಸ ಬದುಕು ಆರಂಭಿಸಬೇಕೆಂದವರಿಗೆ ಕೊರೊನಾ ಆಘಾತ ತಂದೊಡ್ಡಿದೆ. ಕೊರೊನಾ ಲಾಕ್ ಡೌನ್ ದಿಂದಾಗಿ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 130 ಮಂದಿಗೆ ಕೊರೋನಾ ಪತ್ತೆ; ಚಿಕ್ಕಬಳ್ಳಾಪುರ, ಯಾದಗಿರಿ, ಉಡುಪಿಯಲ್ಲಿ ಹೆಚ್ಚು ಕೇಸ್

ಇನ್ನು, ಕೆಲವೆಡೆ ಹಂತಕ್ಕನುಸಾರ ಜಿಪಿಎಸ್ ಫೋಟೋ ಅಪ್ಲೋಡ್ ಆಗದ ಹಿನ್ನೆಲೆ ಪರಿಹಾರ ಬಂದಿಲ್ಲ. ಇನ್ನು ಮನೆ ನಿರ್ಮಾಣಕ್ಕೆ ಗೌಂಡಿ, ಕಾರ್ಮಿಕರು, ಮರಳು, ಕಡಿ ಸಿಗದೆ ಸಂತ್ರಸ್ತರು ಅರ್ಧಕ್ಕೆ ಮನೆ ನಿರ್ಮಾಣ ಕಾರ್ಯ ನಿಲ್ಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಮನೆ ನಿರ್ಮಾಣವಾದ ಉದಾಹರಣೆ ಸಿಗುವುದು ಕಷ್ಟ‌‌. ಬಾಗಲಕೋಟೆ ಜಿಲ್ಲೆಯಲ್ಲಿ ಸಮೀಕ್ಷೆ ಪ್ರಕಾರ 12087ಮನೆಗಳು ಹಾನಿಯಾಗಿವೆ. ಅದರಲ್ಲಿ ಎ ವಿಭಾಗದಲ್ಲಿ 574, ಬಿ ವಿಭಾಗದಲ್ಲಿ 2,643 ಮನೆಗಳು ಹಾನಿಯಾಗಿವೆ‌. ಎ ವಿಭಾಗದ ಮನೆಗೆ 5 ಲಕ್ಷ, ಬಿ ವಿಭಾಗದ ಮನೆಗೆ ಮೊದಲು 3 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಆ ಬಳಿಕ ಸರ್ಕಾರ ಬಿ ಮನೆಗೂ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

Bagalkot Flood Victims are waiting to release Compensation and money to Build new House.
ಅರ್ಧ ನಿರ್ಮಾಣವಾಗಿರುವ ಮನೆಗಳು


ಕೊರೊನಾ ಲಾಕ್ ಡೌನ್ ಹಿನ್ನೆಲೆ ಪಿಡಿಓ , ಅಧಿಕಾರಿಗಳು ಕೊರೊನಾ ಡ್ಯೂಟಿಯಲ್ಲಿ ಬ್ಯೂಸಿಯಾಗಿದ್ದಾರೆ. ಸಂತ್ರಸ್ತರು ಕಟ್ಟಿಕೊಂಡ ಮನೆಗೆ ಜಿಪಿಎಸ್ ಫೋಟೋ ಅಪ್ಲೋಡ್ ಆಗದ ಹಿನ್ನೆಲೆ ಪರಿಹಾರ ಜಮಾ ಆಗಿಲ್ಲ. ಹೀಗಾಗಿ ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಎರಡು, ಮೂರನೇ ಹಂತದಲ್ಲಿ ಮನೆ ನಿರ್ಮಾಣ ಕಾರ್ಯ ನಿಂತಿದೆ. ಅತ್ತ ಮನೆ ಅರ್ಧಕ್ಕೆ, ಇತ್ತ ಮತ್ತೆ ಮಳೆಗಾಲ ಶುರುವಾಗಿದೆ. ಸಂತ್ರಸ್ತರು ಆತಂಕದಲ್ಲೇ ಶೆಡ್ , ಬಾಡಿಗೆ ಮನೆಯಲ್ಲಿ ಬದುಕು ದೂಡುತ್ತಾ ಸಂಕಷ್ಟದಲ್ಲಿ ಕೈತೊಳೆಯುತ್ತಿದ್ದಾರೆ. ಇನ್ನು ಬಾದಾಮಿ ತಾಲೂಕಿನ ಬೀರನೂರ ಗ್ರಾಮದಲ್ಲಿ ಕೆಲವರಿಗೆ ಶೆಡ್ ಸಿಗದೇ ಸಂತ್ರಸ್ತರು ಸ್ವಂತ ಶೆಡ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೊರೊನಾದಿಂದ ಮೂರು ತಿಂಗಳಿಂದ ಮನೆ ನಿರ್ಮಾಣ ಕಾರ್ಯ ನಿಂತಿದೆ. ಎರಡು ಬಿಲ್ ಮಾತ್ರ ಬಂದಿದೆ.ಇದನ್ನೂ ಓದಿ: Bangalore Accident: ಬೆಂಗಳೂರಿನ ನಡುರಸ್ತೆಯಲ್ಲಿ ಧಗ-ಧಗನೆ ಹೊತ್ತಿ ಉರಿದ ಕಾರು; ಐವರು ಪ್ರಯಾಣಿಕರು ಪಾರು

ಮಳೆಗಾಲ ಶುರುವಾಗಿರುವುದರಿಂದ ಬೇಗನೆ ಸರ್ಕಾರದವರು ಮನೆ ನಿರ್ಮಾಣದ ಹಣ ಕೊಟ್ಟರೆ ಅನುಕೂಲವಾಗುತ್ತದೆ. ಇಲ್ಲವಾದರೆ ಪ್ರವಾಹಕ್ಕಿಂತ ಮತ್ತಷ್ಟು ಕಷ್ಟ ಅನುಭವಿಸುತ್ತೇವೆ ಅಂತ ನೋವಿನಿಂದ ಹೇಳುತ್ತಾರೆ ಬೀರನೂರು ಗ್ರಾಮದ ಸಂತ್ರಸ್ತ ಬಸನಗೌಡ ಮುದಿಗೌಡ್ರ.

ಇನ್ನು ಬಾಡಿಗೆ ಮನೆಯಲ್ಲಿದ್ದವರಿಗೆ ಬಾಡಿಗೆ ಹಣ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದ ಸರ್ಕಾರ  ಬಾಗಲಕೋಟೆ ಜಿಲ್ಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಸಂತ್ರಸ್ತರಿಗೆ ಸರಿಯಾಗಿ ಬಾಡಿಗೆ ಹಣ ಕೊಟ್ಟಿಲ್ಲ. ಕೆಲವೆಡೆ ಮನೆ ನಿರ್ಮಾಣವಾದ ಹಂತಕ್ಕೆ ಅನುಗುಣವಾಗಿ ಪರಿಹಾರ ಬಿಡುಗಡೆ ಆಗಿಲ್ಲ. ಜಿಪಿಎಸ್ ಆಗದೇ ಪರಿಹಾರ ಬಿಡುಗಡೆ ವಿಳಂಬವಾಗ್ತಿದೆ ಅನ್ನೋ  ಆರೋಪ ಕೇಳಿಬಂದಿದೆ. ಇದೀಗ ಲಾಕ್ ಡೌನ್ ಸಡಿಲಿಕೆಯಾಗಿದ್ದು ಅರ್ಧಕ್ಕೆ ನಿಂತಿದ್ದ ಮನೆಗಳನ್ನು  ಕಟ್ಟಿಕೊಳ್ಳಲು ಸಂತ್ರಸ್ತರು ಮುಂದಾಗಿದ್ದಾರೆ‌. ಸರ್ಕಾರ ಮನೆ ಪರಿಹಾರ ಶೀಘ್ರ ಬಿಡುಗಡೆ ಮಾಡಿದರೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಇಲ್ಲವಾದರೆ ಮಳೆಗೆ ಮತ್ತೆ ಬದುಕು ಬೀದಿಪಾಲಾಗುತ್ತದೆ ಅಂತಿದ್ದಾರೆ ಸಂತ್ರಸ್ತರು.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್​; ಕಾರ್ಕಳದ ಪುರೋಹಿತರಿಂದ ಆನ್​ಲೈನ್​‌ನಲ್ಲೇ ಶ್ರಾದ್ದ

ಇನ್ನು, ಮುಧೋಳ, ಜಮಖಂಡಿ, ಬಾದಾಮಿ ತಾಲೂಕಿನ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಜಮಖಂಡಿ ತಾಲೂಕಿನಲ್ಲಿ ಬಿದ್ದ ಮನೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಅನ್ನೋ ಆರೋಪವೂ ಕೇಳಿ ಬಂದಿದೆ. ಈ ಹಿಂದೆ ಮುಳುಗಡೆ ಗ್ರಾಮ ಹೊರತುಪಡಿಸಿ ಉಳಿದ ಕೆಲವು ಗ್ರಾಮಗಳಲ್ಲಿ ಮನೆಗೆ ಪರಿಹಾರ ಸಿಕ್ಕಿಲ್ಲ. ಇನ್ನು ಅರ್ಧಕ್ಕೇ ನಿಂತಿದ್ದ ಮನೆ ಯಾವಾಗ ಮುಗಿಯುತ್ತೋ ಅನ್ನೋ ಚಿಂತೆಯಲ್ಲಿ ಸಂತ್ರಸ್ತರು ಬದುಕು ಸಾಗಿಸುತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ತೊಡಗಿರುವ ಜಿಲ್ಲಾಡಳಿತ ನೆರೆ ಸಂತ್ರಸ್ತರು ಬದುಕಟ್ಟಿಕೊಳ್ಳವಲ್ಲಿ ನೆರವಾಗಬೇಕಿದೆ. ಮುಧೋಳ ಶಾಸಕ ಡಿಸಿಎಂ ಗೋವಿಂದ ಕಾರಜೋಳ, ಬಾದಾಮಿ ಶಾಸಕ  ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಮಖಂಡಿಯ ಶಾಸಕ ಆನಂದ್ ನ್ಯಾಮಗೌಡ ಕ್ಷೇತ್ರದಲ್ಲಿ  ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ಪೂರ್ಣ ಮನೆ ನಿರ್ಮಾಣ ಭಾಗ್ಯ ಕಲ್ಪಿಸಲಿ ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
First published: May 24, 2020, 7:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading