ಆಟೋ ಏರುವ ಮುನ್ನ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ - ಸಂಕಷ್ಟದಲ್ಲೂ ಜನರಿಗೆ ಅರಿವು ಮೂಡಿಸುತ್ತಿರುವ ಚಾಲಕ

ದುಡಿಮೆ ಇಲ್ಲದೆ ಸಂಕಷ್ಟದಲ್ಲಿ ಇರುವಾಗಲೂ ಜನರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ತಿಳುವಳಿಕೆ ಮೂಡಿಸುತ್ತಿರುವುದಕ್ಕೆ ನಿಜಕ್ಕೂ ಸಂತಸ ಎನ್ನುತ್ತಾರೆ ಜನ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಕೊಡಗು(ಆ.25): ಗಾಳಿಯಂತೆ ವೇಗದಲ್ಲಿ ಹರಡುತ್ತಿರುವ ಕೊರೋನಾ ಮಹಾಮಾರಿಗೆ ಇನ್ನೂ ಲಸಿಕೆ ಸಿದ್ಧವಾಗಿಲ್ಲ. ಅದನ್ನು ನಿಯಂತ್ರಿಸಲು ಜನರು ಮೊದಲು ತೆಗೆದುಕೊಳ್ಳುತ್ತಿದ್ದಷ್ಟು ಎಚ್ಚರಿಕೆ ಈಗ ಇಲ್ಲ. ಹೀಗಾಗಿಯೇ ಇಲ್ಲೊಬ್ಬ ಆಟೋ ಚಾಲಕ ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಆಟೋ ಹಿಂದೆ ಮುಂದೆ ಪಾಪಿ ಕೊರೋನಾ ಎನ್ನೋ ಬೋರ್ಡ್. ಆಟೋ ಹತ್ತು ಮುನ್ನ ಕೈಗೆ ಸ್ಯಾನಿಟೈಸರ್ ಮುಖಕ್ಕೆ ಮಾಸ್ಕ್ ವಿತರಿಸೋ ಆಟೋ ಚಾಲಕ. ಹೌದು, ಮಡಿಕೇರಿ ನಗರದ ನಿವಾಸಿ ಆಟೋ ಚಾಲಕ ಹನೀಫ್ ಎಂಬುವರು ಹೀಗೆ ಮಾಡುವ ಮೂಲಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆಟೋ ಬೇಕೆಂದು ಬರುವ ಪ್ರಯಾಣಿಕರಿಗೆ ನೀವೆಲ್ಲಿಗೆ ಹೋಗಬೇಕೆಂದು ಕೇಳುವ ಮೊದಲು, ಹನೀಫ್ ಮಾಸ್ಕ್ ಎಲ್ಲಿ ಅಂತಾ ಕೇಳ್ತಾರೆ. ಇಲ್ಲಾ ಅಂತ ಹೇಳಿದ್ರೆ ಮೊದಲು ಎರಡು ತಿಳುವಳಿಕೆ ಮಾತು ಹೇಳುತ್ತಾರೆ. ನಂತರ ಕೈಗೆ ಸ್ಯಾನಿಟೈಸರ್ ಕೊಟ್ಟು ಮುಖಕ್ಕೆ ಮಾಸ್ಕ್ ಕೊಡುತ್ತಾರೆ. ಬಳಿಕವಷ್ಟೇ ಆಟೋಗೆ ಅತ್ತಿಸಿಕೊಂಡು ಕರೆದೊಯ್ಯುತ್ತಾರೆ.

ಕೊರೋನಾ ಹರಡಲು ಆರಂಭವಾದ ಬಳಿಕ ದುಡಿಮೆ ತೀರಾ ಕಡಿಮೆ ಇದೆ. ಆದರೂ ನಮ್ಮ ಮತ್ತು ಪ್ರಯಾಣಿಕರ ದೃಷ್ಟಿಯಿಂದ ನನಗೆ ಸ್ವಲ್ಪ ಖರ್ಚಾದರೂ ಪರವಾಗಿಲ್ಲ ಅಂತ ನಿತ್ಯ 20ರಿಂದ 25 ಪ್ರಯಾಣಿಕರಿಗೆ ಮಾಸ್ಕ್ ವಿತರಿಸುತ್ತಿದ್ದೇನೆ ಎನ್ನುತ್ತಾರೆ ಚಾಲಕ.

ಚಾಲಕ ಹನೀಫ್ ಇದಕ್ಕೂ ಮೊದಲು ಆಟೋ ಹಿಂದೆ ಮತ್ತು ಮುಂದೆ ಪಾಪಿ ದುನಿಯಾ ಅಂತಾ ಬರೆಸಿದ್ದರಂತೆ. ಆದರೆ ಯಾವಾಗ ಕೊರೋನಾದಿಂದ ದೇಶ ಲಾಕ್‍ಡೌನ್ ಆಗಿ ನಮ್ಮ ದುಡಿಮೆಯೆಲ್ಲಾ ನಿಂತು ಹೋಯ್ತೋ, ಆಗ ಅದೇ ಸ್ಥಳದಲ್ಲಿ ಪಾಪಿ ಕೊರೋನಾ ಅಂತಾ ಬರೆಸಿದೆ. ಈಗ ಜನರಿಗೆ ಅದೇ ಆಕರ್ಷಣೆ ಆಗಿದೆ. ಕೆಲ ಪ್ರಯಾಣಿಕರು ಇದನ್ನು ನೋಡಿ ನಕ್ಕು ಆಟೋ ಏರುತಿದ್ದಾರೆ. ಇನ್ನು ಕೆಲವರು ಇದು ತಿಳುವಳಿಕೆ ಮೂಡಿಸುವಲ್ಲಿ ಸಹಕಾರಿ ಆಗಿದೆ ಎನ್ನುತ್ತಿದ್ದಾರೆ.

ದುಡಿಮೆ ಇಲ್ಲದೆ ಸಂಕಷ್ಟದಲ್ಲಿ ಇರುವಾಗಲೂ ಜನರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ತಿಳುವಳಿಕೆ ಮೂಡಿಸುತ್ತಿರುವುದಕ್ಕೆ ನಿಜಕ್ಕೂ ಸಂತಸ ಎನ್ನುತ್ತಾರೆ ಜನ.

ಇದನ್ನೂ ಓದಿ: Dowry Harassment: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ನೇಣಿಗೆ ಶರಣು

ಒಟ್ಟಿನಲ್ಲಿ ಕೊರೊನಾ ಮಹಾಮಾರಿಗೆ ಬ್ರೇಕ್ ಹಾಕೋದಕ್ಕೆ ಸಾಧ್ಯವಾಗದ ಈ ಸಂದರ್ಭದಲ್ಲಿ ದುಡಿಮೆ ಇಲ್ಲದಿದ್ದರು, ಜನರಿಗೆ ಅರಿವು ಮೂಡಿಸುತ್ತಿರುವ ಇವರಿಗೆ ಹ್ಯಾಟ್ಸ್ ಅಪ್ ಹೇಳ್ಲೇಬೇಕು.
Published by:Ganesh Nachikethu
First published: