Diabetes Treatment: ಆಸ್ಟ್ರೇಲಿಯಾ ವಿಜ್ಞಾನಿಗಳು ಈ ಅದ್ಭುತ ಸಂಶೋಧನೆ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತಿದೆ. ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಇನ್ಮುಂದೆ ರಕ್ತದಲ್ಲಿರುವ ಗ್ಲೂಕೋಸ್ ಪರೀಕ್ಷಿಸಿಕೊಳ್ಳಲು ಸೂಜಿಯಿಂದ ಚುಚ್ಚಿ ರಕ್ತದ ಹನಿಯ ಮಾದರಿ ಸಂಗ್ರಹಿಸಬೇಕಿಲ್ಲ. ಕೇವಲ ಅವರ ಎಂಜಲಿನಿಂದಲೇ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಅಳೆಯುವ ವಿನೂತನ ವಿಧಾನ ಕಂಡುಹಿಡಿದಿದ್ದಾರೆ ಈ ವಿಜ್ಞಾನಿಗಳು. ಇದು ಡಯಾಬಿಟಿಸ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಇದನ್ನು ‘ಹೋಲಿ ಗ್ರೇಲ್’ ಅಥವಾ ಅಮೃತ ಸಮಾನವಾದ ವಸ್ತು ಎಂದಿದ್ದಾರೆ. ಸದ್ಯ ಪ್ರಪಂಚದಾದ್ಯಂತ ಇರೋ ಲೆಕ್ಕವಿಲ್ಲದಷ್ಟು ಡಯಾಬಿಟಿಸ್ ರೋಗಿಗಳ ಪಾಲಿಗೆ ಈ ವಸ್ತು ಒಂದು ವರದಾನವಾಗಿದೆ.
ಮಧುಮೇಹದಿಂದ ಬಳಲುವ ಎಲ್ಲರೂ ತಮ್ಮ ದೈನಂದಿನ ಸಕ್ಕರೆ ಅಂಶದ ಮೇಲೆ ಒಂದು ಕಣ್ಣಿಟ್ಟಿರಬೇಖಾಗಿರುತ್ತದೆ. ಮೊದಲೆಲ್ಲಾ ಪ್ರತೀ ಪರೀಕ್ಷೆಗೂ ವೈದ್ಯರ ಬಳಿ ಅಥವಾ ಆಸ್ಪತ್ರೆಗೆ ಹೋಗಲೇಬೇಕಾದ ಅನಿವಾರ್ಯತೆ ಇರುತ್ತದೆ. ಆದ್ರೆ ಈಗೀಗ ಮನೆಯಲ್ಲೇ ಬಳಸಬಹುದಾದ ಸುಲಭ ಸ್ಟ್ರಿಪ್ಗಳು ಬಂದಿದ್ದು ಜನ ಪ್ರತಿದಿನ ಕುಳಿತಲ್ಲೇ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬಹುದು. ಆದ್ರೆ ಈ ವಿಧಾನದಲ್ಲಿ ಎಷ್ಟೇ ಸುಲಭ ಅವಕಾಶಗಳು ಬಂದರೂ ಬೆರಳ ತುದಿಯಲ್ಲಿ ಚುಚ್ಚುವುದು ಮಾತ್ರ ತಪ್ಪಿಲ್ಲ. ದೇಹದಿಂದ ಒಂದು ಹನಿ ರಕ್ತ ಹೊರತೆಗೆದು ಅದನ್ನು ಪರಿಶೀಲಿಸಿದರೇ ಸಕ್ಕರೆಯ ಪ್ರಮಾಣ ಗೊತ್ತಾಗೋದು.
ಇದನ್ನೂ ಓದಿ: Weight Loss Tips: ಈ 5 ತರಕಾರಿ ಜ್ಯೂಸ್ ಕುಡಿದ್ರೆ ನಿಮ್ಮ ತೂಕ ಇಳಿಯೋದು ಗ್ಯಾರಂಟಿ, ಸಣ್ಣಗಾಗ್ಬೇಕು ಅನ್ನೋವ್ರು ತಪ್ಪದೇ ಓದಿ !
ಅನೇಕ ಸಲ ಈ ಚುಚ್ಚುವಿಕೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಜನ ಪರೀಕ್ಷೆಯಿಂದಲೂ ತಪ್ಪಿಸಿಕೊಳ್ತಾರೆ. ಅದರಲ್ಲೂ ಟೈಪ್ -1 ಡಯಾಬಿಟಿಸ್ ಇರುವ ಅಂದ್ರೆ ಹುಟ್ಟುನಿಂದಲೇ ಸಕ್ಕರೆ ಖಾಯಿಲೆ ಇರುವವರಿಗೆ ಇದರ ನೋವು ಮತ್ತೂ ಹೆಚ್ಚು. ಚಿಕ್ಕ ಮಕ್ಕಳಾಗಿದ್ದಾಗಿನಿಂದ ಮೊದಲು ಹೊಟ್ಟೆಗೆ, ನಂತರ ಕೈಗೆ ಚುಚ್ಚಿ ರಕ್ತದ ಮಾದರಿ ಪಡೆಯಬೇಕು. ಇಷ್ಟಕ್ಕೇ ಮುಗಿಯುವುದಿಲ್ಲ. ಸಕ್ಕರೆ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ನ್ನು ಕೂಡಾ ಇಂಜೆಕ್ಷನ್ ರೂಪದಲ್ಲೇ ಪಡೆಯಬೇಕಾದ್ದರಿಂದ ಮತ್ತೆ ಚುಚ್ಚಬೇಕು. ಅನೇಕ ಕಡೆ ಇದರಿಂದ ಶಾಶ್ವತವಾಗಿ ಕಲೆಗಳಾಗಿರುವ ಉದಾಹರಣೆಗಳೂ ಇವೆ. ಇವರೆಲ್ಲರೂ ಈಗ ಆಸ್ಟ್ರೇಲಿಯಾ ವಿಜ್ಞಾನಿಗಳ ನೂತನ ಆವಿಷ್ಕಾರದತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.
ಯಾವುದೇ ನೋವಿಲ್ಲದಂತೆ ಸಕ್ಕರೆ ಪ್ರಮಾಣ ಪರೀಕ್ಷಿಸುವ ನೂತನ ವಿಧಾನ ಇದಾಗಿದೆ. ಟ್ರಾನ್ಸಿಸ್ಟರ್ ರೀತಿಯ ಉಪಕರಣವೊಂದರಲ್ಲಿ ಇಂಕ್ನ್ನು ಹೋಲುವ ರಾಸಾಯನಿಕ ಇರುತ್ತದೆ. ಸಕ್ಕರೆ ಪ್ರಮಾಣದ ವಿವರವನ್ನೆಲ್ಲಾ ಅದು ಸರಾಗವಾಗಿ ಪ್ರಿಂಟ್ ಮಾಡುತ್ತದೆ. ಈ ಪ್ರಿಂಟ್ ಕೂಡಾ ಬಹಳ ಕಡಿಮೆ ಖರ್ಚಿನಲ್ಲಿ ಆಗೋದ್ರಿಂದ ವಿಶ್ವದಾದ್ಯಂತ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ ಆಸ್ಟ್ರೇಲಿಯಾದ ಯೂನಿವರ್ಸಿಟಿ ಆಫ್ ನ್ಯೂ ಕ್ಯಾಸೆಲ್ನ ಭೌತಶಾಸ್ತ್ರ ಪ್ರೊಫೆಸರ್ ಪೌಲ್ ದಸ್ತೂರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ