Covid-19 Effect: ಟೋಕಿಯೋ ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಗೆದ್ದ ಪದಕವನ್ನು ಅವರೇ ಧರಿಸಬೇಕು!

Tokyo Olympics: ಕೊರೊನಾ ವೈರಸ್ ಆಟಗಾರರಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ತಾವು ಗೆದ್ದಿರುವಂತಹ ಪದಕಗಳನ್ನು ತಮ್ಮ ಕುತ್ತಿಗೆಗೆ ತಾವೇ ಹಾಕಿಕೊಳ್ಳುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಬುಧವಾರ ತಿಳಿಸಿದ್ದಾರೆ.

Olympics

Olympics

  • Share this:
ಹಲವು ವರ್ಷಗಳಿಂದ ರೂಢಿಯಲ್ಲಿರುವಂತಹ ಅನೇಕ ಅಭ್ಯಾಸಗಳನ್ನು ಬುಡಮೇಲು ಮಾಡಿ, ಹೊಸ ಅಭ್ಯಾಸಗಳನ್ನು ನಮಗೆ ಕೋವಿಡ್-19 ಪರಿಚಯಿಸಿದೆ ಎಂದರೆ ಸುಳ್ಳಲ್ಲ. ಈ ಒಂದೂವರೆ ವರ್ಷದಲ್ಲಿ ಏನೇನೆಲ್ಲಾ ಬದಲಾಯ್ತು, ಕಚೇರಿಗೆ ಹೋಗಿ ಕೆಲಸ ಮಾಡುವವರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ, ಮಕ್ಕಳು ಮನೆಯಿಂದ ಪಾಠ ಕಲಿಯುತ್ತಿದ್ದಾರೆ, ಹೀಗೆ ಹತ್ತು ಹಲವು ಬದಲಾವಣೆಗಳನ್ನು ಈ ಕೋವಿಡ್ ಸಂದರ್ಭದಲ್ಲಿ ನಾವು ಮಾಡಿಕೊಂಡಿದ್ದೇವೆ.


ಕೊರೊನಾ ವೈರಸ್ ಆಟಗಾರರಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ತಾವು ಗೆದ್ದಿರುವಂತಹ ಪದಕಗಳನ್ನು ತಮ್ಮ ಕುತ್ತಿಗೆಗೆ ತಾವೇ ಹಾಕಿಕೊಳ್ಳುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಬುಧವಾರ ತಿಳಿಸಿದ್ದಾರೆ. ಸುಮಾರು 339 ಸ್ಪರ್ಧೆಗಳಲ್ಲಿ ನಡೆಯುವ ಪದಕ ಸಮಾರಂಭಗಳಲ್ಲಿ ಮಾಡಿದಂತಹ ಬಹಳ ಮಹತ್ವದ ಬದಲಾವಣೆ ಇದಾಗಿದೆ ಎಂದು ಹೇಳಿದ್ದಾರೆ.


ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಟೋಕಿಯೋದಿಂದ ಕಾನ್ಫರೆನ್ಸ್ ಕಾಲ್​ನಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್, ಟೋಕಿಯೋ ಒಲಂಪಿಕ್ಸ್ ನಲ್ಲಿ ಆಟಗಾರರು ತಾವು ಸ್ಪರ್ಧಿಸಿ ಗೆದ್ದಂತಹ ಪದಕಗಳನ್ನು ತಾವೇ ಸ್ವತಃ ಎದುರು ಹಿಡಿದಿರುವಂತಹ ಟ್ರೇನಿಂದ ತೆಗೆದುಕೊಂಡು ಕತ್ತಿಗೆ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.


ಮೆಡಲ್​ಗಳನ್ನು ಟ್ರೇಯಲ್ಲಿ ಇಡುವ ವ್ಯಕ್ತಿಯು ಸಹ ಕೈ ಗವಸು ಧರಿಸಿ ಆ ಪದಕಗಳನ್ನು ಎತ್ತಿಕೊಂಡು ಇಡುತ್ತಾರೆ. ಒಟ್ಟಿನಲ್ಲಿ ಆ ಮೆಡಲ್ ಅನ್ನು ಯಾವುದೇ ರೀತಿಯಿಂದಲೂ ಕೈಯಿಂದ ಮುಟ್ಟದೆ ಆಟಗಾರರಿಗೆ ತಲುಪಿಸುವ ಸಲುವಾಗಿ ಇದನ್ನು ಮಾಡಲಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.




ಕೆಲವು ದಿನಗಳ ಹಿಂದೆ ಯೂರೋಪ್​ನಲ್ಲಿ ಮುಗಿದ ಫುಟ್ಬಾಲ್ ಪಂದ್ಯಗಳಲ್ಲಿ ಅನುಸರಿಸಿದ ನಿಯಮಗಳಿಗಿಂತಲೂ ಒಲಂಪಿಕ್ಸ್ನಲ್ಲಿ ವಿಭಿನ್ನವಾಗಿದ್ದನ್ನು ಗಮನಿಸಬೇಕಾಗಿದೆ. ಪುಟ್ಬಾಲ್ ಪಂದ್ಯದ ನಂತರ ಯುಇಎಫ್ಎ ಅಧ್ಯಕ್ಷ ಅಲೆಗ್ಜಂಡರ್ ಕೆಫೆರಿನ್ ಅವರೇ ಖುದ್ದಾಗಿ ಆಟಗಾರರಿಗೆ ಪಂದ್ಯದ ನಂತರ ಕುತ್ತಿಗೆಗೆ ಮೆಡಲ್ ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.


ಅಲ್ಲದೆ ಕೆಫೆರಿನ್ ಅವರು ಇಟಲಿ ತಂಡದ ಗೋಲ್ ಕೀಪರ್ ಅವರನ್ನ ಕೈಕುಲುಕಿ ಅಭಿನಂದನೆಯನ್ನು ಸಹ ತಿಳಿಸಿದ್ದರು. ಏಕೆಂದರೆ ಆ ಫೈನಲ್ ಪಂದ್ಯದಲ್ಲಿ ಇಟಲಿಯ ಗೋಲ್ ಕೀಪರ್ ಪೆನಾಲ್ಟಿ ಶೂಟ್ ಔಟ್​​ನಲ್ಲಿ ಒಂದು ಗೋಲ್ ಉಳಿಸಿದ್ದಕ್ಕೆ ಅವರ ತಂಡಕ್ಕೆ ಭಾರಿ ಜಯ ದಕ್ಕಿತ್ತು.


ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆಯುವಂತಹ ಪ್ರಶಸ್ತಿ ಸಮಾರಂಭದಲ್ಲಿ ಯಾವುದೇ ರೀತಿಯ ಕೈಕುಲುಕಿ ಅಭಿನಂದನೆ ಹೇಳುವುದಾಗಲಿ ಮತ್ತು ಪರಸ್ಪರ ಇಬ್ಬರು ವ್ಯಕ್ತಿಗಳು ತಬ್ಬಿಕೊಳ್ಳುವಂತೆಯೂ ಇಲ್ಲ ಎಂದು ಬಾಕ್ ಹೇಳಿದ್ದಾರೆ.




ಪ್ರಶಸ್ತಿ ಸಮಾರಂಭದಲ್ಲಿ ಹಾಜರಿರುವ ಪಂದ್ಯದಲ್ಲಿ ವಿಜೇತರಾಗಿರುವ ಅಥ್ಲೀಟ್ಗಳು ಮತ್ತು ಸಮಾರಂಭದ ಅಧಿಕಾರಿಗಳು ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಿರಲೇ ಬೇಕು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹೇಳಿದೆ. ಯಾವುದೇ ಪ್ರೇಕ್ಷಕರನ್ನು ಸ್ಟೇಡಿಯಂನಲ್ಲಿ ಪ್ರವೇಶವನ್ನು ನೀಡದೆ ಅಥ್ಲೀಟ್ಗಳಿಗೆ ಹುರಿದುಂಬಿಸಲು ಹಿಂದಿನ ಒಲಂಪಿಕ್ಸ್ನಲ್ಲಿ ಪ್ರೇಕ್ಷಕರು ಹುರಿದುಂಬಿಸಿದ ಧ್ವನಿಯನ್ನು ಸೌಂಡ್ ಸಿಸ್ಟಮ್ನಲ್ಲಿ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಟೋಕಿಯೋ ಒಲಂಪಿಕ್ಸ್ ಜುಲೈ 23 ರಂದು ಪ್ರಾರಂಭವಾಗಲಿದೆ.

First published: