ಬ್ರೆಜಿಲ್ (ಅಕ್ಟೋಬರ್ 22): ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೋನಾ ಸೋಂಕಿಗೆ ಈಗಾಗಲೇ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಕೋಟ್ಯಾಂತರ ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಭಾರತದಲ್ಲೂ ಸಹ ಲಕ್ಷಾಂತರ ಜನರ ಜೀವಕ್ಕೆ ಕುತ್ತು ತಂದಿರುವ ಕೊರೋನಾಗೆ ಲಸಿಕೆ ಕಂಡುಹಿಡಿಯಲು ವಿಶ್ವದ ಅನೇಕ ಫಾರ್ಮಾ ಸಂಸ್ಥೆಗಳು ದೇಶಗಳು ಕಳೆದ ಒಂದು ವರ್ಷದಿಂದ ಸತತ ಸಂಶೋಧನೆಯಲ್ಲಿ ತೊಡಗಿವೆ. ಅಂತಹ ಒಂದು ಸಂಶೋಧನೆಗಳ ಪೈಕಿ ಪ್ರಮುಖವಾದ ಸಂಶೋಧನೆಯೇ ಬ್ರೆಜಿಲ್ ದೇಶದ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಕೈಗೊಂಡ ಸಂಶೋಧನೆಯಾಗಿದೆ. ಈ ಸಂಸ್ಥೆಗಳು ಕೈಗೊಂಡ ಕೋವಿಡ್-19 ಲಸಿಕೆ ಅಭಿವೃದ್ಧಿ ಕೆಲಸ ಮೂರು ಹಂತಗಳನ್ನು ದಾಟಿ ಇದೀಗ ಕ್ರಿನಿಕಲ್ ಟ್ರಯಲ್ ಹಂತಕ್ಕೆ ತಲುಪಿದೆ. ಆದರೆ, "ದುರಾದೃಷ್ಟವಶಾತ್ ಲಸಿಕೆಯ ಕ್ರಿನಿಕಲ್ ಟ್ರಯಲ್ಗೆ ಒಳಗಾಗಿದ್ದ ಸ್ವಯಂಸೇವಕರೊಬ್ಬರು ಸಾವನ್ನಪ್ಪಿದ್ದಾರೆ" ಎಂದು ಬ್ರೆಜಿಲ್ ಆರೋಗ್ಯ ಪ್ರಾಧಿಕಾರ ಅನ್ವಿಸಾ ಬುಧವಾರ ತಿಳಿಸಿದೆ.
ಆದರೆ, ಪ್ರಯೋಗದಲ್ಲಿ ಸ್ವಯಂಸೇವಕನ ಸಾವಿನ ನಂತರವೂ ಲಸಿಕೆಯ ಪರೀಕ್ಷೆ ಮುಂದುವರಿಯುತ್ತದೆ. ಪ್ರಯೋಗಗಳಲ್ಲಿ ಭಾಗಿಯಾಗಿರುವವರ ವೈದ್ಯಕೀಯ ಗೌಪ್ಯತೆಯನ್ನು ಉಲ್ಲೇಖಿಸಿ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ಬ್ರೆಜಿಲ್ ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದೆ.
ಬ್ರೆಜಿಲ್ನಲ್ಲಿ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಸಂಘಟಿಸಲು ಸಹಾಯ ಮಾಡುತ್ತಿರುವ ಫೆಡರಲ್ ಯೂನಿವರ್ಸಿಟಿ ಆಫ್ ಸಾವೊ ಪಾಲೋ, ಪ್ರಯೋಗದಲ್ಲಿ ಮೃತಪಟ್ಟ ಸ್ವಯಂಸೇವಕ ಬ್ರೆಜಿಲ್ ದೇಶದ ವ್ಯಕ್ತಿ. ಆದರೆ, ಆತ ಬ್ರೆಜಿಲ್ ದೇಶದಲ್ಲಿ ಎಲ್ಲಿ ವಾಸಿಸುತ್ತಿದ್ದಾನೆಂದು ಹೇಳಲು ಸಾಧ್ಯವಿಲ್ಲ ಎಂದಿದೆ.
ಈ ಪ್ರಕರಣದಿಂದಾಗಿ ಷೇರುಪೇಟೆಯಲ್ಲಿ ಅಸ್ಟ್ರಾಜೆನೆಕಾ ಷೇರುಗಳು ನಕಾರಾತ್ಮಕವಾಗಿ ಮಾರ್ಪಟ್ಟವು ಮತ್ತು ಶೇ.1.7 ರಷ್ಟು ಕುಸಿದಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಟಿಆರ್ಪಿ ಹಗರಣ; ಮಹಾರಾಷ್ಟ್ರದಲ್ಲಿ ಸಿಬಿಐ ತನಿಖೆಯನ್ನು ನಿರ್ಬಂಧಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಫೆಡರಲ್ ಸರ್ಕಾರವು ಈಗಾಗಲೇ ಯುಕೆಯಿಂದ ಲಸಿಕೆಯನ್ನು ಖರೀದಿಸಿ ರಿಯೊ ಡಿ ಜನೈರೊದಲ್ಲಿನ ತನ್ನ ಬಯೋಮೆಡಿಕಲ್ ಸಂಶೋಧನಾ ಕೇಂದ್ರ ಫಿಯೋಕ್ರೂಜ್ನಲ್ಲಿ ಉತ್ಪಾದಿಸುವ ಯೋಜನೆಯನ್ನು ಹೊಂದಿದೆ. ಇನ್ನೂ ಚೀನಾದ ಸಿನೋವಾಕ್ನಿಂದ ಸ್ಪರ್ಧಾತ್ಮಕ ಲಸಿಕೆಯನ್ನು ಸಾವೊ ಪಾಲೊ ರಾಜ್ಯದ ಸಂಶೋಧನಾ ಕೇಂದ್ರ ಬುಟಾಂಟನ್ ಇನ್ಸ್ಟಿಟ್ಯೂಟ್ ಪರೀಕ್ಷಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ