ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಹಳ್ಳಿಜನ ಆತ್ಮಹತ್ಯೆ ಮಾಡ್ಕೋತೀವಿ ಅಂತಾರೆ

ಗಡಿ ಜಿಲ್ಲೆ ಚಾಮರಾಜನಗರ ದಲ್ಲಿ ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರಗಳು, ಸುಳ್ಳು ವದಂತಿಗಳು ಹಬ್ಬಿವೆ. ಇದನ್ನು ನಂಬಿದ ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಆಶಾ ಕಾರ್ಯಕರ್ತೆ

ಆಶಾ ಕಾರ್ಯಕರ್ತೆ

  • Share this:
ಚಾಮರಾಜನಗರ ( ಜೂ. 09): ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರದ ಪರಿಣಾಮ ಬುಡಕಟ್ಟು ಸೋಲಿಗರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹೆದರಿ  ಕಾಡಿಗೆ ಹೋಗಿ ಅವಿತುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಕೆಲವು ಹಳ್ಳಿಗಳಲ್ಲಿ  ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಆತ್ಮಹತ್ಯೆ ಮಾಡ್ಕೊಳ್ಳುತ್ತೇವೆ ಎಂದು ಜನ ಬೆದರಿಕೆ ಹಾಕುತ್ತಿರುವ ವಿಲಕ್ಷಣ ಘಟನೆಗಳು ಜರುಗುತ್ತಿವೆ. ಜಿಲ್ಲೆಯ ಹನೂರು ತಾಲೂಕಿನ ಯಜಮಾನದೊಡ್ಡಿ, ಮೇಸ್ತ್ರಿ ದೊಡ್ಡಿ ಮೊದಲಾದ ಹಾಡಿಗಳಲ್ಲಿ ಸೋಲಿಗರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ, ಕೋವಿಡ್ ಕ್ಯಾಪ್ಟನ್, ಆಶಾ ಕಾರ್ಯಕರ್ತೆಯರು,  ಗ್ರಾಮಪಂಚಾಯ್ತಿ ಅಧ್ಯಕ್ಷ ಸದಸ್ಯರು, ಸತತ ಮೂರು ದಿನ ತಿರುಗಿದರು ಯಾವ ಸೋಲಿಗರು  ಕೈಗೆ ಸಿಗುತ್ತಿಲ್ಲ. ಕೆಲವರು ಕಾಡಿಗೆ ಹೋಗಿ ಅವಿತುಕೊಂಡರೆ ಮತ್ತೆ ಕೆಲವರು  ಮನೆಯಲ್ಲಿ ಇದ್ದರೂ ಬಾಗಿಲು ತೆರೆಯದೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.

ಇನ್ನೊಂದೆಡೆ ಹಳ್ಳಿಗಳಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದರೆ  ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರಂತೆ. ಹಾಗಂತ ಆಶಾ ಕಾರ್ಯಕರ್ತೆಯರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮುಂದೆ ತಮ್ಮ  ಅಳಲು ತೋಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೋಕಿನ ಶಿವಪುರ ಗ್ರಾಮ ಪಂಚಾಯತಿ ಟಾಸ್ಕ್ ಪೋರ್ಸ್ ಸಭೆಯಲ್ಲಿ ನಡೆಯಿತು.

ಕೊರೋನಾ ಟೆಸ್ಟ್ ಹಾಗೂ ಲಸಿಕೆ ಪ್ರಗತಿ ಬಗ್ಗೆ ಸಭೆಯಲ್ಲಿ  ಸಚಿವ ಸುರೇಶ್ ಕುಮಾರ್ ಮಾಹಿತಿ ಕೇಳಿದಾಗ ಎದ್ದು ನಿಂತ ಆಶಾ ಕಾರ್ಯಕರ್ತೆಯೊಬ್ಬರು, ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಿ ಅಂತಾ ಜನರಲ್ಲಿ ಮನವಿ ಮಾಡುತ್ತಿದ್ದೇವೆ ಸರ್. ಆದರೆ, ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ  ನಮಗೇನಾದರೂ ಆದರೆ ನೀವು ಜವಾಬ್ದಾರರಾಗುತ್ತೀರಾ ಎಂದು ಜನ ಕೇಳುತ್ತಿದ್ದಾರೆ ಅಲ್ಲದೆ ಲಸಿಕೆ ಹಾಕೋದರಿಂದ ನಿಮಗೇನೋ ಲಾಭವಿದೆ. ಅದಕ್ಕೆ ಲಸಿಕೆ ಹಾಕಲು ಬರುತ್ತಿದ್ದೀರಾ ಎಂದು ತಿರುಗಿ ಬೀಳ್ತಾರೆ, ನೀವು ಬಲವಂತ ಮಾಡಿದ್ರೆ ನಾವು ಆತ್ಮಹತ್ಯೆ ಮಾಡ್ಕೋತ್ತೀವಿ ಅಂತಾರೆ ಸರ್ ಎಂದು  ತಮ್ಮ ಅಳಲು ತೋಡಿಕೊಂಡರು.

ಇದನ್ನು ಓದಿ: ರವಿ ಚೆನ್ನಣ್ಣನವರ್​ ಸೇರಿದಂತೆ 12 ಐಪಿಎಸ್​ ಅಧಿಕಾರಿಗಳ ವರ್ಗಾವಣೆ

ನಾವೇ ಹೋದರೆ ಜನ ಬರೋದಿಲ್ಲ, ನಮ್ಮ ಜೊತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಬರಬೇಕು, ಹಾಗಾದರೆ ಜನ ಬರ್ತಾರೆ, ಅಷ್ಟೇ ಅಲ್ಲ ಅಧ್ಯಕ್ಷರು ಸದಸ್ಯರು ಮೊದಲು ಲಸಿಕೆ ಹಾಕಿಸ್ಕೊಂಡ್ರೆ ಎಲ್ಲರೂ ಹಾಕಿಸ್ಕೊಳ್ತಾರೆ  ಸರ್ ಎಂದು ಎಂದು ಮತ್ತೊಬ್ಬ ಆಶಾಕಾರ್ಯಕರ್ತೆ ಹೇಳಿದಾಗ‌ ಸಭೆಯಲ್ಲಿ ಇದಕ್ಕೆ ಪೂರಕವಾಗಿ ಚಪ್ಪಾಳೆಯ ಪ್ರತಿಕ್ರಿಯೆ ಬಂತು

ಒಟ್ಟಾರೆ  ಗಡಿ ಜಿಲ್ಲೆ ಚಾಮರಾಜನಗರ ದಲ್ಲಿ ಕೋವಿಡ್ ಲಸಿಕೆ ಬಗ್ಗೆ ಸಲ್ಲದ ಅಪಪ್ರಚಾರಗಳು, ಸುಳ್ಳು ವದಂತಿಗಳು ಹಬ್ಬಿವೆ. ಇದನ್ನು ನಂಬಿದ ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ‌. ಲಸಿಕೆ  ಬಗ್ಗೆ ಜನರಲ್ಲಿ ಇರುವ ಅಪನಂಬಿಕೆ ಹೋಗಲಾಡಿಸುವ  ಹಾಗು ಕೋವಿಡ್ ಲಸಿಕೆಯ ಪ್ರಯೋಜನಗಳ ಬಗ್ಗೆ   ವ್ಯಾಪಕ ಜಾಗೃತಿ ಮೂಡಿಸಬೇಕಾದ  ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕಿದೆ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: