ಕೊರೋನಾ ಭೀತಿಯಿಂದ ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಡಿದುಕೊಂಡ ನೂರಾರು ಹಳ್ಳಿಗಳು; ಆರ್ಥಿಕತೆ ಮೇಲೆ ತೀವ್ರ ಹೊಡೆತ

ಏಪ್ರಿಲ್​ 14ರವರೆಗೆ ಹೊರಗಿನವರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಗ್ರಾಮದ ಪ್ರವೇಶ ದ್ವಾರದ ಬಳಿ ಬ್ಯಾನರ್​ ಕೂಡ ಹಾಕಿಸಿದ್ದಾರೆ. ಒಂದು ವೇಳೆ ಹೊರಗಿನಿಂದ ಬಂದ ವ್ಯಕ್ತಿ ಸ್ವಂತ ಹಳ್ಳಿಯವನೇ ಆಗಿದ್ದರೂ ಸಹ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಸಿರು ನಿಶಾನೆ ನೀಡಿದ ಬಳಿಕವಷ್ಟೇ ಅವರನ್ನು ಹಳ್ಳಿಯೊಳಗೆ ಬಿಟ್ಟುಕೊಳ್ಳುತ್ತಿದ್ದಾರೆ.

ಹಾಸನ ಜಿಲ್ಲೆಯ ಹಳ್ಳಿಯೊಂದರ ಗ್ರಾಮಸ್ಥರು ಊರಿನ ಸಂಪರ್ಕ ರಸ್ತೆ ಬ್ಲಾಕ್​ ಮಾಡಿ, ಕಾವಲು ಕಾಯುತ್ತಿರುವುದು.

ಹಾಸನ ಜಿಲ್ಲೆಯ ಹಳ್ಳಿಯೊಂದರ ಗ್ರಾಮಸ್ಥರು ಊರಿನ ಸಂಪರ್ಕ ರಸ್ತೆ ಬ್ಲಾಕ್​ ಮಾಡಿ, ಕಾವಲು ಕಾಯುತ್ತಿರುವುದು.

  • Share this:

  • ಡಿ.ಪಿ. ಸತೀಶ್


ಬೆಂಗಳೂರು: ಹೊರಗಿನವರಿಂದ ಕರೋನವೈರಸ್ ಹಬ್ಬುವ ಭೀತಿಯಿಂದ ಕರ್ನಾಟಕದ ಹಾಸನ ಜಿಲ್ಲೆಯ ಹಲವಾರು ಹಳ್ಳಿಗಳು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು, ಸಂಪೂರ್ಣವಾಗಿ ಪ್ರತ್ಯೇಕಗೊಂಡಿವೆ. 

ಜಿಲ್ಲೆಯ ಕನಿಷ್ಠ ಒಂದು ಡಜನ್ ಗ್ರಾಮಗಳು ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್ ಹಾಕುವ ಮೂಲಕ ವಿಶ್ವದ ಇತರ ಭಾಗಗಳೊಂದಿಗಿನ ಎಲ್ಲಾ ಸಂಪರ್ಕಗಳನ್ನು ಕಡಿದುಕೊಂಡಿವೆ.

ಚನ್ನರಾಯಪಟ್ಟಣ ತಾಲೂಕಿನ ಹೂವಿನಹಳ್ಳಿಯಲ್ಲಿ ಗ್ರಾಮಸ್ಥರೇ ಹಲವು ತಂಡಗಳನ್ನು ರಚಿಸಿದ್ದು, ಈ ತಂಡಗಳು ಗ್ರಾಮದ ಗಡಿಯನ್ನು ದಿನದ ಇಪ್ಪತ್ನಾಲ್ಕು ತಾಸು ವಿವಿಧ ಪಾಳಿಯಲ್ಲಿ ಕಾಯುತ್ತಿವೆ. ಅಷ್ಟೇ ಅಲ್ಲದೇ, ಏಪ್ರಿಲ್​ 14ರವರೆಗೆ ಹೊರಗಿನವರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಗ್ರಾಮದ ಪ್ರವೇಶ ದ್ವಾರದ ಬಳಿ ಬ್ಯಾನರ್​ ಕೂಡ ಹಾಕಿಸಿದ್ದಾರೆ. ಒಂದು ವೇಳೆ ಹೊರಗಿನಿಂದ ಬಂದ ವ್ಯಕ್ತಿ ಸ್ವಂತ ಹಳ್ಳಿಯವನೇ ಆಗಿದ್ದರೂ ಸಹ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಸಿರು ನಿಶಾನೆ ನೀಡಿದ ಬಳಿಕವಷ್ಟೇ ಅವರನ್ನು ಹಳ್ಳಿಯೊಳಗೆ ಬಿಟ್ಟುಕೊಳ್ಳುತ್ತಿದ್ದಾರೆ.

ಅರಸೀಕೆರೆ ತಾಲೂಕಿನ ಅಮ್ಮನಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರವೇಶ ದ್ವಾರದಲ್ಲಿ ಸೀರೆಯನ್ನು ಪರದೆಯಂತೆ ಕಟ್ಟಿ, ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೇ ಏಪ್ರಿಲ್ 14ರವರೆಗೆ ಗ್ರಾಮದವರು ಹೊರಗೆ ಹೋಗದಂತೆ ಹಾಗೂ ಹೊರಗಿನವರು ಗ್ರಾಮದೊಳಗೆ ಬಾರದಂತೆ ನಿಷೇಧ ವಿಧಿಸಲಾಗಿದೆ. ಇಲ್ಲೂ ಸಹ ದಿನದ ಇಪ್ಪತ್ತಾಲ್ಕು ಗಂಟೆ ಯುವಕರು ಗ್ರಾಮದ ಆಗಮನ ಮತ್ತು ನಿರ್ಗಮನದ ಚೆಕ್​ಪೋಸ್ಟ್​ ಬಳಿ ಪಹರೆ ಕಾಯುತ್ತಿದ್ದಾರೆ.

ಸಣ್ಣ ಪಟ್ಟಣವಾದ ಅರಕಲಗೂಡಿನಲ್ಲೂ ಸ್ಥಳೀಯ ಶಾಸಕ ಎ.ಟಿ.ರಾಮಸ್ವಾಮಿ ಅವರು ಪಟ್ಟಣಕ್ಕೆ ಪ್ರವೇಶಿಸುವವರ ಮೇಲೆ ಸ್ವತಃ ಕಣ್ಣಿಟ್ಟಿದ್ದಾರೆ. ಅರಕಲಗೂಡಿಗೆ ಆಗಮಿಸುವ ಪ್ರತಿಯೊಬ್ಬರನ್ನು ಪರಿಶೀಲಿಸಿ ಬಿಡುವಂತೆ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಬಿ ಹೊನ್ನೆನಹಳ್ಳಿ ಗ್ರಾಮಸ್ಥರು ಒಂದು ಹೆಜ್ಜೆ ಮುಂದೆ ಹೋಗಿ, ಗ್ರಾಮದ ಪ್ರಮುಖ ಮುಖ್ಯರಸ್ತೆಗೆ ತಂತಿಬೇಲಿಯನ್ನೇ ಹಾಕಿಸಿದ್ದಾರೆ. ಒಂದು ವೇಳೆ ಯಾರಾದರೂ ಗ್ರಾಮದ ಬಳಿ ಸುಳಿದಾಡಿದರೆ ಮಾಸ್ಕ್​ಧಾರಿಗಳಾದ ಯುವಕರು ದೊಣ್ಣೆ-ಬಡಿಗೆಯೊಂದಿಗೆ ಬಂದು ಅವನು ಅಥವಾ ಅವಳನ್ನು ಅಲ್ಲಿಂದ ತೊಲಗುವಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಆದಾಗ್ಯೂ, ಈ ರೀತಿಯ ಜಾಗರೂಕತೆಯ ಕ್ರಮಗಳು ಕೆಲ ಅಚಾತುರ್ಯಗಳಿಗೂ ಕಾರಣವಾಗುತ್ತದೆ. ಫ್ರೆಂಚ್​ ಪ್ರವಾಸಿಗನೊಬ್ಬ ಹಳ್ಳಿಯೊಂದರ ಬಳಿ ನಿಂತಿದ್ದಾಗ ಕೆಲವು ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ಬಳಿಕ ಆ ಪ್ರವಾಸಿಗನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಈ ಎಲ್ಲ ಹಳ್ಳಿಗಳಲ್ಲೂ ಸಹ ತರಕಾರಿ, ತೆಂಗು ಬೆಳೆಯಲಾಗುತ್ತದೆ. ಹೈನುಗಾರಿಕೆ, ಕೋಳಿ ಸಾಕಾಣಿಕೆ ಮಾಡಲಾಗುತ್ತದೆ. ಡಜನ್​ಗೂ ಹೆಚ್ಚು ಹಳ್ಳಿಗಳು ಸಂಪೂರ್ಣವಾಗಿ ಐಸೋಲೆಷನ್ ಆಗುವ ಮೂಲಕ ಸ್ಥಳೀಯ ಆರ್ಥಿಕತೆ ರಾತ್ರೋರಾತ್ರಿ ಕುಸಿದುಬಿದ್ದಿದೆ. ಸ್ಥಳೀಯ ಡೈರಿಗಳಿಗೆ ಸಾಕಷ್ಟು ಪ್ರಮಾಣದ ಹಾಲು ಬರುತ್ತಿಲ್ಲ. ತರಕಾರಿ ಮತ್ತು ಮಾಂಸ ಸರಬರಾಜನ್ನು ಬಹುತೇಕ ನಿಲ್ಲಿಸಲಾಗಿದೆ.

ಈ ಬಗ್ಗೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾತನಾಡಿ, ಇಂತಹ ಸಾಮಾಜಿಕ ಬಹಿಷ್ಕಾರದ ಬಗ್ಗೆ ಜಿಲ್ಲಾಡಳಿತಕ್ಕೆ ಗೊತ್ತಿದೆ. ಮತ್ತು ಅದನ್ನು ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಹೇಳುತ್ತಾರೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್​ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್​.ಕೆ. ಅತೀಖ್ ಅವರು ನ್ಯೂಸ್ 18ನೊಂದಿಗೆ ಮಾತನಾಡಿದ್ದಾರೆ. "ಇಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಈ ಸಮಸ್ಯೆಯನ್ನು ನಿಭಾಯಿಸಲು ಮತ್ತು ಕೊರೋನಾ ವೈರಸ್ ಬಿಕ್ಕಟ್ಟಿನ ಬಗ್ಗೆ ಗ್ರಾಮೀಣ ಸಮುದಾಯಗಳಿಗೆ ಮಾರ್ಗದರ್ಶನ ನೀಡಲು, ನಾವು ಗ್ರಾಮ ಮಟ್ಟದಲ್ಲಿ ಕಾರ್ಯಪಡೆಗಳನ್ನು ಸ್ಥಾಪಿಸಿದ್ದೇವೆ. ಪಂಚಾಯತಿ ಮುಖ್ಯಸ್ಥರು ಆ ಕಾರ್ಯಪಡೆಗಳ ಮುಖ್ಯಸ್ಥರಾಗಿರಲಿದ್ದಾರೆ. ಕಾರ್ಯಪಡೆಗಳಿಗೆ ವಿವರವಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗಿದೆ. ಇವುಗಳಲ್ಲಿ ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೃದ್ಧರ ಆರೋಗ್ಯ ನಿರ್ವಾಹಣೆ ಮತ್ತು ಅಪಾಯದಲ್ಲಿರುವ ವ್ಯಕ್ತಿಗಳ ಮೇಲ್ವಿಚಾರಣೆ ಮಾಡುವುದು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಮನೆಗಳಿಗೆ ಪಡಿತರ ವಿತರಣೆ ಮಾಡುವ ವ್ಯವಸ್ಥೆ ಕೂಡ ಸೇರಿವೆ."

ಇದನ್ನು ಓದಿ: ಕರ್ನಾಟಕದಲ್ಲಿ 10 ತಿಂಗಳ ಮಗು ಸೇರಿ 7 ಜನರಿಗೆ ಕೊರೋನಾ ಪತ್ತೆ; ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ

"ಸಾಂಕ್ರಾಮಿಕ ರೋಗದ ಬಗ್ಗೆ ಸರಿಯಾದ ರೀತಿಯಲ್ಲಿ ಜಾಗೃತಿ ಮೂಡಿಸಲು ಮತ್ತು ಯಾವುದೇ ಭಯ ಹಾಗೂ ಬಹಿಷ್ಕಾರದ ಕ್ರಮಗಳಿಲ್ಲದ ಹಾಗೆ ನಾವು ಈ ಕಾರ್ಯಪಡೆಗಳಿಗೆ ತರಬೇತಿ ನೀಡುತ್ತಿದ್ದೇವೆ," ಎಂದು ಅವರು ಹೇಳಿದರು.

ಹಲವು ವರದಿಗಳ ಪ್ರಕಾರ ರಾಜ್ಯಾದ್ಯಂತ ನೂರಾರು ಹಳ್ಳಿಗಳು ಹೊರಜಗತ್ತಿನೊಂದಿಗೆ ತಮ್ಮ ಸಂಪರ್ಕವನ್ನೇ ಕಡಿದುಕೊಂಡಿವೆ.

ನೂರಾರು ಕಿಲೋಮೀಟರ್ ವಿಸ್ತಾರವಾದ ಸಾವಿರಾರು ಹಳ್ಳಿಗಳಲ್ಲಿ ವಿಲಕ್ಷಣ ಮೌನ ಆವರಿಸಿದೆ. ಸುಂದರ ಮತ್ತು ಗದ್ದಲ  ಗ್ರಾಮೀಣ ಕರ್ನಾಟಕ ಭೂತ ರಾಜ್ಯವಾಗಿ ಪರಿವರ್ತನೆಯಾಗಿದೆ.
First published: