ಮೋದಿಯನ್ನು ಟೀಕಿಸಿದವರ ಬಂಧನ; ನನ್ನನ್ನೂ ಅರೆಸ್ಟ್ ಮಾಡಿ ಎಂದು ಸವಾಲೆಸೆದ ರಾಹುಲ್ ಗಾಂಧಿ!
'ನಮಗೇ ಲಸಿಕೆ ಕೊರತೆ ಇರುವಾಗ ವಿದೇಶಗಳಿಗೆ ಪ್ರಧಾನಿ ಮೋದಿ ಲಸಿಕೆಯನ್ನು ಏಕೆ ನೀಡಬೇಕಿತ್ತು' ಎಂದು ಪೋಸ್ಟ್ ಮಾಡಿವರನ್ನು ಪೊಲೀಸರು ಬಂಧಿಸಿದ್ದಾರೆ. ಮೋದಿಯನ್ನು ಟೀಕಿಸುವುದು ಅಪರಾಧವೇ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಲಸಿಕೆ ನೀತಿಯನ್ನು ಟೀಕಿಸಿದ 25ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಮ್ಮ ಮಕ್ಕಳಿಗೆ ಸೇರಬೇಕಿದ್ದ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿದಿರಿ ಎಂದು ಪಿಎಂ ಮೋದಿಯವರನ್ನು ಪ್ರಶ್ನಿಸುವ ಪೋಸ್ಟ್ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳನ್ನು ವೈರಲ್ ಆಗಿದೆ. ಈ ಪೋಸ್ಟನ್ನು ಶೇರ್ ಮಾಡಿದವರನ್ನು ದೆಹಲಿ ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ತಮ್ಮ ಟ್ವಿಟರ್ ಖಾತೆಯನ್ನು ವಿವಾದಿತ ಪೋಸ್ಟನ್ನು ಅಪಲೋಡ್ ಮಾಡಿ ನನ್ನನ್ನೂ ಬಂಧಿಸಿ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿಯನ್ನು ಟೀಕಿಸಿದವರೆಲ್ಲರನ್ನೂ ಬಂಧಿಸುವುದಾದರೆ ನನ್ನನ್ನು ಬಂಧಿಸಿ ಎಂದು ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ. ಆಮ್ ಆದ್ಮಿ ಪಕ್ಷ ಕೂಡ ತನ್ನ ಅಧಿಕೃತ ಖಾತೆಯಲ್ಲಿ ವಿದೇಶಕ್ಕೆ ಏಕೆ ಲಸಿಕೆ ನೀಡಿದಿರಿ ಎಂಬ ಬರಹವನ್ನು ಪೋಸ್ಟ್ ಮಾಡಿದೆ. ಭಾರತದಲ್ಲಿ ಕೊರೋನಾ ಲಸಿಕೆಯ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಮಗೆ ಸೇರಬೇಕಿದ್ದ ಲಸಿಕೆಯನ್ನು ವಿದೇಶಗಳಿಗೆ ಪ್ರಧಾನಿ ಮೋದಿ ದಾನ ಮಾಡಿದ್ದಾರೆ. ಏಕೆ ಈ ರೀತಿ ದಾನ ಮಾಡಬೇಕಿತ್ತು ಎಂಬ ಬರಹ ನಿನ್ನೆಯಿಂದ ಭಾರೀ ಸಂಚಲನ ಸೃಷ್ಟಿಸಿದೆ.
ಈ ಬರಹವನ್ನು ಶೇರ್ ಮಾಡಿದವರನ್ನು ಬಂಧಿಸುತ್ತಿದಂತೆ ವಿಷಯ ರಾಜಕೀಯ ಜಟಾಪಟಿಗೆ ಎಡೆ ಮಾಡಿದೆ. ಇನ್ನು ದೆಹಲಿ ಪೊಲೀಸರು 25ಕ್ಕೂ ಹೆಚ್ಚು ಜನರ ಮೇಲೆ ಪೀನಲ್ ಕೋಡ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರ ಲಸಿಕೆ ನೀತಿಯನ್ನು ಟೀಕಿಸುವುದು ಹೇಗೆ ಅಪರಾಧವಾಗುತ್ತೆ ಎಂದು ಕಿಡಿಕಾರುತ್ತಿದ್ದಾರೆ.
ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಸಹ ದೆಹಲಿ ಪೊಲೀಸರ ನಡೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಮೋದಿಯನ್ನು ಟೀಕಿಸುವುದು ಈಗ ಅಪರಾಧವಾಯಿಯೇ? ಹಾಗಾದರೆ ನನ್ನನ್ನು ಬಂಧಿಸಿ ನೋಡೋಣ ಎಂದು ದೆಹಲಿ ಪೊಲೀಸರಿಗೆ ಸವಾಲು ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಈ ಬಗ್ಗೆ ಭಾರೀ ಪರ-ವಿರೋಧ ವ್ಯಕ್ತವಾಗುತ್ತಿದೆ.
Published by:Kavya V
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ