ನವದೆಹಲಿ(ಜೂನ್ 06): ಭಾರತಕ್ಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ಭೂಗತಪಾತಕಿ ದಾವೂದ್ ಇಬ್ರಾಹಿಂ ಕೊರೋನಾ ವೈರಸ್ನಿಂದ ಸಾವನ್ನಪ್ಪಿದ್ಧಾರೆ ಎಂಬಂತಹ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂ ಮತ್ತವರ ಹೆಂಡತಿಗೆ ಕೋವಿಡ್-19 ರೋಗದ ಸೋಂಕು ತಗುಲಿದ್ದು, ಅವರನ್ನು ಕರಾಚಿಯ ಆರ್ಮಿ ಹಾಸ್ಪಿಟಲ್ಗೆ ದಾಖಲಿಸಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ ಎಂದು ಕೆಲ ಮಾಧ್ಯಮಗಳಲ್ಲೂ ಸುದ್ದಿಗಳಾಗಿವೆ. ಆದರೆ, ದಾವೂದ್ ಸಹೋದರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸುದ್ದಿಗಳನ್ನು ಅಲ್ಲಗಳೆದಿದ್ದಾರೆ.
ದಾವೂದ್ ಇಬ್ರಾಹಿಂನ ಎಲ್ಲಾ ಚಟುವಟಿಕೆ ಹಾಗೂ ಹಣಕಾಸು ವ್ಯವಹಾರಗಳನ್ನ ನೋಡಿಕೊಳ್ಳುವ ಅನೀಸ್ ಇಬ್ರಾಹಿಂ ಅವರು ತಮ್ಮ ಅಣ್ಣನ ಬಗ್ಗೆ ಹರಡಿರುವ ಸುದ್ದಿಗಳು ಬರೇ ವದಂತಿ ಎಂದಿದ್ದಾರೆಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ತಮ್ಮ ಸಹೋದರ ದಾವೂದ್ ಇಬ್ರಾಹಿಂ ಸೇರಿದಂತೆ ಇಡೀ ಕುಟುಂಬದ ಯಾರೊಬ್ಬರಿಗೂ ಕೊರೋನಾ ಸೋಂಕು ತಗುಲಿಲ್ಲ ಎಂದು ಅನೀಸ್ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್; ವಿಡಿಯೋ ವೈರಲ್
ಆದರೆ, ಗುಪ್ತಚರ ವರದಿಗಳನ್ನ ಆಧರಿಸಿ ಕೆಲ ಮಾಧ್ಯಮಗಳು, ದಾವೂದ್ ಮತ್ತವರ ಹೆಂಡತಿಗೆ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿ ಮಾಡಿದ್ದವು. ಹಾಗೆಯೇ, ದಾವೂದ್ನ ಖಾಸಗಿ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎನ್ನಲಾಗಿತ್ತು.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾರೆಂದು ಭಾರತದ ಆರೋಪಕ್ಕೆ ಈ ಸುದ್ದಿ ಪುಷ್ಟಿ ನೀಡಿತ್ತು. ದಾವೂದ್ ಕರಾಚಿಯಲ್ಲಿದ್ದಾನೆಂದು ಭಾರತ ಪದೇಪದೇ ಹೇಳುತ್ತಲೇ ಬಂದಿದೆ. ಆದರೆ, ಪಾಕಿಸ್ತಾನ ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಇದೀಗ ಕೊರೋನಾ ಸೋಂಕಿನ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅನೀಸ್ ಇಬ್ರಾಹಿಂ ಅವರು ತಮ್ಮ ಕುಟುಂಬದವರು ಪಾಕಿಸ್ತಾನದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಆದರೆ, ಯುಎಇ ಮತ್ತು ಪಾಕಿಸ್ತಾನದಲ್ಲಿ ವ್ಯವಹಾರಗಳಿರುವುದನ್ನು ಅನೀಸ್ ಒಪ್ಪಿಕೊಂಡಿದ್ದಾಗಿ ಐಎಎನ್ಎಸ್ ಸುದ್ದಿ ಸಂಸ್ಥೆಯ ವರದಿಯಿಂದ ತಿಳಿದುಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ