ಕೊರೋನಾ ಸಂಕಷ್ಟ: ಹಸಿದವರಿಗೆ ಅನ್ನದಾತರಾದ ಬೆಂಗಳೂರಿನ ಅಪಾರ್ಟ್ ಮೆಂಟ್ ನಿವಾಸಿಗಳು

ಲಾಕ್‌ಡೌನ್ ಆದಾಗಿನಿಂದ ಉಚಿತವಾಗಿ ಗುಣಮಟ್ಟದ ಬಿಸಿಬಿಸಿ ಆಹಾರ ಪಾಕೆಟ್ ನೀಡುತ್ತಿರುವ ಶ್ರೀರಂಗ ಅಪಾರ್ಟ್ ಮೆಂಟ್ ನಿವಾಸಿಗಳು ಲಾಕ್ ಡೌನ್ ಮುಗಿಯುವರೆಗೆ ದಿನದ ಒಂದು ಹೊತ್ತು ಆಹಾರದ ಪಾಕೆಟ್ ನೀಡಲು ನಿರ್ಧರಿಸಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಏ.10): ಹಳ್ಳಿಗಳಲ್ಲಿ ಏನೇ ಸಮಸ್ಯೆ ಇದ್ದರೂ ಎಲ್ಲರೂ ಒಂದೆಡೆ ಸೇರಿ ಸಮಸ್ಯೆ ಬಗೆಹರಿಸುತ್ತಾರೆ. ಅದರೆ ಮಹಾನಗರಗಳಲ್ಲಿ ಹಾಗಲ್ಲ ಎಂದೇ ಜರಿಯುವವರೇ ಹೆಚ್ಚು. ಅದರಲಿ ಕೊರೋನಾ ಮಹಾಮಾರಿಗೆ ಅತಂತ್ರರಾಗಿ ಹಸಿದವರಿಗೆ ಪ್ರತಿಯೊಂದು ಜೀವಗಳ ಮನವೂ ಕರಗುತ್ತದೆ. ಬೆಂಗಳೂರಿನ ಅಪಾರ್ಟ್ ಮೆಂಟ್ ನಿವಾಸಿಗಳು ಹಸಿದ ಹೊಟ್ಟೆ ತುಂಬಿಸಿ ಅನ್ನದಾತರಾಗಿದ್ದಾರೆ.

ಕೊರೋನಾ ವೈರಸ್ ಭೀತಿಗೆ ವಿಶ್ವವೇ ಕಂಗೆಟ್ಟುಹೋಗಿದೆ. ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಅತಂತ್ರರಾಗಿ ಆಹಾರವಿಲ್ಲದೆ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ, ನಿರ್ಗತಿಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ಶ್ರೀ ರಂಗ ಅಪಾರ್ಟ್ ಮೆಂಟ್ ನಿವಾಸಿಗಳು ಕೊರೋನಾ ದಿಂದ ಸಂಕಷ್ಟ ಜೀವನ ನಡೆಸುತ್ತಿರುವ ಜೀವಗಳಿಗೆ ಆಹಾರ ಸೇವೆ ನೀಡುತ್ತಿದ್ದಾರೆ. ಅಂದಹಾಗೆ ಇಲ್ಲಿರುವ 30 ಪ್ಲಾಟ್ ಗಳಲ್ಲಿರುವ ಅಪಾರ್ಟೆಮೆಂಟ್ ನಿವಾಸಿಗಳು ತಾವೇ ಖುದ್ದು ಅಡುಗೆ ತಯಾರಿಸುತ್ತಾರೆ. ಹಿಂದಿನ ದಿನ ಸಂಜೆ ಬೇಕಾದ ಅಡುಗೆ ಸಾಮಾನು, ಸಾಮಗ್ರಿ ಖರೀದಿಸುತ್ತಾರೆ.

ಬೆಳಗ್ಗೆ ಎದ್ದು ಅಡುಗೆ ಮಾಡಲು ತರಕಾರಿ ತೊಳೆದು, ಹಂಚುವ ಕೆಲಸವನ್ನು ಫ್ಲಾಟ್ ಗಳ ಹೆಣ್ಣುಮಕ್ಕಳು ತಮ್ಮ ಮನೆಯ ಅಡುಗೆ ಕೆಲಸವೆಂಬಂತೆ ಉತ್ಸುಕತೆಯಿಂದ ಮಾಡುತ್ತಾರೆ. ದೊಡ್ಡ ಪಾತ್ರೆಯಲ್ಲಿ ಅಪಾರ್ಟ್ ಮೆಂಟ್ ಕೆಳಭಾಗದಲ್ಲಿ ಶುಚಿಗೊಳಿಸಿ ತಾವು ಕ್ಲೀನ್ ಆಗಿ ಅಡುಗೆ ತಯಾರಿಗೆ ಮುಂದಾಗುತ್ತಾರೆ. ಎಂಟು ಗಂಟೆ ವೇಳೆ ಫ್ಲಾಟ್ ನ ಗಂಡಸರು ಪಾರ್ಸಲ್ ಗೆ ಬೇಕಾದ ವಸ್ತು ತಂದು ಪ್ಯಾಕ್ ಮಾಡುತ್ತಾರೆ. ಇದೆಲ್ಲ ಕೆಲಸವನ್ನು ಯಾವುದೋ ಅಡುಗೆ ಸಿಬ್ಬಂದಿ ನಿಯೋಜಿಸಿ ಮಾಡದೇ ತಾವೇ ಖುದ್ದು ಕೈಗೆ ಹ್ಯಾಂಡ್ ಗ್ಲೌಸ್, ಮುಖಕ್ಕೆ ಗ್ಲೌಸ್ ಹಾಕಿಕೊಂಡು ಶುಚಿಯಾಗಿ ಸಾಮಾಜಿಕ ಅಂತರದಲ್ಲಿಯೇ ಅಡುಗೆ ತಯಾರಿಸುತ್ತಾರೆ.

apartment residents
ಆಹಾರ ತಯಾರಿಸುತ್ತಿರುವ ಅಪಾರ್ಟ್​ಮೆಂಟ್ ನಿವಾಸಿಗಳು


ಬೆಳಗ್ಗೆ 10 ವೇಳೆಗೆ ಮುನ್ನೂರಕ್ಕೂ ಹೆಚ್ಚು ಪಾರ್ಸಲ್ ರೆಡಿ ಮಾಡಿಕೊಂಡು ನಾಲ್ಕು ಬೈಕ್ ನಲ್ಲಿ ಕುಡಿಯುವ ನೀರಿ‌ನ ಪಾಕೆಟ್ ಜೊತೆ ಬೆಂಗಳೂರಿನ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ಸ್ಟೇಷನ್, ನಿಮ್ಹಾನ್ಸ್ ಗೆ ಖಾಯಂ ಆಗ ಪ್ರತಿದಿನ ನಿಗಧಿತ ಸಮಯಕ್ಕೆ ತೆರಳಿ ಕಾಯುತ್ತಿರುವ ಹಸಿದ ಜನರಿಗೆ ಪಾರ್ಸಲ್ ನೀಡುತ್ತಾರೆ. ನೀಡುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣೆ ಮಾಡುವುದು ಇವರ ಮತ್ತೊಂದು ವಿಶೇಷ.

ಲಾಕ್‌ಡೌನ್ ಆದಾಗಿನಿಂದ ಉಚಿತವಾಗಿ ಗುಣಮಟ್ಟದ ಬಿಸಿಬಿಸಿ ಆಹಾರ ಪಾಕೆಟ್ ನೀಡುತ್ತಿರುವ ಶ್ರೀ ರಂಗ ಅಪಾರ್ಟ್ ಮೆಂಟ್ ನಿವಾಸಿಗಳು ಲಾಕ್ ಡೌನ್ ಮುಗಿಯುವರೆಗೆ ದಿನದ ಒಂದು ಹೊತ್ತು ಆಹಾರದ ಪಾಕೆಟ್ ನೀಡಲು ನಿರ್ಧರಿಸಿದ್ದಾರೆ. ಅಂದಹಾಗೆ ಈ ಅಪಾರ್ಟೆಮೆಂಟ್ ನಿವಾಸಿಗಳಲ್ಲಿ ಪೊಲೀಸರು, ವೈದ್ಯರು, ಸಿಬ್ಬಂದಿ, ವ್ಯಾಪಾರಿಗಳು, ವಿದ್ಯಾರ್ಥಿಗಳು ಇದ್ದಾರೆ.

ದಿನವೊಂದಕ್ಕೆ ದಿನಸಿಯದ್ದೇ 10 ಸಾವಿರ ಖರ್ಚಾಗುತ್ತೆ. ಇದರ ಖರ್ಚನ್ನು ನಾವೆಲ್ಲ ಸಮವಾಗಿ ಹಂಚಿಕೊಳ್ಳುತ್ತೇವೆ ಎನ್ನುತ್ತಾರೆ ನಿವಾಸಿ ಪೊಲೀಸ್ ಶಿವಣ್ಣ.

ಇದನ್ನೂ ಓದಿ : ನೈರುತ್ಯ ರೈಲ್ವೆಯಿಂದ 312 ಐಸೋಲೇಷನ್ ಬೋಗಿಗಳ ನಿರ್ಮಾಣ; ಕೇಂದ್ರ ಸಚಿವ ಸುರೇಶ್ ಅಂಗಡಿ

ಹಸಿದವರಿಗೆ ಅನ್ನ ನೀಡುವುದು ಒಂದೊಳ್ಳೆ‌ ಕೆಲಸ. ನಗರದಲ್ಲಿ ಇರುವುದು ಸಹಾಯ ಮಾಡಲ್ಲ ಅಂತಾರೆ. ಆದರೆ ಪ್ರತಿಯೊಬ್ಬರಿಗೂ ಮನುಷ್ಯತ್ವ ಇದೆ. ಹಸಿದವರು ನಾವು ತಂದ ಊಟ ತಿಂದಾಗ ಆಗುವ ಆತ್ಮತೃಪ್ತಿ ಎಷ್ಟು ಕೊಟ್ಟರೂ ಸಿಗೋದಿಲ್ಲ. ಇಂಥ ಸಂದರ್ಭದಲ್ಲಿ ನಾವು ಸಹಾಯ ಮಾಡಲೇಬೇಕು ಅಲ್ಲವೇ ಎಂದು ಅಪಾರ್ಟ್ ಮೆಂಟ್ ನಿವಾಸಿ, ವ್ಯಾಪಾರಿ ರಮೇಶ್ ಪ್ರಶ್ನೆ ಮಾಡುತ್ತಾರೆ.
First published: