Corona Vaccine: ಕೊರೊನಾಗೆ ದೇಶ ತತ್ತರಿಸಿದ್ದು, ಲಕ್ಷಾಂತರ ಜನ ಬಲಿಯಾಗಿದ್ದಾರೆ. ಸದ್ಯ, ಕೋವಿಡ್ - 2ನೇ ಅಲೆಯ ತೀವ್ರತೆ ಕಡಿಮೆಯಾಗಿದ್ದರೂ, ಈಗಲೂ ಸಾಕಷ್ಟು ಜನ ಬಲಿಯಾಗುತ್ತಲೇ ಇದ್ದಾರೆ. ಕೊರೊನಾ ಲಸಿಕೆ ಈಗ ಹೆಚ್ಚು ಮಂದಿ ಪಡೆಯುತ್ತಿದ್ದು, ಹೊಸ ಹೊಸ ಔಷಧಗಳು ಬರುತ್ತಿದ್ದರೂ, ಸೋಂಕಿತರ ಸಂಖ್ಯೆ ಸಾಕಷ್ಟು ವರದಿಯಾಗುತ್ತಿದೆ. ಇದೇ ರೀತಿ, ಕೊರೊನಾ ಚಿಕಿತ್ಸೆಗೆ ಆ್ಯಂಟಿಬಾಡಿ ಕಾಕ್ಟೈಲ್ ಔಷಧಿಯನ್ನು ಕೆಲವರಿಗೆ ನೀಡಲಾಗುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈ ಕಾಕ್‌ಟೈಲ್ ಥೆರಪಿ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿದುಕೊಳ್ಳಲು ಒಂದು ದೊಡ್ಡ ಅಧ್ಯಯನವನ್ನು ನಡೆಸುತ್ತಿದೆ.
ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ 40 ಕೋವಿಡ್ - 19 ರೋಗಿಗಳಿಗೆ ಸಿಂಗಲ್ ಡೋಸ್ ಔಷಧಿ ಕಾಕ್‌ಟೈಲ್ ಆದ ಮೋನೋಕ್ಲೋನಲ್ ಆ್ಯಂಟಿಬಾಡಿಗಳಿಗೆ ನೀಡಲಾಯಿತು. ಈ ಚಿಕಿತ್ಸೆ ಪಡೆದ "24 ಗಂಟೆಗಳಲ್ಲಿ, ಅವರು ಜ್ವರ, ಅಸ್ವಸ್ಥತೆ ಮುಂತಾದ ಕ್ಲಿನಿಕಲ್ ರೋಗಲಕ್ಷಣಗಳಿಂದ ಚೇತರಿಸಿಕೊಂಡರು" ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ನಾಗೇಶ್ವರ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದರು.
''ಬ್ರಿಟಿಷ್ ರೂಪಾಂತರ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ರೂಪಾಂತರ ವೈರಾಣುವಿನ ವಿರುದ್ಧವೂ ಇದು ಪರಿಣಾಮಕಾರಿ ಎಂದು ತೋರಿಸಿದೆ. ನಾವು ಇಲ್ಲಿ ಹೊಂದಿರುವ ಡೆಲ್ಟಾ ರೂಪಾಂತರದ ವಿರುದ್ಧ ಯಾರೂ ಇದನ್ನು ಪರೀಕ್ಷಿಸಿಲ್ಲ. ಆದ್ದರಿಂದ ನಾವು ಮಾಡುತ್ತಿರುವುದು ರೂಪಾಂತರಿತ ವೈರಸ್ ವಿರುದ್ಧ ಪರಿಣಾಮಕಾರಿಯಾಗಿದೆಯೇ ಎಂದು ನಾವು ಸಮಾನಾಂತರವಾಗಿ ಪರೀಕ್ಷಿಸುತ್ತಿದ್ದೇವೆ. ನಾವು ವಿಶ್ಲೇಷಿಸಿದ 40 ರೋಗಿಗಳಲ್ಲಿ ಈಗ ನಾವು ಹೊಂದಿರುವ ಫಲಿತಾಂಶಗಳಲ್ಲಿ ಸುಮಾರು 100 ಪ್ರತಿಶತ ಪ್ರಕರಣಗಳಲ್ಲಿ ನಾವು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದಾಗ ಒಂದು ವಾರದೊಳಗೆ ವೈರಸ್ ಕಣ್ಮರೆಯಾಗಿದೆ'' ಎಂದು ಡಾ. ರೆಡ್ಡಿ ಹೇಳಿದರು.
ಸೌಮ್ಯದಿಂದ ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ ಸೋಂಕಿನ ತೀವ್ರತೆಯನ್ನು ಈ ಔಷಧ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೋವಿಡ್ ಸೋಂಕು ಕಾಣಿಸಿಕೊಂಡಾಗ ಮೋನೋಕ್ಲೋನಲ್ ಆ್ಯಂಟಿಬಾಡಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ವರ್ಷ ಟ್ರಂಪ್‌ಗೆ ಈ ಚಿಕಿತ್ಸೆ ನೀಡಿದ ನಂತರ ವಿಶ್ವಾದ್ಯಂತ ಇದು ಗಮನ ಸೆಳೆದಿತ್ತು.
ಮೋನೋಕ್ಲೋನಲ್ ಆ್ಯಂಟಿಬಾಡಿ ಚಿಕಿತ್ಸೆಯು ಸಿಂಗಲ್ ಡೋಸ್ ಔಷಧ ಕಾಕ್‌ಟೈಲ್ ಆಗಿದೆ. ಅಂದರೆ, ಕ್ಯಾಸಿರಿವಿಮಾಬ್ ಮತ್ತು ಇಂಡೆವಿಮಾಬ್ ಎಂಬ 2 ಔಷಧಿಗಳನ್ನು ಇದು ಬಳಸುತ್ತದೆ. ಆದರೆ, ಭಾರತದಲ್ಲಿ ಇದರ ಚಿಕಿತ್ಸೆಗೆ ಸುಮಾರು 70,000 ರೂ. ಅಥವಾ 1000 ಯುಎಸ್ ಡಾಲರ್ ವೆಚ್ಚವಾಗುತ್ತದೆ. ಇನ್ನು, ಈ ಚಿಕಿತ್ಸೆಯ ವೆಚ್ಚ ಹೆಚ್ಚಿದ್ದರೂ ದೇಶದಲ್ಲಿ ಈ ಚಿಕಿತ್ಸೆಯ ಬೇಡಿಕೆ ಹೆಚ್ಚುತ್ತಿದೆ. ಆದರೂ, ಈ ಚಿಕಿತ್ಸೆಯ ಅತಿಯಾದ ಬಳಕೆಯ ವಿರುದ್ಧ ಆರೋಗ್ಯ ತಜ್ಞರು ಮತ್ತು ವೈದ್ಯರು ಎಚ್ಚರಿಕೆ ನೀಡುತ್ತಾರೆ.
''ನಾವು ಈ ಚಿಕಿತ್ಸೆಯನ್ನು ದುರುಪಯೋಗ ಮಾಡಬಾರದು. ಇಯುಎ ಅಡಿಯಲ್ಲಿ ಆರೋಗ್ಯ ಸಚಿವಾಲಯವು ಅಧಿಕೃತಗೊಳಿಸಿದ ನಿರ್ದಿಷ್ಟ ಸೂಚನೆಯಡಿಯಲ್ಲಿ ಮಾತ್ರ ಇದನ್ನು ನೀಡಬೇಕಾಗಿದೆ. ಏಕೆಂದರೆ ಅದನ್ನು ಅತಿಯಾಗಿ ಬಳಸಿದರೆ, ಹೆಚ್ಚು ರೂಪಾಂತರಿತ ವೈರಸ್‌ಗಳು ಬರಬಹುದು. ಆಯ್ದ ಜನಸಂಖ್ಯೆಯಲ್ಲಿ ಇದನ್ನು ಎಚ್ಚರಿಕೆಯಿಂದ ಬಳಸಬೇಕಾಗಿದೆ” ಎಂದು ಡಾ. ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು, ಮೋನೋಕ್ಲೋನಲ್ ಆ್ಯಂಟಿಬಾಡಿ ಚಿಕಿತ್ಸೆಗೆ ಒಳಗಾದ ರೋಗಿಗಳು ಮೂರು ತಿಂಗಳ ನಂತರ ಲಸಿಕೆ ಪಡೆಯಬೇಕು ಎಂದು ಆರೋಗ್ಯ ವೃತ್ತಿಪರರು ತಿಳಿಸಿದ್ದಾರೆ. ಏಕೆಂದರೆ, ಈ ಚಿಕಿತ್ಸೆಯ ಕಾರ್ಯವಿಧಾನದ ನಂತರ ದೇಹದಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿಬಾಡಿಗಳು ಇರುತ್ತವೆ ಎಂದು ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ