K Annamalai – ದಿನ 14: ಹಣದ ಮಾಯೆ – ನಾವಂದುಕೊಂಡಷ್ಟಲ್ಲ ನಮ್ಮ ಹಣದ ಮೌಲ್ಯ

ನಮ್ಮ ಯೌವನಾವಸ್ಥೆಯಿಂದ ಹಿಡಿದು ಇಳಿ ವಯಸ್ಸಿನವರೆಗೂ ಹಣ ಸಂಪಾದನೆಯ ಹುಚ್ಚಿಗೆ ಬಿದ್ದು ಜೀವನ ಸವೆಸಿಬಿಡುತ್ತೇವೆ. ಆದರೆ, ಹಣಕ್ಕೆ ಅಷ್ಟು ಮೌಲ್ಯ ಇದೆಯಾ ಎಂದು ಲೇಖಕ ಕೆ. ಅಣ್ಣಾಮಲೈ ಪ್ರಶ್ನಿಸುತ್ತಾರೆ.

news18-kannada
Updated:April 8, 2020, 10:32 AM IST
K Annamalai – ದಿನ 14: ಹಣದ ಮಾಯೆ – ನಾವಂದುಕೊಂಡಷ್ಟಲ್ಲ ನಮ್ಮ ಹಣದ ಮೌಲ್ಯ
ಸಾಂದರ್ಭಿಕ ಚಿತ್ರ
  • Share this:
ಲಾಕ್ ಡೌನ್ ಘೋಷಣೆಯಾಗಿ ಎರಡು ವಾರ ಕಳೆಯಿತು. ನಮ್ಮಲ್ಲಿ ಅನೇಕರಿಗೆ ಒಂದೇ ಸ್ಥಳದಲ್ಲಿ ಕೂತಿರುವ ಅನುಭವ ಇದೇ ಮೊದಲಿರಬೇಕು. ನಮಗೆ ಬದುಕಲು ಎಷ್ಟು ಮಾತ್ರ ಸಾಕು ಎಂಬ ವಾಸ್ತವ ಈಗ ಗೊತ್ತಾಗಿದೆ. ಆರಂಭದಲ್ಲಿ ಸ್ವಲ್ಪ ದಿನ ಹೊಂದಿಕೊಳ್ಳಲು ಕಷ್ಟವಾಗಿದ್ದಿರಬಹುದು. ಈಗ ಬಹುತೇಕ ಅಭ್ಯಾಸವಾಗಿ ಹೋಗಿದೆ. ಈ ಮಧ್ಯೆ, ಕೆಲವರಿಗೆ ಆರ್ಥಿಕ ಸಮಸ್ಯೆ ಕಾಡಿರಬಹುದು. ಅದರಲ್ಲೂ ಕೆಳ ಸ್ತರದ ಜನರ ಆರ್ಥಿಕ ಮೂಲವೆಲ್ಲವೂ ಸ್ಥಗಿತಗೊಂಡುಹೋಗಿದೆ. ಸರ್ಕಾರ ಏನೇ ಸಾಮಾಜಿಕ ಸುರಕ್ಷತಾ ಕ್ರಮ ಕೈಗೊಂಡರೂ ಈ ಬಡವರ್ಗದವರ ಬಾಧೆ ತಪ್ಪಿಸಲು ಸಾಧ್ಯವಾಗದೇ ಹೋಗಬಹುದು. ಇದು ವಾಸ್ತವ.

ಇಂಥ ಸಂದರ್ಭಗಳು ನಮ್ಮ ಜೀವನವನ್ನು ಸಮಗ್ರ ದೃಷ್ಟಿಯಲ್ಲಿ ನೋಡುವಂತೆ ಮಾಡುತ್ತವೆ. ಜೀವನಕ್ಕೆ ಬಹಳ ಪ್ರಾಮುಖ್ಯ ಎಂದು ನಾವು ಭಾವಿಸುವ ಒಂದು ಸಂಗತಿ ಬಗ್ಗೆ ನಾನು ಇವತ್ತು ಚರ್ಚಿಸುತ್ತೇನೆ. ಏನದು ಆ ಸಂಗತಿ?

ಹಣ:

ಅನೇಕರ ಜೀವನದಲ್ಲಿ ಕಾಂಚಾಣವೇ ಅತೀ ಮುಖ್ಯ. ನಾವು ಸಂಪಾದಿಸಿದ ದುಡ್ಡು, ಆಸ್ತಿ ಆಧಾರದ ಮೇಲೆ ಜೀವನಕ್ಕೆ ಬೆಲೆ ಕಟ್ಟುತ್ತಾರೆ. ನಮ್ಮ ಸ್ಟೇಟಸ್, ನಮ್ಮ ಸ್ಥಾನಮಾನ, ನಮ್ಮ ಅಧಿಕಾರಕ್ಕೆ ಹಣವೇ ಬಲ ನೀಡುತ್ತದೆ ಎಂದು ಭಾವಿಸುತ್ತೇವೆ.

ಐತಿಹಾಸಿಕವಾಗಿ ಹಣ ಎಂಬುದು ಒಂದು ಸಂಗ್ರಹ ವ್ಯವಸ್ಥೆಯಾಗಿ (ಸ್ಟೋರೇಜ್ ಮೆಕ್ಯಾನಿಸಮ್) ಬಳಕೆಯಾಗಿದೆ. ಆರಂಭದಲ್ಲಿ ಬಾರ್ಟರ್ ಸಿಸ್ಟಂ ಇತ್ತು. ನಂತರ ದವಸ ದಾನ್ಯ ಇತ್ಯಾದಿಯನ್ನು ಹಣವಾಗಿ ಪರಿಗಣಿಸಲಾಯಿತು. ಬಳಿಕ ನಾಣ್ಯಗಳು ಚಲಾವಣೆಗೆ ಬಂದವು. ಈ ನಾಣ್ಯಗಳ ಮೌಲ್ಯದ ಮೇಲೆ ಸಾಮ್ರಾಜ್ಯಗಳ ಏಳುಬೀಳು ಇತ್ತು. ನಂತರ ಪೇಪರ್ ನೋಟ್​ಗಳು ಬಂದವು. ಆನಂತರದಲ್ಲಿ ಬ್ಯಾಂಕ್​ನಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಹಣ ಸಂಗ್ರಹ ಪ್ರಾರಂಭವಾಯಿತು. ನೀವು ಹೊಸ ನಾಣ್ಯ ಪ್ರಾರಂಭವಾಗಿದ್ದನ್ನು ನೋಡಿರಬಹುದು. ಹಾಗೆಯೇ, ಹಳೆ ನಾಣ್ಯದ ಚಲಾವಣೆ ನಿಂತುಹೋಗಿದ್ದನ್ನೂ ಕಂಡಿರಬಹುದು. ಕೆಲ ವರ್ಷಗಳ ಹಿಂದೆ ನೋಟು ಅಪಮೌಲ್ಯ ಘೋಷಣೆಯಾದಾಗ ಕೆಲ ಹಳೆಯ ಕರೆನ್ಸಿಗಳು ಅಸಿಂಧುಗೊಂಡು ಹೊಸ ಮಾದರಿ ನೋಟುಗಳು ಚಲಾವಣೆಗೆ ಬಂದಿದ್ದನ್ನು ನೋಡಿದ್ದೀರಿ.

ಇಲ್ಲಿಯವರೆಗೆ ನಾವು ಸಂಪಾದಿಸಿರುವ ಹಣ ವಾಸ್ತವವಾಗಿ ಬ್ಯಾಂಕಿನಲ್ಲಿರುವ ಒಂದು ಕಾಗದದ ಮೌಲ್ಯ ಅಥವಾ ಎಲೆಕ್ಟ್ರಾನಿಕ್ ಮೌಲ್ಯ. ಆ ಹಣಕ್ಕೆ ನೈಜ ಮೌಲ್ಯ ಬರಬೇಕೆಂದರೆ ಅದು ಆಹಾರ, ಮನೆ ಬಾಡಿಗೆ ಇತ್ಯಾದಿ ನಮ್ಮ ಅಗತ್ಯಗಳನ್ನು ಪೂರೈಸಬೇಕು. ಆ ಹಣ ಕೊಡುವಾಗ ಅಥವಾ ಪಡೆಯುವಾಗ ನಮಗೆ ಅದರ ಮೌಲ್ಯ ಅರಿವಿಗೆ ಬರುತ್ತದೆ. ಆ ಕ್ಷಣ ಕಳೆದ ಬಳಿಕ ನಮಗೆ ಹಣದ ಮೌಲ್ಯ ಮರೆತೇ ಹೋಗುತ್ತದೆ. ವಾರದ ಹಿಂದೆ ಹೋಟೆಲ್​ಗೆ ಹೋಗಿ ಊಟ ಮಾಡಿದಾಗ ನೀಡಿದ್ದ ಹಣದ ಮೌಲ್ಯ ನೆನಪಿಗೆ ಬರುವುದೇ ಇಲ್ಲ. ಹಾಗೆಯೇ, ಹಣ ನಮ್ಮ ಬಳಿ ಇದ್ದರೆ ಎಲ್ಲವೂ ಸಿಕ್ಕಿಬಿಡುತ್ತದೆ ಎಂಬ ಹಿತದ ಭಾವನೆಯಲ್ಲಿ (Sense of Comfort) ನಾವಿದ್ದೇವೆ. ಇದು ನಮಗೆ ಸಮಾಧಾನ (Feel Good comfort) ಮಾತ್ರ ಕೊಡುತ್ತದೆ. ವಾಸ್ತವದಲ್ಲಿ ನಿಜವಾದ ಮೌಲ್ಯ ಬಂದಿಲ್ಲ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಡೀಮಾನಿಟೈಸೇಶನ್ ವೇಳೆ ನಮಗೆ ಇದರ ಅನುಭವವಾಗಿರಬೇಕು. ನಮ್ಮ ಸಂಗ್ರಹಿತ ಹಣದ ಮೌಲ್ಯದ ಬಗ್ಗೆ ಕೆಲವರು ಸಂದೇಹಪಡುವಂತಾಯಿತು. ಒಟ್ಟಾರೆ, ಹಣವೇ ಜೀವನದ ಸರ್ವಸ್ವ ಅಲ್ಲ ಎಂಬುದನ್ನು ತಿಳಿಸಲು ನಾನು ಇವೆಲ್ಲವನ್ನೂ ಹೇಳಬೇಕಾಯಿತು.

ಆಫೀಸ್​ನಲ್ಲಿ ಕೆಲಸ ಹೆಚ್ಚಾಗಿ ನಾವು ಮಗುವಿನ ಜನ್ಮದಿನದ ಸಂಭ್ರಮದ ಕ್ಷಣ ಮಿಸ್ ಮಾಡಿಕೊಂಡಿದ್ದಿರಬಹುದು. ನೀವು ಮಗುವಿನ ಜೊತೆ ಇರುವುದಕ್ಕಿಂತ ಆ ಪೇಪರ್ ಮನಿ ಹೆಚ್ಚಲ್ಲ. ನಮ್ಮ ದೇಶದಲ್ಲಾಗಲೀ, ವಿದೇಶಗಳಲ್ಲಾಗಲೀ ಭಾರತೀಯರು ಹೆಚ್ಚು ಹೊತ್ತು ಕೆಲಸ ಮಾಡುತ್ತಾರೆ. ನಾಳೆಗೆ ಬೇಕಾಗಬಹುದೆಂದು ಇವತ್ತಿನ ಅಗತ್ಯಕ್ಕೆ ಖರ್ಚು ಮಾಡಲು ಹಿಂದೇಟು ಹಾಕುತ್ತೇವೆ. ಭರಪೂರ ಹಣ ಸಂಪಾದಿಸಿ ಸಿರಿವಂತನಾಗಿ ಸಾಯುವುದರಲ್ಲಿ ಏನರ್ಥ ಇದೆ? ವಾಸಕ್ಕೆ ಒಂದು ಮನೆ, ಸತ್ತಾಗ ಸ್ಮಶಾನಕ್ಕೆ ನಮ್ಮ ಶವ ಸಾಗಿಸಲು ನಾಲ್ಕು ಜನ ಅಷ್ಟೇ ನಮಗೆ ಬೇಕಿದ್ದರೂ ಹಣದ ಹಿಂದೆ ಬೀಳುತ್ತೇವೆ. ಈಗ ನಾವು ಹಣದ ಬಗ್ಗೆ ಇರುವ ದೃಷ್ಟಿಕೋನ ಬದಲಿಸಿಕೊಂಡು ಜೀವನಕ್ಕೆ ಹೊಸ ದೃಷ್ಟಿ ಕೊಡುವತ್ತ ಗಮನ ಹರಿಸಬೇಕಿದೆ. ಈ ಆತ್ಮಾವಲೋಕನಕ್ಕೆ ಈಗ ಸಮಯಾವಕಾಶ ಸಿಕ್ಕಿದೆ.ಕೆ ಅಣ್ಣಾಮಲೈ ಅವರ ಈ ಲೇಖನಮಾಲೆಯ ಎಲ್ಲಾ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೀಗೊಂದು ದೃಷ್ಟಿಯಲ್ಲಿ ಅವಲೋಕಿಸೋಣ. ನಮಗಿರುವ ಒಟ್ಟೂ ಹಣವು ನಮಗೆ ಅಷ್ಟೇ ಮೌಲ್ಯದಷ್ಟು ಸಂತೃಪ್ತಿ ತಂದಿದೆಯಾ ಎಂದು ನಿಮಗೆ ನೀವೇ ಪ್ರಶ್ನೆಹಾಕಿಕೊಳ್ಳಿ. ನಮ್ಮ ಬಳಿ ಕೇವಲ 10 ರೂಪಾಯಿ ಇದೆ ಎಂದಿಟ್ಟುಕೊಳ್ಳಿ. ನಮಗೆ ಹಸಿವಾದಾಗ ಊಟ ಮಾಡಲು ಹೋಟೆಲ್​ಗೆ ಹೋಗುತ್ತೇವೆ. 50 ರೂ ಕೊಟ್ಟು ದೋಸೆ ತಿನ್ನುತ್ತೇವೆ. ಈಗ ನೀವು ಈ 50 ರೂಪಾಯಿ ನಿಮ್ಮ ಪಾಲಿಗೆ ಎಷ್ಟು ಮೌಲ್ಯದ್ದು ಎಂದು ಹಾಗೇ ಕಣ್ಮುಚ್ಚಿಕೊಂಡು ಸಮಾಧಾನದಿಂದ ಯೋಚಿಸಿನೋಡಿ. ಆಯಿತು, ಈಗ ನಿಮ್ಮ ಬಳಿ 1 ಕೋಟಿ ರೂಪಾಯಿ ಇದೆ ಎಂದು ಮತ್ತೊಮ್ಮೆ ಕಲ್ಪಿಸಿಕೊಳ್ಳಿ. ನಿಮಗೆ ಹಸಿವಾಗುತ್ತದೆ. ಊಟಕ್ಕೆ ಮತ್ತದೇ ಹೋಟೆಲ್​ಗೆ ಹೋಗಿ ಅದೇ 50 ರೂಪಾಯಿ ಬೆಲೆಯ ದೋಸೆ ಆರ್ಡರ್ ಮಾಡುತ್ತೀರಿ. ಈಗ ಕಣ್ಮುಚ್ಚಿಕೊಂಡು 50 ರೂಪಾಯಿ ಈ ಹೊತ್ತಿನಲ್ಲಿ ನಿಮಗೆ ಎಷ್ಟು ಮೌಲ್ಯದ್ದು ಎಂದು ಯೋಚಿಸಿರಿ. ಮೊದಲ ಸಂದರ್ಭಕ್ಕೂ ಎರಡನೇ ಸಂದರ್ಭಕ್ಕೂ ತಾಳೆ ಮಾಡಿನೋಡಿ. 50 ರೂಪಾಯಿ ಹೆಚ್ಚು ಮೌಲ್ಯ ಅಂತ ನಿಮಗೆ ಅನಿಸಿದ್ದು ಯಾವಾಗ? ನಿಶ್ಚಿತವಾಗಿ ಮೊದಲ ಸಂದರ್ಭದಲ್ಲೇ. ಆಗ ನಮ್ಮ ಬಳಿ ಇದ್ದದ್ದು ಕೇವಲ 100 ರೂಪಾಯಿ. ಈ ಹಣದಲ್ಲಿ ಅರ್ಧದಷ್ಟು ಭಾಗವನ್ನು ಹಸಿವು ನೀಗಿಸಲು ಬಳಸಿರುತ್ತೇವೆ. ಅರ್ಥಶಾಸ್ತ್ರದಲ್ಲಿ ಇದಕ್ಕೆ “ಮಾರ್ಜಿನಲ್ ಯುಟಿಲಿಟಿ ಆಫ್ ಮನಿ” (ತುಷ್ಟಿಗುಣ ನಿಯಮ) ಎನ್ನುತ್ತಾರೆ. ಈಗಿನ ಸಂದರ್ಭಕ್ಕೆ ಬರೋಣ. ನಾವು ನಮ್ಮ ಮಕ್ಕಳಿಗೋಸ್ಕರ ಅಥವಾ ಕುಟುಂಬಕ್ಕೋಸ್ಕರ ಎಷ್ಟೇ ಹಣ ಸಂಪಾದಿಸಿರಬಹುದು. ಇದಕ್ಕಾಗಿ ಎಷ್ಟು ಶ್ರಮ ಪಟ್ಟಿದ್ದೇವೆ, ಬೆವರು ಸುರಿಸಿದ್ದೇವೆ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ, ನಮ್ಮ ಮಕ್ಕಳಿಗೆ ಈ ಹಣದ ಮೌಲ್ಯ ಗೊತ್ತಿರುತ್ತದಾ?

ನಾವು ಹಣದಿಂದ ಹಾಸಿಗೆ ಕೊಳ್ಳಬಹುದು, ನಿದ್ರೆಯನ್ನಲ್ಲ; ಕಂಪ್ಯೂಟರ್ ಕೊಳ್ಳಬಹುದು, ಬುದ್ಧಿಯನ್ನಲ್ಲ; ಆಹಾರ ಕೊಳ್ಳಬಹುದು, ಹಸಿವನ್ನಲ್ಲ; ಔಷಧ ಕೊಳ್ಳಬಹುದು, ಆರೋಗ್ಯವನ್ನಲ್ಲ; ಶಿಸ್ತು ಕೊಳ್ಳಬಹುದು, ನಂಬಿಕೆಯನ್ನಲ್ಲ; ಐಷಾರಾಮತೆ ಕೊಳ್ಳಬಹುದು, ಸಂತೋಷವನ್ನಲ್ಲ ಎಂದು ಯಾರೋ ಅನುಭವಿಗಳು ಹೇಳಿದ್ದು ಈಗ ನೆನಪಾಯಿತು. ಹಣ ಎಂಬುದು ನಮ್ಮ ಪಾಲಿಗೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಮಯ ಇದು.

ದೆಹಲಿಯಿಂದ ಒಂದು ಪುಟ್ಟ ಹುಡಗಿ ತನ್ನ ಕುಟುಂಬದ ಜೊತೆ ಉತ್ತರ ಪ್ರದೇಶದಲ್ಲಿರುವ ತನ್ನ ಗ್ರಾಮಕ್ಕೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದನ್ನು ನೋಡಿ ಮನಸಿಗೆ ಬಹಳ ವೇದನೆಯಾಯಿತು. ಇತ್ತೀಚೆಗೆ ನಡೆದ ಘಟನೆ ಅದು. ಲಾಕ್ ಡೌನ್ ಘೋಷಣೆಯಾದ 3ನೇ ದಿನವೋ, 4ನೇ ದಿನವೋ ಇರಬೇಕು. ಆ ಕುಟುಂಬದವರು ಬಹಳ ದೂರ ನಡೆದಿದ್ದಿರಬೇಕು. ಆ ಬಾಲಕಿ ಅಳುತ್ತಿತ್ತು. ಬಿಸಿಲಿನ ಝಳದಲ್ಲಿ ಟಾರ್ ರಸ್ತೆಯಲ್ಲಿ ಅಕ್ಷರಶಃ ಕಾಲೆಳೆದುಕೊಂಡು ಹೋಗುತ್ತಿತ್ತು. ತಲೆ ಮೇಲೆ ಗಂಟುಮೂಟೆಗಳನ್ನ ಹೊತ್ತುಕೊಂಡು ಹೋಗುತ್ತಿದ್ದ ತನ್ನ ಅಪ್ಪ ಮತ್ತು ಅಮ್ಮನಿಗೆ ಸಮವಾಗಿ ಆಕೆಗೆ ನಡೆಯಲು ಆಗುತ್ತಿಲ್ಲ. ಆ ಹುಡುಗಿ ಸುಸ್ತಾಗಿ ನಡೆಯುತ್ತಿದ್ದುದು ನನಗೆ ಸಂಕಟ ತರಲಿಲ್ಲ. ಬದಲಾಗಿ, ಆ ಹುಡುಗಿ ಚಪ್ಪಲಿ ಇಲ್ಲದೇ ಬರಿಗಾಲಲ್ಲಿ ನಡೆಯುತ್ತಿದೆಯಲ್ಲಾ ಎಂದು ಮನಸಿಗೆ ಘಾಸಿಯಾಯಿತು. ಮಗುವಿಗೆ ಒಂದು ಚಪ್ಪಲಿ ಕೊಡಿಸಲು ಆಗದಷ್ಟು ಬಡಸ್ತನ ಆ ಕುಟುಂಬಕ್ಕೆ ಬಂದಿತ್ತು. ನಾವು ಇಷ್ಟೆಲ್ಲಾ ಹಣ ಸಂಪಾದಿಸುತ್ತೇವಲ್ಲ ಯಾವ ಪುರುಷಾರ್ಥಕ್ಕೆ? ರಸ್ತೆಯಲ್ಲಿ ಒಂದು ಪುಟ್ಟ ಹುಡುಗಿ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ ಎಂದರೆ ನಮ್ಮ ಹಣ ಸಂಪಾದನೆಗೆ ಏನರ್ಥ ಉಂಟು? ಒಮ್ಮೆ ಯೋಚಿಸಿ.

ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ

(ಕೋವಿಡ್-19 ಸೋಂಕು ವ್ಯಾಪಿಸದಂತೆ ದೇಶಾದ್ಯಂತ 21 ದಿನ ಕಾಲ ದಿಗ್ಬಂಧನ ವಿಧಿಸಲಾಗಿದೆ. ಜನರೆಲ್ಲರೂ ಅನವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಮನೆಯಲ್ಲೇ ಇರಬೇಕೆಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಈ ಸಂದರ್ಭದಲ್ಲಿ 21 ದಿನಗಳನ್ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಲೇಖಕರು ತಿಳಿಹೇಳಿದ್ದಾರೆ. ಅವರ ಲೇಖನಮಾಲೆಯ 14ನೇ ಲೇಖನ ಇದು.)
First published:April 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading