ಬಿಸಿಲ ನಾಡಿನ ಗುಹೆಯಲ್ಲಿ ಸಿಲುಕಿದ ಇಟಲಿ ಪ್ರಜೆ; 2 ತಿಂಗಳಿನಿಂದ ಹಣ್ಣು-ಹಂಪಲು ತಿಂದು ಜೀವನ

ಇಟಲಿಯ ಮಾರಿಯಾನ್‌ಗೆ ಭಾರತದ ವಿವಿಧ ಪ್ರದೇಶಗಳ ಜೊತೆಗೆ ಸುಮಾರು 20 ವರ್ಷಗಳಿಂದಲೂ ನಂಟಿದೆ. ಮಾರಿಯಾನ್​ಗೆ ಹಿಂದಿ ಕೂಡ ಚೆನ್ನಾಗಿ ಬರುತ್ತದೆ. ನಮ್ಮೊಂದಿಗೆ ಅವರು ಹಿಂದಿಯಲ್ಲೇ ಮಾತನಾಡಿದ್ದಾರೆ. ಅಲ್ಲದೇ ಶ್ಲೋಕಗಳನ್ನು ಸಹ ಹೇಳುತ್ತಾರೆ.

HR Ramesh | news18-kannada
Updated:May 2, 2020, 6:02 PM IST
ಬಿಸಿಲ ನಾಡಿನ ಗುಹೆಯಲ್ಲಿ ಸಿಲುಕಿದ ಇಟಲಿ ಪ್ರಜೆ; 2 ತಿಂಗಳಿನಿಂದ ಹಣ್ಣು-ಹಂಪಲು ತಿಂದು ಜೀವನ
ಕೊಪ್ಪಳ ಗುಹೆಯಲ್ಲಿ ಸಿಲುಕಿರುವ ಇಟಲಿ ಪ್ರಜೆ ಮಾರಿಯಾನ್.
  • Share this:
ಕೊಪ್ಪಳ: ಕೊರೋನಾದಿಂದಾಗಿ ದೇಶವೇ ಲಾಕ್‌ಡೌನ್ ಆಗಿ ಸುಮಾರು 40 ದಿನಗಳಾಗುತ್ತಾ ಬಂದಿದೆ. ಈಗ ಹಂತ-ಹಂತವಾಗಿ ಲಾಕ್‌ಡೌನ್ ಸಡಿಲಗೊಳ್ಳುವ ಘಟ್ಟಕ್ಕೆ ಬರಲಾಗಿದ್ದು, ಕಳೆದ ಸುಮಾರು ಎರಡು ತಿಂಗಳಿನಿಂದಲೂ ವಿದೇಶಿ ಪ್ರಜೆಯೊಬ್ಬ ಗುಹೆಯಲ್ಲೇ ವಾಸವಾಗಿದ್ದಾರೆ. ಅದು ಅನ್ನ-ನೀರಿಲ್ಲದೇ!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ ಪರ್ವತ, ಸಾಣಾಪುರ, ವಿರುಪಾಪುರಗಡ್ಡೆ ಸೇರಿದಂತೆ ಕೆಲ ಪ್ರದೇಶಗಳು ವಿದೇಶಿಯವರ ಫೇವರೆಟ್ ಸ್ಪಾಟ್‌‌ಗಳು.

ಫೆಬ್ರವರಿಯಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಡಳಿತ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೇರಿಕೊಂಡು ನ್ಯಾಯಾಲಯದ ಆದೇಶದಂತೆ ವಿರುಪಾಪುರಗಡ್ಡೆಯಲ್ಲಿದ್ದ ಅಕ್ರಮ ರೆಸಾರ್ಟ್‌ಗಳನ್ನು ನೆಲಸಮ ಮಾಡಿ ತೆರವುಗೊಳಿಸಿತ್ತು.

ಹಂಪಿ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ನೋಡಲು ಬರುತ್ತಿದ್ದ ವಿದೇಶಿಯರು ಉಳಿದುಕೊಳ್ಳಲು ವಿರುಪಾಪುರಗಡ್ಡೆಯ ರೆಸಾರ್ಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ರೆಸಾರ್ಟ್ ತೆರವಿನ ವೇಳೆ ಅಚಾನಕ್ಕಾಗಿ ವಿದೇಶಿ ಪ್ರಜೆಯೊಬ್ಬರು ಗುಹೆಯಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ಎರಡು ತಿಂಗಳಿನಿಂದಲೂ ಇವರು ಇಲ್ಲಿಯೇ ಅನ್ನಾಹಾರ ಇಲ್ಲದೆ ವಾಸವಾಗಿದ್ದಾರೆ.

ಇಟಲಿ ದೇಶದ ಪ್ರಜೆ ಮಾರಿಯಾನ್, 2020ರ ಜನವರಿ ತಿಂಗಳಿನಲ್ಲೇ ಹಂಪಿ, ಮತ್ತಿತರ ಸ್ಥಳಗಳನ್ನು ನೋಡಲು ಬಂದಿದ್ದಾರೆ. ಫೆಬ್ರವರಿಯಲ್ಲಿ ರೆಸಾರ್ಟ್ ತೆರವು ವೇಳೆ ಯಾವುದೋ ಸ್ಥಳ ವೀಕ್ಷಣೆಗೆ ಹೋದವರು ರಾತ್ರಿ ಬಂದಿದ್ದಾರೆ. ಆದರೆ ಅಷ್ಟುಹೊತ್ತಿಗಾಗಲೇ ನಸುಕಿನ ವೇಳೆಯಲ್ಲಿದ್ದ ಕಟ್ಟಡಗಳೆಲ್ಲ ನೆಲಸಮವಾಗಿದ್ದವು. ಹಾಗಾಗಿ ಮಾರಿಯಾನ್ ಹಂಪಿ, ಆನೆಗೊಂದಿ, ನವವೃಂದಾವನ, ಪಂಪಾಸರೋವರ, ಗವಿರಂಗನಾಥ, ವಾಲಿ ಕಿಲ್ಲಾ ಮತ್ತಿತರ ಸ್ಥಳಗಳನ್ನು ವೀಕ್ಷಿಸಿ ಇನ್ನೇನು ತಮ್ಮ ದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಹೊರಗಡೆ ಎಲ್ಲೂ ತಿರುಗುವ ಹಾಗಿಲ್ಲ. ಹಾಗಾಗಿ ಋಷಿಮುಖ ಪರ್ವತದ ಗುಹೆ ಪ್ರವೇಶಿದ್ದಾರೆ. ಗುಹೆಯ ಸುತ್ತಮುತ್ತ ಹಣ್ಣು-ಹಂಪಲು, ದೇಗುಲ ಬಿಟ್ಟರೆ ಮತ್ತೇನೂ ಇಲ್ಲ.

ಮಾರ್ಚ್-ಏಪ್ರಿಲ್ ಎರಡು ತಿಂಗಳು ಗುಹೆಯಲ್ಲಿ ಕಳೆದಿರುವ ಮಾರಿಯಾನ್, ಹಣ್ಣು-ಹಂಪಲಿನಿಂದ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ದೇಗುಲದ ಪಕ್ಕ ಹರಿಯುತ್ತಿದ್ದ ನೀರಿನ ಸಣ್ಣ ಝರಿಯಿಂದ ದಾಹ ನೀಗಿಸಿಕೊಂಡಿದ್ದಾರೆ. ಈ ಎರಡು ತಿಂಗಳಲ್ಲಿ ಮಾರಿಯಾನ್‌ಗೆ ಮೊದಲಿನಿಂದಲೂ ಆಧ್ಯಾತ್ಮದಲ್ಲಿ ಒಲವಿದ್ದಿದ್ದರಿಂದ ಅಲ್ಲಿನ ಪರಿಸರ ಕಂಡು ಸಾಧುವಾಗಿದ್ದಾರೆ. ಕೇಸರಿ ಉಡುಪು ಧರಿಸಿ, ಗಡ್ಡ ಬಿಟ್ಟಿದ್ದಾರೆ.

ಗೊತ್ತಾಗಿದ್ದು ಹೇಗೆ?ಸುಮಾರು ತಿಂಗಳ ಹಿಂದೆ, ಋಷಿಮುಖ ಪರ್ವತದಲ್ಲಿದ್ದ ಈಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಸಾಣಾಪುರ ಗ್ರಾಮಸ್ಥರೊಬ್ಬರು ಅಲ್ಲಿಗೆ ಆಗಮಿಸಿದಾಗ ಮಾರಿಯಾನ್ ಗುಹೆಯಲ್ಲಿ ಸಿಲುಕಿರುವುದು ಗೊತ್ತಾಗಿದೆ. ಜನರು ಅಲ್ಲಿಗೆ ಬಂದು ಈಶ್ವರನ ಪೂಜೆ ಮಾಡುತ್ತಿದ್ದನ್ನು ಕಂಡು ಮಾರಿಯಾನ್ ಸಹ ನಿತ್ಯ ಪೂಜೆ ಮಾಡುತ್ತಿದ್ದಾರೆ. ಆಗಾಗ ಗ್ರಾಮಸ್ಥರು ಬಂದು ಊಟ ಕೊಡುತ್ತಿದ್ದರು. ಕಿರ್ಲೋಸ್ಕರ ಕಂಪನಿಯ ನೌಕರ ಎಂ.ವೆಂಕಟರಮಣ ಎಂಬುವವರು ಮಾರಿಯಾನ್ ಸಂಕಷ್ಟ ಅರಿತು ದಿನಸಿ‌ ಕಿಟ್ ನೀಡಿದ್ದಾರೆ. ಆ ವೇಳೆ ಲಾಕ್‌ಡೌನ್ ಮುಗಿಯುವ ಕುರಿತು ಕೇಳಿರುವ ಮಾರಿಯಾನ್,   ಲಾಕ್‌ಡೌನ್ ಮುಗಿದ ಬಳಿಕ ಇಟಲಿಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಅಕ್ರಮ ಮೀನುಗಾರಿಕೆ; ಗೋವಾ ಮೀನುಗಾರರು, ಬೋಟ್ ವಶಕ್ಕೆ ಪಡೆದ ಕಾರವಾರ ಪೊಲೀಸರು

ಕೋವಿಡ್-19 ಪರೀಕ್ಷೆ ಮಾಡಲಾಗಿದೆ

ಇಟಲಿಯ ಮಾರಿಯಾನ್‌ಗೆ ಭಾರತದ ವಿವಿಧ ಪ್ರದೇಶಗಳ ಜೊತೆಗೆ ಸುಮಾರು 20 ವರ್ಷಗಳಿಂದಲೂ ನಂಟಿದೆ. ಮಾರಿಯಾನ್​ಗೆ ಹಿಂದಿ ಕೂಡ ಚೆನ್ನಾಗಿ ಬರುತ್ತದೆ. ನಮ್ಮೊಂದಿಗೆ ಅವರು ಹಿಂದಿಯಲ್ಲೇ ಮಾತನಾಡಿದ್ದಾರೆ. ಅಲ್ಲದೇ ಶ್ಲೋಕಗಳನ್ನು ಸಹ ಹೇಳುತ್ತಾರೆ. ಅದನ್ನು ಕಂಡು ನಮಗೆ ಅಚ್ಚರಿಯಾಯಿತು. ವಿದೇಶದವರಾದ್ದರಿಂದ ಅವರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ವರದಿ ಬಂದಿದೆ. ಈಗ ಅವರನ್ನು ಇಟಲಿಗೆ ಕಳಿಸಿಕೊಡಲು ಬರುವುದಿಲ್ಲ. ಲಾಕ್‌ಡೌನ್ ಮುಗಿದ ಬಳಿಕ ಸರಕಾರ ಹಾಗೂ ಮೇಲಧಿಕಾರಿಗಳ ನಿರ್ದೇಶನದ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಂಗಾವತಿ ತಹಸೀಲ್ದಾರ್ ಚಂದ್ರಕಾಂತ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ವಿಶೇಷ ವರದಿ: ಬಸವರಾಜ ಕರುಗಲ್
First published: May 2, 2020, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading