news18-kannada Updated:May 19, 2020, 5:54 PM IST
ಸಾಂದರ್ಭಿಕ ಚಿತ್ರ
ಕೋಲ್ಕತ್ತಾ (ಮೇ 19); ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಆಂಫಾನ್ ಚಂಡಮಾರುತ ಕೊಲ್ಕತ್ತಾ ಸೇರಿದಂತೆ ಈಶಾನ್ಯ ಭಾರತದ ಐದು ರಾಜ್ಯಗಳಿಗೆ ಅಪ್ಪಳಿಸಲು ಅಣಿಯಾಗಿದೆ. ಪರಿಣಾಮ ಇಂದು ಕೋಲ್ಕತ್ತಾದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಕೊರೋನಾ ಭೀತಿಯ ನಡುವೆ ಆಂಫಾನ್ ಈಶಾನ್ಯ ಭಾರತಕ್ಕೆ ಮತ್ತೊಂದು ಸಮಸ್ಯೆಯನ್ನು ಮುಂದಿಟ್ಟಿದೆ.
ಪ್ರಸ್ತುತ ಭಾರತದ ಈಶಾನ್ಯ ಕರಾವಳಿ ಗಡಿಯಿಂದ ಸುಮಾರು 630 ಕಿ.ಮೀ. ದೂರದಲ್ಲಿರುವ ಆಂಫಾನ್ ಕರಾವಳಿಗೆ ಅಪ್ಪಳಿಸಿದರೆ 110ರಿಂದ 150 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಪರಿಣಾಮ ಕೋಲ್ಕತ್ತಾ, ಓಡಿಶಾ ಸೇರಿದಂತೆ ಐದು ರಾಜ್ಯಗಳಲ್ಲಿ ಭಾರೀ ಅನಾಹುತ ಏರ್ಪಡಲಿದೆ. ಈಗಾಗಲೇ ಕೋಲ್ಕತ್ತಾದ ಕಾಕ್ಡ್ವಿಪ್, ನಾಮ್ಖಾನಾ, ಪ್ಯಾರಡೀಪ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಇದರ ಜೊತೆಗೆ ಚಂಡಮಾರುತ ಅಪ್ಪಳಿಸಿದರೆ ಮರಗಳು, ಗೋಪುರಗಳು, ವಿದ್ಯುತ್ ಕಂಬಗಳು ಚಂಡಮಾರುತದ ರಭಸಕ್ಕೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಈಗಾಗಲೇ ಈಶಾನ್ಯ ಭಾಗದ ಎಲ್ಲಾ ರಾಜ್ಯಗಳಿಗೂ ಪರಿಸ್ಥಿತಿ ನಿಭಾಯಿಸಲು ಅಣಿಯಾಗುವಂತೆ ಸಂದೇಶ ರವಾನಿಸಿದೆ.
ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಈ ಚಂಡಮಾರುತದ ಪರಿಣಾಮದಿಂದ ಪೂರ್ವ ಕರಾವಳಿ, ಅಂಡಮಾನ್- ನಿಕೋಬಾರ್ನಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಉಂಟಾಗಲಿದ್ದು, ಇಂದು ಮತ್ತು ನಾಳೆ ಕರಾವಳಿಯ ಕೆಲವು ಪ್ರದೇಶ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಈ ಚಂಡಮಾರುತ ಪರಿಣಾಮ ಕರ್ನಾಟಕದ ಮೇಲೆ ಹೆಚ್ಚಾಗಿ ತಟ್ಟದಿದ್ದರೂ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಒಂದೇ ದಿನ ಕೊರೋನಾಗೆ 3 ಬಲಿ, 127 ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆ
First published:
May 19, 2020, 4:24 PM IST