ಕೊರೋನಾ ಪ್ರಹಾರಕ್ಕೆ ರಾಜ್ಯ ತತ್ತರ; ಮಗಳ ಮದುವೆ ಸಂಭ್ರಮದಲ್ಲಿ ಜವಾಬ್ದಾರಿ ಮರೆತರಾ ಆರೋಗ್ಯ ಸಚಿವ ಶ್ರೀರಾಮುಲು?

ಬೆಂಗಳೂರಿನಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಅದು ಹರಡದಂತೆ ಅಗತ್ಯ ಕ್ರಮಗಳ ಬಗ್ಗೆ ಶ್ರೀರಾಮುಲು ಚಿಂತನೆ ನಡೆಸಬೇಕಿತ್ತು. ಆದರೆ, ಮಗಳ ಮದುವೆ ಮುಗಿದಿದ್ದರೂ ಅವರು ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ.

ಆರೋಗ್ಯ ಸಚಿವ ಶ್ರೀರಾಮುಲು

ಆರೋಗ್ಯ ಸಚಿವ ಶ್ರೀರಾಮುಲು

  • Share this:
ಬೆಂಗಳೂರು (ಮಾ.10): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ, ಜಾಗೃತಿ ಮೂಡಿಸುತ್ತಿರುವ ಹೊರತಾಗಿಯೂ ರಾಜ್ಯದ ಜನರಲ್ಲಿ ಕರೋನಾ ಕುರಿತ ಭೀತಿ ಮುಂದುವರೆದಿದೆ. ಇಷ್ಟೆಲ್ಲ ಆಗುತ್ತಿದ್ದರೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾತ್ರ ಮಗಳ ಮದುವೆ ಗುಂಗಿನಿಂದ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ.

ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದ 40 ವರ್ಷದ ಟೆಕ್ಕಿಯೊಬ್ಬರಲ್ಲಿ ಈ ಮಾರಕ ವೈರಸ್​ ಪತ್ತೆ ಆಗಿದೆ. ಮಾರ್ಚ್ 1ರಂದು ಈ ಟೆಕ್ಕಿ ತನ್ನ ಹೆಂಡತಿ ಮತ್ತು ಮಗು ಸಮೇತ ನ್ಯೂಯಾರ್ಕ್​​ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಟೆಕ್ಕಿಗೆ ವೈರಸ್​ ಇರುವುದು ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಮಾರಣಾಂತಿಕ ವೈರಸ್​ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಶ್ರೀರಾಮುಲು ಚಿಂತನೆ ನಡೆಸಬೇಕಿತ್ತು. ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕಿತ್ತು. ಇವು ಸಚಿವರೋರ್ವರ ಜವಾಬ್ದಾರಿಯೂ ಹೌದು. ಆದರೆ, ಮಗಳ ಮದುವೆ ಮುಗಿದಿದ್ದರೂ ಅವರು ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಕೊರೋನಾ ಬಗ್ಗೆ ಖ್ಯಾರೆ ಎನ್ನುತ್ತಿಲ್ಲ. ಕಳೆದ ಒಂದು ವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ ಆದರೆ, ಆರೋಗ್ಯ ಸಚಿವರು ಸದನದ ಕಡೆಗೂ ಮುಖ ಮಾಡಿಲ್ಲ.

ಇದನ್ನೂ ಓದಿ:  ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ; ಕೆಎಸ್​ಆರ್​ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲೂ ಇಳಿಕೆ

ಕೊರೋನಾ ಪ್ರಹಾರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ರಾಜ್ಯದ ಜನ ಆತಂಕಗೊಂಡಿದ್ದಾರೆ. ಆದರೂ, ಕೊರೋನಾ ಕಡೆ ಶ್ರೀರಾಮುಲು ಗಮನಹರಿಸುವಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾದರೂ ಆರೋಗ್ಯ ಸಚಿವರು ರಜೆಯಲ್ಲಿರುವ ಬಗ್ಗೆ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಕುಟುಂಬದ ಜೊತೆ ಕಾಲ ಕಳೆಯುವ ಬದಲು ರಾಜ್ಯದ ಜನರ ಬಗ್ಗೆ ಯೋಚಿಸಲಿ ಎಂದು ಅನೇಕರು ಕಿವಿಮಾತು ನುಡಿದಿದ್ದಾರೆ.
First published: