ನವದೆಹಲಿ, ಜ. 11: ಓಮೈ,ಕ್ರಾನ್ ಕೋವಿಡ್ ಸೋಂಕು (Omicron covid wave) ನಿರೀಕ್ಷೆಮೀರಿದ ವೇಗದಲ್ಲಿ ವಿಶ್ವಾದ್ಯಂತ ಹಬ್ಬುತ್ತಿದೆ. ಅದರಲ್ಲೂ ಅಮೆರಿಕದಲ್ಲಿ ಕೋವಿಡ್ ಅಕ್ಷರಶಃ ರುದ್ರತಾಂಡವ ಆಡುತ್ತಿದೆ. ಕಳೆದ ಎರಡು ವಾರದಲ್ಲಿ ಎರಡನೇ ಬಾರಿಗೆ ದಿನವೊಂದಕ್ಕೆ ದಾಖಲಾದ ಪ್ರಕರಣಗಳು 10 ಲಕ್ಷ ದಾಟಿವೆ. ನಿನ್ನೆ ಸೋಮವಾರ ಒಂದೇ ದಿನ 1.35 ಮಿಲಿಯನ್, ಅಂದರೆ 13.5 ಲಕ್ಷ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಹೊಸ ದಾಖಲೆಯಾಗಿದೆ. ಅದರ ಹಿಂದಿನ ವಾರ 10.3 ಲಕ್ಷ ಪ್ರಕರಣಗಳು ದಾಖಲಾಗಿತ್ತು. ಈಗ 13.5 ಲಕ್ಷ ಪ್ರಕರಣಗಳು ಒಂದೇ ದಿನ ದಾಖಲಾಗಿವೆ. ಇದು ಎರಡು ವರ್ಷದ ಹಿಂದೆ ಕೋವಿಡ್ ಸೋಂಕು ಕಾಣಿಸಿಕೊಂಡಾಗಿನಿಂದ ಒಂದೇ ದಿನ ಯಾವುದೇ ದೇಶ ಕಂಡ ಅತಿ ಹೆಚ್ಚು ಪ್ರಕರಣಗಳಾಗಿವೆ.
ವಾಸ್ತವವಾಗಿ ಅಮೆರಿಕದಲ್ಲಿ ಸೋಮವಾರ ದಾಖಲಾಗುವ ಪ್ರಕರಣಗಳ ಸಂಖ್ಯೆ ಸಾಮಾನ್ಯವಾಗಿ ಹೆಚ್ಚೇ ಇರುತ್ತದೆ. ಅದಕ್ಕೆ ಕಾರಣವೂ ಇದೆ. ಅಮೆರಿಕದ ಹಲವ ರಾಜ್ಯಗಳು ವಾರಾಂತ್ಯದ, ಅಂದರೆ ಶನಿವಾರ ಮತ್ತು ಭಾನುವಾರದಲ್ಲಿನ ಕೋವಿಡ್ ಪ್ರಕರಣಗಳ ಮಾಹಿತಿಯನ್ನ ವರದಿ ಮಾಡುವುದಿಲ್ಲ. ಬಾಕಿ ಉಳಿದ ಈ ಎಲ್ಲಾ ಮಾಹಿತಿಯನ್ನ ಸೋಮವಾರ ಒಟ್ಟಿಗೆ ಕಳುಹಿಸುತ್ತವೆ. ಹೀಗಾಗಿ, ಸೋಮರಾದ ಕೋವಿಡ್ ಪ್ರಕರಣದಲ್ಲಿ 2-3 ದಿನಗಳ ಪ್ರಕರಣಗಳು ಇರುತ್ತವೆ. ಆದರೂ ಕೂಡ ಅಮೆರಿಕದಲ್ಲಿ ಇಡೀ ವಾರದ ಸರಾಸರಿ ಪಡೆದುಕೊಂಡರೂ ಒಂದು ದಿನಕ್ಕೆ 7 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿರುವುದು ವೇದ್ಯವಾಗಿದೆ.
ಆಸ್ಪತ್ರೆಗೆ ದಾಖಲಾಗುವುದರಲ್ಲೂ ದಾಖಲೆ:
ಅಮೆರಿಕದಲ್ಲಿ ದಾಖಲೆ ಸಂಖ್ಯೆಯಲ್ಲಿ ಹೊಸ ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿರುವುದಷ್ಟೇ ಅಲ್ಲ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಏರುತ್ತಿರುವುದು ಆತಂಕದ ಸಂಗತಿ ಆಗಿದೆ. ಸದ್ಯ ನಿನ್ನೆ ಬಿಡುಗಡೆ ಆದ ಮಾಹಿತಿ ಪ್ರಕಾರ ಅಮೆರಿಕದಲ್ಲಿ 1,36,606 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಅಮೆರಿಕದ ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ವರ್ಷ ಜನವರಿಯಲ್ಲಿ ಅಲ್ಲಿ 1,32,051 ಮಂದಿ ಆಸ್ಪತ್ರೆಗಳಿಗೆ ಅಡ್ಮಿಟ್ ಆಗಿದ್ದರು.
ಇದನ್ನೂ ಓದಿ: Corona: ಇಂದಿನಿಂದ ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನಗಳ Home Quarantine ಕಡ್ಡಾಯ
ಆಸ್ಪತ್ರೆಗಳು ಹೈರಾಣ:
ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಅಮೆರಿಕದಂಥ ಅಮೆರಿಕವೇ ಈಗ ಕೋವಿಡ್ ಪ್ರಕರಣಗಳಿಂದ ನಲುಗಿ ಹೋಗಿದೆ. ಓಮೈಕ್ರಾನ್ ಸೋಂಕಿನ ತೀವ್ರತೆ ಡೆಲ್ಟಾದಷ್ಟು ಅಪಾಯಕಾರಿ ಆಗಿಲ್ಲವಾದರೂ ಸೋಂಕಿನ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವುದು ಅಮೆರಿಕದ ವೈದ್ಯಕೀಯ ವ್ಯವಸ್ಥೆಯನ್ನೇ ಹೈರಾಣಗೊಳಿಸಿದೆ. ದಾಖಲಾಗುತ್ತಿರುವ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕಲ್ಪಿಸಲಾಗದೆ ಅಮೆರಿಕದ ಆಸ್ಪತ್ರೆಗೆಳು ಪರದಾಡುತ್ತಿವೆ. ಅಷ್ಟು ದೊಡ್ಡ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಪ್ರಮಾಣದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಅಮೆರಿಕದಲ್ಲಿ ಇಲ್ಲ ಎಂಬ ವಾಸ್ತವಾಂಶ ಈಗ ಒರೆಗೆ ಬಂದಿದೆ.
ಶಾಲೆಗಳಿಗೆ ಬಿಸಿ:
ಅಮೆರಿಕದ ಶಾಲೆಗಳಿಗೂ ಈಗ ಕೋವಿಡ್ ಬಿಸಿ ಜೋರಾಗಿ ಮುಟ್ಟಿದೆ. ಶಾಲೆಯ ಸಿಬ್ಬಂದಿ, ಶಿಕ್ಷಕರು ಮತ್ತು ಬಸ್ ಡ್ರೈವರ್ಗಳ ಕೊರತೆ ಕಾಡುತ್ತಿದೆ. ಮಕ್ಕಳು ಶಾಲೆ ಹೋದರೂ ತರಗತಿಗಳು ನಡೆಯದ ನಿದರ್ಶನಗಳು ಬಹಳ ಇವೆ. ಚಿಕಾಗೋದಂಥ ರಾಜ್ಯಗಳು ಈ ಪರಿಸ್ಥಿತಿಯನ್ನ ಹೇಗೆ ನಿಭಾಯಿಸುವುದು ಎಂದು ಗೊತ್ತಾಗದೇ ಕಳೆದ ನಾಲ್ಕೈದು ದಿನಗಳಿಂದ ಶಾಲೆಗಳನ್ನೇ ಬಂದ್ ಮಾಡಿಸಿದೆ.
ಇದನ್ನೂ ಓದಿ: COVID-19: ಜನವರಿ 13ಕ್ಕೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ
ಸಬ್ವೇ ಸ್ಥಗಿತ:
ನ್ಯೂಯಾರ್ಕ್ ನಗರದಲ್ಲಿ ಮೂರು ಮೆಟ್ರೋ ರೈಲು ಮಾರ್ಗಗಳನ್ನ (Subway Lines) ಸ್ಥಗಿತಗೊಳಿಸುವ ಸ್ಥಿತಿ ಬಂದಿದೆ. ಬಹುತೇಕ ಮೆಟ್ರೋ ಕಾರ್ಮಿಕರು ಕೋವಿಡ್ ಸೋಂಕಿಗೆ ಒಳಗಾಗಿರುವುದರಿಂದ ಈ ನಿರ್ಧಾರ ಮಾಡಲಾಗಿದೆ.
ಸಾವಿನ ಸಂಖ್ಯೆ:
ಈಗ ವಿಶ್ವದ ದೊಡ್ಡಣ್ಣನ ನಾಡಿನಲ್ಲಿ ಕೋವಿಡ್ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈಗ ದಿನಕ್ಕೆ ಸರಾಸರಿಯಾಗಿ ಸಾವನ್ನಪ್ಪುತ್ತಿರುವವ ಸಂಖ್ಯೆ 1,700ಕ್ಕೆ ಏರಿದೆ. ಆದರೆ ಅದೃಷ್ಟಕ್ಕೆ ಓಮೈಕ್ರಾನ್ ಸೋಂಕಿನ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಪ್ರಮಾಣದಷ್ಟು ಸಾವಿನ ಸಂಖ್ಯೆ ಏರುತ್ತಿಲ್ಲ. ಇದೊಂದೇ ಆಶಾಭಾವನೆ ಅಮೆರಿಕ ಹಾಗೂ ವಿಶ್ವ ರಾಷ್ಟ್ರಗಳಿಗೆ ಇರುವುದು.
ಮಾಹಿತಿ: ರಾಯ್ಟರ್ಸ್ ಮತ್ತಿತರ ನ್ಯೂಸ್ ಏಜನ್ಸಿಗಳು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ