Covid 19: ಬೆಂಗಳೂರಲ್ಲಿ ಹಬ್ಬದಂದೇ ಅತಿ ಹೆಚ್ಚು ಕೋವಿಡ್ ಸಾವು; ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಮುಂದೆ ಸರತಿ ಸಾಲು!

ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಎದುರು ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಪರಿಶೀಲಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಚಿತಾಗಾರದ ಎದರು ಅಂಬ್ಯುಲೆನ್ಸ್​ ಸಾಲು

ಚಿತಾಗಾರದ ಎದರು ಅಂಬ್ಯುಲೆನ್ಸ್​ ಸಾಲು

 • Share this:
  ಬೆಂಗಳೂರು (ಏ.14): ಕೊರೋನಾ ಭೀತಿಯ ಮಧ್ಯೆಯೂ ನಗರದ ಜನತೆ ನಿನ್ನೆ ಯುಗಾದಿ ಹಬ್ಬದ ಸಂಭ್ರಮಕ್ಕೆ ತೆರೆದುಕೊಂಡಿದ್ದರು. ಇದನ್ನು ಸಹಿಸದ ರಕ್ಕಸ ಕೊರೋನಾ ಬೆಂಗಳೂರಿಗರ ಹಬ್ಬದ ಸಂಭ್ರಮವನ್ನು ಸೂತಕವಾಗಿಸಿದೆ. ನಗರದಲ್ಲಿ ಈ ವರ್ಷದಲ್ಲೇ ಅತಿ ಹೆಚ್ಚು ಕೋವಿಡ್ ಸಾವು ನಿನ್ನೆ ದಾಖಲಾಗಿದೆ. 2021ರಲ್ಲಿ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಸಾವಿನ ಸಂಖ್ಯೆ 50 ಗಡಿ ದಾಟಿದ್ದು, ಒಂದೇ ದಿನ 55 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ಚಿತಾಗಾರಗಳ ಮುಂದೆ ಸೋಂಕಿತರ ಅಂತ್ಯಕ್ರಿಯೆಗೆ ಸರತಿ ಸಾಲಲ್ಲಿ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.  ನಗರದ ಪ್ರಮುಖ ಚಿತಾಗಾರಗಳ ಎದುರು ಸೋಂಕಿತರ ಶವಗಳನ್ನು ಹೊತ್ತ ಆಂಬ್ಯುಲೆನ್ಸ್​ಗಳು ಸರತಿ ಸಾಲಿನಲ್ಲಿ ನಿಂತಿರುವ ಮನಕಲಕುವ ದೃಶ್ಯ ಕಂಡು ಬಂದಿದೆ. ಯಲಹಂಕದ ಮೇಡಿ ಅಗ್ರಹಾರ, ಸುಮ್ಮನಹಳ್ಳಿ ಚಿತಾಗಾರದ ಎದುರು ಸರತಿಯಾಗಿ ಆಂಬ್ಯುಲೆನ್ಸ್ ವಾಹನಗಳು ನಿಂತಿವೆ. ಕೋವಿಡ್ ನಿಯಮಾವಳಿಯಂತೆ ಸೋಂಕಿತರ ಶವಗಳನ್ನು ಅಂತ್ಯಕ್ರಿಯೆ ಮಾಡಬೇಕಾದ ಕಾರಣ ಚಿತಾಗಾರಗಳಲ್ಲಿ ಮೃತರ ಕುಟುಂಬಸ್ಥರು ಅಂತ್ಯಕ್ರಿಯೆಗಾಗಿ ಗಂಟೆಗಟ್ಟಲೇ ಕಾಯುವಂತಾಗಿದೆ.

  ಚಿತಾಗಾರಗಳ ಎದುರು ಮೃತರ ಕುಟುಂಬಸ್ಥರ ಸಂಕಟ ಹೇಳತೀರದಾಗಿದೆ. ಸೋಂಕಿನಿಂದ ಮೃತಪಟ್ಟವರ ಶವದ ಬಳಿಯೇ ಇರುವಂತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು ಸೇರುವಂತಿಲ್ಲ. ಶವದ ಪಕ್ಕದಲ್ಲಿ ಕೂತ ಅತ್ತು ನೋವು ಹೊರ ಹಾಕವಂತೆಯೂ ಇಲ್ಲ. ಅಂತ್ಯಕ್ರಿಯೆಗಾಗಿ ದೂರದಲ್ಲೇ ಗಂಟೆಗಟ್ಟಲೇ ಕಾಯುವುದು ಕುಟುಂಬಸ್ಥರನ್ನು ಮಾನಸಿಕವಾಗಿ ಜರ್ಜರಿತಗೊಳಿಸುತ್ತಿದೆ.

  ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಎದುರು ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಪರಿಶೀಲಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನಾ ಎರಡನೇ ಅಲೆ ತನ್ನ ಭೀಕರತೆಯನ್ನು ತೋರಿಸುತ್ತಿದ್ದು ಜನ ಇನ್ನಾದರೂ ಎಚ್ಚೆತ್ತುಕೊಂಡು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕಾಗಿದೆ. ಹಬ್ಬದ ನೆಪವೊಡ್ಡಿ ಬೇಕಾಬಿಟ್ಟಿ ನಡೆದುಕೊಂಡರೆ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.

  ಇದನ್ನು ಓದಿ: ಕುಂಭಮೇಳದಿಂದ 1,086 ಕೋವಿಡ್ ಕೇಸ್​​ ದಾಖಲು; ತಬ್ಲಿಘಿ ಪ್ರಕರಣಕ್ಕೆ ಹೋಲಿಕೆ ಬೇಡ ಎಂದ ಉತ್ತರಾಖಂಡ್ ಸಿಎಂ!

  ರಾಜ್ಯದಲ್ಲಿ ನಿನ್ನೆ ಒಂದೇ ದಿನ 8,778 ಮಂದಿಗೆ ಸೋಂಕು ತಗುಲಿದೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 10,83,647ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 67 ಮಂದಿ ಕೊರೋನಾ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಈವರೆಗೆ ರಾಜ್ಯದಲ್ಲಿ ವೈರಸ್​ನಿಂದ 13,008 ಮಂದಿ ಅಸುನೀಗಿದ್ದಾರೆ.

  ಬೆಂಗಳೂರಿನಲ್ಲಿ ನಿನ್ನೆ 5,500 ಮಂದಿಯ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಸೋಂಕಿನಿಂದ 55 ಮಂದಿ ಮೃತಪಟ್ಟಿದ್ದಾರೆ. ಈ ವರ್ಷದಲ್ಲಿ ಮೊದಲ ಬಾರಿಗೆ ಯುಗಾದಿ ಹಬ್ಬದ ದಿನವಾದ ಇಂದೇ ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಸಂಖ್ಯೆ 50ರ ಗಡಿ ದಾಟಿರುವುದು ಆತಂಕವನ್ನು ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಒಟ್ಟು ಕೊರೋನಾ ಕೇಸ್ಗಳ ಸಂಖ್ಯೆ 4,93,868ಕ್ಕೆ ಏರಿಯಾಗಿದ್ದರೆ, ಸಾವಿನ ಸಂಖ್ಯೆ 4,910ನ್ನು ತಲುಪಿದೆ. ಬೆಂಗಳೂರಲ್ಲಿ ನಿನ್ನೆ 4,415 ಮಂದಿ ಗುಣಮುಖರಾಗಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆ 57,575 ಇದೆ.

  (ವರದಿ: ಕಾವ್ಯಾ. ವಿ)
  Published by:Seema R
  First published: