ರಾಮನಗರ: ಈ ರೈತರು ಬೆಳೆಯುವ ತುಳಸಿ ರಾಜ್ಯ ಹಾಗೂ ಹೊರರಾಜ್ಯಗಳಿಗೂ ರಫ್ತಾಗುತ್ತದೆ. ಪ್ರಮುಖವಾಗಿ ದೇಶದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಸನ್ನಿಧಿಗೂ ಇದೇ ತುಳಸಿಯನ್ನ ಅಲಂಕಾರಕ್ಕೆ ಬಳಸಲಾಗುತ್ತದೆ. ಧರ್ಮಸ್ಥಳ, ಕುಕ್ಕೆಸುಬ್ರಮಣ್ಯಸ್ವಾಮಿ ದೇವಸ್ಥಾನ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ಇಲ್ಲಿಂದಲೇ ತುಳಸಿ ರಫ್ತಾಗುತ್ತದೆ. ಆದರೆ ಕೊರೋನಾದಿಂದಾಗಿ ಈಗ ಬೆಳೆದಿರುವ ಬೆಳೆಯನ್ನೇ ಕಟಾವ್ ಮಾಡಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ. ಜೊತೆಗೆ ತುಳಸಿ ಬೆಳೆಯುವುದರಲ್ಲಿ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದ್ದಾರೆ ಈ ಗ್ರಾಮದ ರೈತರು.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಗ್ರಾಮ ತುಳಸಿ ಬೆಳೆಯುವುದರಲ್ಲಿ ರಾಜ್ಯದಲ್ಲೇ ನಂ. 1 ಸ್ಥಾನ ಎಂದು ಪ್ರಸಿದ್ಧಿ ಪಡೆದಿದೆ. ಈ ಗ್ರಾಮದ ಜೊತೆಗೆ ಅಕ್ಕಪಕ್ಕದ ಗ್ರಾಮಗಳಾದ ಕರ್ಲಹಳ್ಳಿ, ಹಳೇಹಳ್ಳಿ, ಬಾಣಂತಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ತುಳಸಿ ಬೆಳೆಯುತ್ತಾರೆ. ಪ್ರಮುಖವಾಗಿ ರಾಜ್ಯ ಹಾಗೂ ಹೊರರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ತಿರುಪತಿ ತಿಮ್ಮಪ್ಪನ ಸನ್ನಿಧಿ ಹಾಗೂ ಕುಕ್ಕೆಸುಬ್ರಮಣ್ಯಸ್ವಾಮಿ ದೇವಸ್ಥಾನ, ಧರ್ಮಸ್ಥಳ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೂ ಸಹ ಇಲ್ಲಿನ ತುಳಸಿ ರಫ್ತು ಮಾಡ್ತಾರೆ. ಆದರೆ ಕಳೆದ ಒಂದು ತಿಂಗಳಿನಿಂದ ಕೊರೋನಾದಿಂದಾಗಿ ಇಲ್ಲಿನ ತುಳಸಿ ಬೆಳೆ ಕಟಾವ್ ಆಗದೇ ಹೊಲಗಳಲ್ಲೇ ಒಣಗುತ್ತಿದೆ. ದಿನನಿತ್ಯ ಬೆಂಗಳೂರಿನ ಕೆ.ಆರ್. ಮಾರ್ಕೆಟ್ಗೆ ನೂರಾರು ಕೆ.ಜಿ.ಗಳಷ್ಟು ತುಳಸಿಯನ್ನ ಮಾರಾಟಕ್ಕಾಗಿ ಕೊಂಡ್ಯೊಯುತ್ತಿದ್ದ ರೈತರು ಈಗ ಕೆಲಸವಿಲ್ಲದೆ ಬರಿಗೈಯಲ್ಲಿ ಊರಲ್ಲಿನ ಅಂಗಡಿಗಳ ಮುಂದೆ ಕುಳಿತ್ತಿದ್ದಾರೆಂದು ಅಂಬಾಡಹಳ್ಳಿ ಗ್ರಾಮದ ಮಾದೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಗರ ಪ್ರದೇಶಕ್ಕೆ ಮಾದರಿಯಾದ ಹಳ್ಳಿಯ ಸ್ವಯಂ ನಿರ್ಬಂಧನೆ; ಬೆಳಗಾವಿಯ ಈ ಗ್ರಾಮದಲ್ಲಿ ಜನತಾ ಕರ್ಫ್ಯೂ
ಇನ್ನು, ಅಂಬಾಡಹಳ್ಳಿ ಗ್ರಾಮದಲ್ಲಿ 600 ಕುಟುಂಬಗಳಿದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ವಾಸಮಾಡ್ತಿದ್ದಾರೆ. ಈ ಗ್ರಾಮದಲ್ಲಿ ಎಲ್ಲರೂ ಕೂಡ ತುಳಸಿ ಬೆಳೆಯನ್ನೇ ನಂಬಿಕೊಂಡು ಜೀವನ ಮಾಡ್ತಿದ್ದಾರೆ. ಆದರೆ ಈಗ ಕೊರೋನಾದಿಂದಾಗಿ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ನಾವು ಬೆಳೆದ ತುಳಸಿಯನ್ನ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತುಳಸಿ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಎಂದು ತುಳಸಿ ಬೆಳೆಗಾರರಾದ ಟೈಲರ್ ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ದಿನಕ್ಕೆ ತುಳಸಿ ಮಾರಾಟದಿಂದ ಇದೊಂದೇ ಗ್ರಾಮಕ್ಕೆ 1.50 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಕಳೆದೊಂದು ತಿಂಗಳಿನಿಂದ ಒಂದು ರೂಪಾಯಿ ಸಂಪಾದನೆಯಿಲ್ಲ. ಅಂಬಾಡಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳೆಲ್ಲಾ ಸೇರಿ ಸರಿಸುಮಾರು 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ತುಳಸಿಯನ್ನ ಬೆಳೆಯಲಾಗುತ್ತದೆ. ಆದರೆ ಕೊರೋನಾ ಬಿಕ್ಕಟ್ಟು ಎದುರಾದಾಗಿನಿಂದ ಬೆಳೆದ ಬೆಳೆಯೆಲ್ಲಾ ಮಣ್ಣುಪಾಲಾಗಿದೆ ಎಂದು ನ್ಯೂಸ್18 ಜೊತೆಗೆ ತುಳಸಿ ಬೆಳೆಗಾರರು ಅಳಲನ್ನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ರಾಜ್ಯದಿಂದ ಹೊರರಾಜ್ಯಗಳಿಗೂ ತುಳಸಿಯನ್ನ ರಫ್ತು ಮಾಡುತ್ತಿದ್ದ ಈ ರೈತರು ಕಳೆದೊಂದು ತಿಂಗಳಿನಿಂದ ವ್ಯಾಪಾರ ವಹಿವಾಟಿಲ್ಲದೆ ಕಂಗಾಲಾಗಿದ್ದಾರೆ. ನ್ಯೂಸ್18 ಜೊತೆಗೆ ಮಾತನಾಡಿರುವ ತುಳಸಿ ಬೆಳೆಗಾರರು, ರಾಜ್ಯ ಸರ್ಕಾರ ಕೂಡಲೇ ನಮ್ಮ ಕಡೆಗೆ ಗಮನಹರಿಸಿ ನಾವು ಬೆಳೆದಿರುವ ಬೆಳೆಗೆ ಸೂಕ್ತ ಪರಿಹಾರ ಕೊಡಬೇಕೆಂದು ಮನವಿ ಮಾಡಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ