ನವದೆಹಲಿ: ಇಡೀ ಜಗತ್ತು ಕೊರೋನಾ ಕಷ್ಟದಲ್ಲಿ ಸಿಲುಕಿದೆ. ಈ ದುರ್ದಿನದಲ್ಲಿ ದುಡಿಯುವ ವರ್ಗಕ್ಕೆ ಒಂದಷ್ಟು ನೆರವು ನೀಡಬೇಕಿದೆ. ಆದರೆ ಇದೆಲ್ಲದರ ನಡುವೆ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಅಕ್ರಮ ಬಡ್ತಿ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ್ ಮಿತಾಷ್ ಮೇ 2ರಂದು ವರ್ಗಾವಣೆಯಾಗಿದ್ದಾರೆ. ವಿಶೇಷ ಎಂದರೆ ವರ್ಗಾವಣೆ ಆದ ಮೇಲೂ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಮೇ 2ರಂದೇ ವರ್ಗಾವಣೆ ಆಗಿರುವ ನಿಲಯ್ ಮಿತಾಷ್, ಮೇ 2ರಂದೇ ಬಡ್ತಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ನಿಯಮಗಳ ಉಲ್ಲಂಘನೆ ಆದಂತಾಗಿದೆ.
ಅಲ್ಲದೆ, ಈಗ ವರ್ಗಾವಣೆ ಆಗಿರುವ ಕುಸುಮಾ ಪಿ ನಿಂದರಗಿ, ಅಶೋಕ್ ಸಿ ಕುಂಬಾರ್, ಐ. ಶಂಬುಲಿಂಗಪ್ಪ ಮತ್ತು ಎಲ್. ದಿವಾಕರ್ ಅವರು ನಿಲಯ್ ಮಿತಾಷ್ ಅವರ ಆಪ್ತರು. ದಿವಾಕರ್, ನಿಲಯ್ ಮಿತಾಷ್ ಅವರಿಗೆ ಪಿಎ ಆಗಿದ್ದವರು. ಅದೇ ಕಾರಣಕ್ಕೆ ನಾಲ್ವರಿಗೂ ಗ್ರೂಪ್ ಬಿ ಹುದ್ದೆಗಳಿಗೆ ಬಡ್ತಿ ನೀಡಿದ್ದಾರೆ. ಸಹಾಯಕ ಸಮನ್ವಯ ಅಧಿಕಾರಿ ಹುದ್ದೆಯಿಂದ ಉಪ ಸಮನ್ವಯ ಅಧಿಕಾರಿಯಾಗಿ ಬಡ್ತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಗ್ರೂಪ್ ಬಿ ಹುದ್ದೆಗಳಿಗೆ ಬಡ್ತಿ ನೀಡುವಾಗ ಡಿಪಿಐಆರ್ ಉಪ ಕಾರ್ಯದರ್ಶಿಯಿಂದ ಪರಿಶೀಲನೆ ನಡೆಯಬೇಕು ಎಂಬ ನಿಯಮ ಇದೆ. ಆದರೆ ಈ ನಿಯಮವನ್ನು ಕಾಟಚಾರಕ್ಕೆ ವಿಡಿಯೋ ಕಾನ್ಪೇರನ್ಸ್ ಮೂಲಕ ಪಾಲಿಸಲಾಗಿದೆ. ತರಾತುರಿಯಲ್ಲಿ ನಿಯಮಗಳನ್ನು ಮಾಡಿ ಬಡ್ತಿ ನೀಡಲಾಗಿದೆ. ಕರ್ನಾಟಕ ಭವನದಲ್ಲಿ ವರ್ಷದಿಂದ 50ಕ್ಕೂ ಹೆಚ್ಚು ಪ್ರಮೋಷನ್ ಫೈಲ್ ಗಳು ಕೊಳೆಯುತ್ತಿವೆ. ಅವೆಲ್ಲವನ್ನು ಬಿಟ್ಟು ತಮ್ಮ ನಾಲ್ವರು ಆಪ್ತರಿಗೆ ಮಾತ್ರ ಬಡ್ತಿ ನೀಡಿ ನೀಡಿರುವ ನಿಲಯ್ ಮಿತಾಶ್ ಕ್ರಮ ಪ್ರಶ್ನಾರ್ಹ ಮತ್ತು ಅನುಮಾನಾಸ್ಪದವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕರ್ನಾಟಕ ಭವನದ ಸಿಬ್ಬಂದಿಯೊಬ್ಬರು ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ‘ಸರ್ಕಾರದ ಮನವಿಗೆ ಸ್ಪಂದಿಸಿ ಬೆಂಗಳೂರಲ್ಲೇ ಉಳಿದ ಕಾರ್ಮಿಕರು ನಾಳೆಯಿಂದ ಕೆಲಸ ಮಾಡಲಿದ್ದಾರೆ‘ - ಆರ್. ಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ