HOME » NEWS » Coronavirus-latest-news » ALLEGATION ON MYSORE DC SHE WAS NOT SUPPLY OXYGEN TO CHAMARAJANAGAR COVID HOSPITAL LG

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವು; ಆಕ್ಸಿಜನ್ ಪೂರೈಕೆಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಕಾರ?

ಚಾಮರಾಜನಗರಕ್ಕೆ ಆಕ್ಸಿಜನ್ ಸರಬರಾಜು ಮಾಡದಂತೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಿರ್ಬಂಧ ಹೇರಿ,  ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು  ನಗರಸಭಾ ಸದಸ್ಯ ನಂಜುಂಡಸ್ವಾಮಿ ಆರೋಪ ಮಾಡಿದ್ದಾರೆ.

news18-kannada
Updated:May 3, 2021, 10:26 AM IST
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವು; ಆಕ್ಸಿಜನ್ ಪೂರೈಕೆಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಕಾರ?
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
  • Share this:
ಚಾಮರಾಜನಗರ(ಮೇ 03): ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.  ಇದಕ್ಕೆ ಆಮ್ಲಜನಕ ಕೊರತೆಯೇ ಕಾರಣ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದೆ. ಆಕ್ಸಿಜನ್​ ಪೂರೈಕೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರ ಜಿಲ್ಲೆಗಳಿಗೆ ಆಮ್ಲಜನಕ ಪೂರೈಸಲು ನಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಒಂದೆಡೆ ಕೊರೋನಾ ರೋಗಿಗಳ ಸಾವಿಗೆ ರೋಹಿಣಿ ಸಿಂಧೂರಿ ಕಾರಣವಾದ್ರಾ ಎಂಬ ಶಂಕೆ ಸಹ ವ್ಯಕ್ತವಾಗಿದೆ.

ಕೊರೋನಾ ರೋಗಿಗಳು ಆಮ್ಲಜನಕವಿಲ್ಲದೇ ಒಂದು ರಾತ್ರಿ ಕಳೆದಿದ್ದಾರೆ.  ಈವರೆಗೆ ಚಾಮರಾಜನಗರ ಜಿಲ್ಲೆಗೆ ಪ್ರತಿನಿತ್ಯ ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗುತ್ತಿತ್ತು.  ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಮೂಲಕ ಚಾಮರಾಜನಗರ ಜಿಲ್ಲೆಗೆ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ ತಡವಾಗಿ ಆಮ್ಲಜನಕ ಬಂದ ಕಾರಣ ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಚಾಮರಾಜನಗರ ಜಿಲ್ಲಾಸ್ಪತ್ರೆಗೆ 280 ಜಂಬೂ ಸಿಲಿಂಡರ್ ಆಮ್ಲಜನಕ ಅವಶ್ಯಕತೆ ಇದೆ. ಕಳೆದ ಶುಕ್ರವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಿಗೆ ಮೈಸೂರಿನಿಂದ ಆಮ್ಲಜನಕ ಪೂರೈಸುವ ಜವಾಬ್ದಾರಿಯನ್ನು ಮೈಸೂರು ಡಿಸಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದರು. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವು; ಆಕ್ಸಿಜನ್​ ಕೊರತೆಯಿಂದ ಮೃತಪಟ್ಟಿರುವ ಶಂಕೆ

ಮೃತರ ಕುಟುಂಬಸ್ಥರು ಆಘಾತಕಾರಿ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ತನ್ನ ಅಣ್ಣನನ್ನು ಕಳೆದುಕೊಂಡ ನಗರಸಭಾ ಸದಸ್ಯ ನಂಜುಂಡಸ್ವಾಮಿ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. "ಆಮ್ಲಜನಕ ನೀಡಿ ಎಂದರೂ ಕೊಡಲಿಲ್ಲ. ಆಕ್ಸಿಜನ್ ಕೊರತೆಯಿಂದ ನನ್ನ ಅಣ್ಣ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 23ಕ್ಕೂ ಹೆಚ್ಚು ಜನರು ಆಕ್ಸಿಜನ್​ ಕೊರತೆಯಿಂದ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಅಧಿಕಾರಿಗಳನ್ನ ಕೇಳಿದ್ರೆ ಆಕ್ಸಿಜನ್ ವ್ಯವಸ್ಥೆಯಾಗಿದೆ ಎಂದು ಹೇಳಿದ್ದಾರೆ. ನನ್ನ ಅಣ್ಣ ರಾತ್ರಿ 8.30 ರ ವೇಳೆಯಲ್ಲಿ ಆಕ್ಸಿಜನ್ ಸಿಗದೆ ಮೃತಪಟ್ಟಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ವ್ಯವಸ್ಥೆ ಮಾಡಬೇಕು. ನಾನೊಬ್ಬ ಜನ ಪ್ರತಿನಿಧಿಯಾಗಿ ನನ್ನ ಅಣ್ಣನನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿ ದಿನ ಆಕ್ಸಿಜನ್ ಕೊರತೆಯಾಗುತ್ತಿದ್ದರೂ ಸಹ ಚಾಮರಾಜನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.  ಪ್ರತಿದಿ‌ನ ಸುಳ್ಳು ಸಾವಿನ ಲೆಕ್ಕ ಕೊಡುತ್ತಿದ್ದಾರೆ. 10 ಮಂದಿ ಸತ್ತರೆ ಇವತ್ತು 5, ನಾಳೆ 5 ಎಂದು ತೋರಿಸುತ್ತಿದ್ದಾರೆ. ನಿನ್ನೆ ರಾತ್ರಿ 29 ಜನ ಸತ್ತಿದ್ದಾರೆ ಎಂಬ ಮಾಹಿತಿ ಇದೆ.  ಚಾಮರಾಜನಗರಕ್ಕೆ ಆಕ್ಸಿಜನ್ ಸರಬರಾಜು ಮಾಡದಂತೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಿರ್ಬಂಧ ಹೇರಿ,  ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು  ನಗರಸಭಾ ಸದಸ್ಯ ನಂಜುಂಡಸ್ವಾಮಿ ಆರೋಪ ಮಾಡಿದ್ದಾರೆ.
Youtube Video
ಕೊರೋನಾ ಸೋಂಕಿತರು ಮೃತಪಟ್ಟಿರುವ ವಿಷಯವನ್ನು ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಆಮ್ಲಜನಕ ಕೊರತೆಯಿಂದಾಗಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
Published by: Latha CG
First published: May 3, 2021, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories