Lockdown Extend: ಮತ್ತೆ ಒಂದು ವಾರಗಳ ಕಾಲ ಲಾಕ್​ಡೌನ್ ವಿಸ್ತರಣೆ ಮಾಡಿದ ತಮಿಳುನಾಡು ಸರ್ಕಾರ

ರಾಜ್ಯಗಳಲ್ಲಿ ಲಾಕ್​ಡೌನ್ ಸಡಿಲಿಕೆ ವಿಷಯವಾಗಿ ಶುಕ್ರವಾರ ಮಾತನಾಡಿದ್ದ ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಅವರು, ಕೊರೋನಾ ಎರಡನೇ ಅಲೆ ಇನ್ನು ಮುಗಿದಿಲ್ಲ. ಇಡೀ ದೇಶ ಕೊರೋನಾಮುಕ್ತವಾಗುವವರೆಗೂ ನಾವು ಸುರಕ್ಷಿತರಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆನ್ನೈ: ದೇಶದ್ಯಾಂತ ಕೊರೋನಾ ಸೋಂಕು ಎರಡನೆ ಅಲೆ ಆರ್ಭಟ ಜೋರಾಗಿ ಇದೀಗ ಸ್ವಲ್ಪಮಟ್ಟಿಗೆ ತಣ್ಣಗಾಗುತ್ತಿದೆ. ಹಲವು ರಾಜ್ಯಗಳಲ್ಲಿ ಸೋಂಕಿನ ಸಂಖ್ಯೆ ಮಿತಿಮೀರಿದ ಕಾರಣ ಆಯಾ ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕಾಗಿ ಲಾಕ್​ಡೌನ್​ ಘೋಷಣೆ ಮಾಡಿದ್ದವು. ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆ ಪ್ರಕ್ರಿಯೆ ಆರಂಭಿಸಿವೆ. ಆದರೆ, ತಮಿಳುನಾಡು ಸರ್ಕಾರ ಮಾತ್ರ ಮತ್ತೆ ಒಂದು ವಾರಗಳ ಕಾಲ ಲಾಕ್​ಡೌನ್ ಅವಧಿಯನ್ನು ವಿಸ್ತರಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.

    ಲಾಕ್​ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು, ಜುಲೈ 12ವರೆಗೂ ನಿರ್ಬಂಧಗಳು ಮುಂದುವರೆಯಲಿವೆ. ಅಂಗಡಿಗಳಲ್ಲಿ ವ್ಯಾಪಾರ ಹಾಗೂ ಇತರೆ ಚಟುವಟಿಕೆಗಳನ್ನು ರಾತ್ರಿ 8ರವರೆಗೂ ಮುಂದುವರೆಸಬಹುದಾಗಿದೆ. ಹೋಟೆಲ್​ಗಳು ಮತ್ತು ಚಹಾದ ಅಂಗಡಿಗಳಲ್ಲಿ ಶೇ. 50ರಷ್ಟು ಗ್ರಾಹಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಅಂತರಜಿಲ್ಲೆ ಮತ್ತು ಜಿಲ್ಲೆಯ ಒಳಗೆ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಒಟ್ಟು ಆಸನದ ಸಾಮರ್ಥ್ಯ ಶೇ. 50 ರಷ್ಟು ಜನರು ಪ್ರಯಾಣ ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಶುಕ್ರವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್​-19 ದೃಢಪಟ್ಟ 4230 ಹೊಸ ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿವೆ. ಇದೇ ಅವಧಿಯಲ್ಲಿ ಸೋಂಕಿನಿಂದ 97 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 36707 ಪ್ರಕರಣಗಳು ಸಕ್ರಿಯವಾಗಿವೆ. ಮೇ 21 ರಂದು 24 ಗಂಟೆಗಳಲ್ಲಿ 36184 ಪ್ರಕರಣಗಳು ದಾಖಲಾಗಿತ್ತು. ಮುಂದೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

    ರಾಜ್ಯಗಳಲ್ಲಿ ಲಾಕ್​ಡೌನ್ ಸಡಿಲಿಕೆ ವಿಷಯವಾಗಿ ಶುಕ್ರವಾರ ಮಾತನಾಡಿದ್ದ ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಅವರು, ಕೊರೋನಾ ಎರಡನೇ ಅಲೆ ಇನ್ನು ಮುಗಿದಿಲ್ಲ. ಇಡೀ ದೇಶ ಕೊರೋನಾಮುಕ್ತವಾಗುವವರೆಗೂ ನಾವು ಸುರಕ್ಷಿತರಲ್ಲ. ಕೋವಿಡ್ ನಿಯಂತ್ರಣ ಸಂಬಂಧ ಆಯಾ ರಾಜ್ಯಗಳು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸುವಂತೆ  ಎಚ್ಚರಿಕೆ ನೀಡಿದ್ದರು.

    ಹಲವು ರಾಜ್ಯಗಳು ಕೊರೋನಾ ಎರಡನೇ ಅಲೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹೇರಲಾಗಿದ್ದ ಲಾಕ್​ಡೌನ್​ ಅನ್ನು ಸಡಿಲಗೊಳಿಸಿ ಅನ್​ಲಾಕ್ ಪ್ರಕ್ರಿಯೆ ಆರಂಭಿಸುತ್ತಿರುವ ಸಮಯದಲ್ಲಿ ವಿಕೆ ಪಾಲ್ ಅವರು ಈ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ. ಮೊದಲನೇ ಅಲೆಯ ಸಂದರ್ಭದಲ್ಲಿ ಲಾಕ್​ಡೌನ್​ ಸಡಿಲಕೆ ಮಾಡಿದ ಬಳಿಕ ಎರಡನೆ ಅಲೆ ಮೊದಲನೆಯದಕ್ಕಿಂತ ಹೆಚ್ಚು ಮಾರಕವೆಂಬುದನ್ನು ಸಾಬೀತು ಮಾಡಿದೆ. ಮೊದಲನೆ ಅಲೆಯ ಸಂದರ್ಭದಲ್ಲಿ ಭಾರತ ದೇಶವ್ಯಾಪಿ ಕಟ್ಟುನಿಟ್ಟಾದ ಲಾಕ್‌ಡೌನ್‌ನಿಂದ ಹೊರಬಂದಾಗ ಹಲವು ಪಾಠಗಳನ್ನು ಕಲಿತಿದ್ದು, ಇದು ಆತ್ಮವಿಶ್ವಾಸಕ್ಕೆ ಕಾರಣವಾಯಿತು ಮತ್ತು ಇದೀಗ ಎರಡನೇ ಅಲೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಎರಡನೆ ಅಲೆ ಸಂಪೂರ್ಣ ಹತೋಟಿಗೆ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ನಿರ್ಬಂಧ ಹಾಗೂ ಸಡಿಲಿಕೆ ಕ್ರಮ ತೆಗೆದುಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

    ಇದನ್ನು ಓದಿ: ಕೊರೋನಾ 2ನೇ ಅಲೆ ಇನ್ನೂ ಮುಗಿದಿಲ್ಲ, ಈಗಲೇ ಸಂಪೂರ್ಣ ಸಡಿಲಿಕೆ ಬೇಡ ಎಂದ ನೀತಿ ಆಯೋಗದ ಸದಸ್ಯ ವಿಕೆ ಪಾಲ್

    ಕರ್ನಾಟಕದಲ್ಲೂ ಜೂನ್ 24ರವರೆಗೂ ಲಾಕ್​ಡೌನ್ ವಿಧಿಸಲಾಗಿತ್ತು. ಆ ಬಳಿಕ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಲಾಕ್​ಡೌನ್ ಸಡಿಲಿಕೆ ಮಾಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2984 ಸಾವಿರ ಕೊರೋನಾ ಕೇಸ್ ವರದಿಯಾಗಿವೆ.  ಕೊರೋನಾಗೆ 88 ಜನ ಬಲಿಯಾಗಿದ್ದಾರೆ. 14337 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 593 ಕೇಸ್ ಪತ್ತೆಯಾಗಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಪಾಸಿಟಿವಿಟ್ ದರ ಶೇ 1.92 ರಷ್ಟಿದೆ. ಸಾವಿನ ಪ್ರಮಾಣ ಶೇ. 2.94 ರಷ್ಟಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: