ಓರಿಸ್ಸಾ ಬಳಿಕ ಪಂಜಾಬ್​ನಲ್ಲೂ ಮತ್ತೆ 21 ದಿನ ಲಾಕ್​ಡೌನ್ ವಿಸ್ತರಣೆ; ಕಳೆದ 24 ಗಂಟೆಯಲ್ಲಿ 896 ಪ್ರಕರಣ ದಾಖಲು

ದೇಶಾದ್ಯಂತ ಕೊರೋನಾ ಪೀಡಿತರ ಸಂಖ್ಯೆ 6,761ಕ್ಕೆ ಏರಿಕೆಯಾಗಿದ್ದು, ಕೊರೋನಾದಿಂದ ಸತ್ತವರ ಸಂಖ್ಯೆ 206ಕ್ಕೆ ಹೆಚ್ಚಳವಾಗಿದೆ. ಈವರೆಗೂ  ಕೊರೋನಾದಿಂದ 515 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 896 ಪ್ರಕರಣಗಳು ಪತ್ತೆಯಾಗಿದ್ದು, 37 ಮಂದಿ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಮಾರಕ ಕೊರೋನಾ ವೈರಸ್ ಹೆಮ್ಮಾರಿ ದೇಶದಲ್ಲಿ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಲೇ ಇದೆ. ದೇಶಾದ್ಯಂತ ಲಾಕ್​ಡೌನ್​ ಹೇರಿದ ಬಳಿಕ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಓರಿಸ್ಸಾ ಸರ್ಕಾರ ಲಾಕ್​ಡೌನ್​ಅನ್ನು ಈ ತಿಂಗಳಾಂತ್ಯಕ್ಕೆ ವಿಸ್ತರಿಸಿತ್ತು. ಇದೀಗ ಓರಿಸ್ಸಾ ನಡೆ ಅನುಸರಿಸಿರುವ ಪಂಜಾಬ್ ರಾಜ್ಯ ಸರ್ಕಾರ ಕೂಡ ಇಂದಿನಿಂದ 21 ದಿನಗಳ ಕಾಲ  ಲಾಕ್​ಡೌನ್​ ವಿಸ್ತರಿಸಿದೆ.

  ಲಾಕ್ ಡೌನ್ ಮುಂದುವರಿಸುವಂತೆ ಇಂದು ನಡೆದ ಪಂಜಾಬ್ ಸಚಿವ ಸಂಪುಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇಂದಿನಿಂದ ಮತ್ತೆ 21 ದಿನಗಳ ಕಾಲ ಪಂಜಾಬ್​ನಲ್ಲಿ ಲಾಕ್​ಡೌನ್​ ಮುಂದುವರೆಯಲಿದೆ. ಪಂಜಾಬ್​ನಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶಕ್ಕೂ ಕಾಯದೆ ಲಾಕ್​ಡೌನ್ ಮುಂದುವರೆಸಿದೆ.

  ಮಾರಕ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಒಟ್ಟು 21 ದಿನಗಳ ಕಾಲ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಏತನ್ಮಧ್ಯೆ ಮಾರಕ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಮುಕ್ತಾಯಗೊಳ್ಳಲಿರುವ ಲಾಕ್​ಡೌನ್​ಅನ್ನು ವಿಸ್ತರಿಸುವ ಸಾಧ್ಯತೆ ಇದೆ. ಬಹುಶಃ ಭಾನುವಾರ ಸಂಜೆ ಪ್ರಧಾನಿ ಮೋದಿ ಅವರು ಲಾಕ್​ಡೌನ್​ ವಿಸ್ತರಣೆ ಘೋಷಣೆ ಮಾಡಲಿದ್ದಾರೆ.

  ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ದಿನದಿಂದ ದಿನಕ್ಕೆ ಮಾರಕ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್​ ವಿಸ್ತರಣೆ ಮಾಡುವಂತೆ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

  ಏತನ್ಮಧ್ಯೆ, ಲಾಕ್​ಡೌನ್​ ಮಾಡಲಾಗಿರುವ ಈ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥರು ಹಾಗೂ ಬೀದಿಯಲ್ಲಿ ತಿರುಗುತ್ತಿರುವ ವ್ಯಕ್ತಿಗಳ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಿರಿ,  ರಾಜ್ಯಗಳಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೀರಿ ಎಂಬ ಮಾಹಿತಿಯನ್ನು  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇಂದ್ರ ಸರ್ಕಾರಕ್ಕೆ ಕೇಳಿದೆ.

  ಇದನ್ನು ಓದಿ: ಕೊರೋನಾ ಬಿಕ್ಕಟ್ಟು; ಲಾಕ್​ಡೌನ್​ ವಿಸ್ತರಣೆಗೆ ಪ್ರಧಾನಿ ಮೋದಿ ನಿರ್ಧಾರ; ಭಾನುವಾರ ಸಂಜೆ ಘೋಷಣೆ ಸಾಧ್ಯತೆ

  ಈವರೆಗೂ ದೇಶಾದ್ಯಂತ ಕೊರೋನಾ ಪೀಡಿತರ ಸಂಖ್ಯೆ 6,761ಕ್ಕೆ ಏರಿಕೆಯಾಗಿದ್ದು, ಕೊರೋನಾದಿಂದ ಸತ್ತವರ ಸಂಖ್ಯೆ 206ಕ್ಕೆ ಹೆಚ್ಚಳವಾಗಿದೆ. ಈವರೆಗೂ  ಕೊರೋನಾದಿಂದ 515 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 896 ಪ್ರಕರಣಗಳು ಪತ್ತೆಯಾಗಿದ್ದು, 37 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
  First published: