White Fungus: ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ವೈಟ್ ಫಂಗಸ್ ಪತ್ತೆ; ಅತ್ಯಂತ ಅಪಾಯಕಾರಿಯಾದ ಇದರ ಲಕ್ಷಣಗಳೇನು?

ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್​ ಫಂಗಸ್​ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್​ ಫಂಗಸ್​ ಶ್ವಾಸಕೋಶ ಸೇರಿದಂತೆ ಹೊಟ್ಟೆ, ಕಿಡ್ನಿ, ಜನನಾಂಗಗಳು, ಬಾಯಿ, ಚರ್ಮ ಹಾಗೂ ಉಗುರಿಗೆ ಹಾನಿ ಮಾಡುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ: ರಕ್ತಬಿಜಾಸುರನ ಮಾದರಿ ದಿನಕ್ಕೊಂದು ಕಾಯಿಲೆಯಂತೆ ಭಾರತವನ್ನು ಭಯಾನಕ ರೋಗಗಳು ಅವರಿಕೊಳ್ಳುತ್ತಲೇ ಇವೆ. ಬ್ಲ್ಯಾಕ್​​ ಫಂಗಸ್​ ಭೀತಿಯಲ್ಲಿರುವಾಗಲೇ ಇದಕ್ಕಿಂತ ಭಯಾನಕವಾದ ವೈಟ್​ ಫಂಗಸ್​​ ಕಾಯಿಲೆ ಕಾಣಿಸಿಕೊಂಡಿದೆ. ಬಿಹಾರ ರಾಜಧಾನಿ ಪಟ್ನಾದ ನಾಲ್ವರಲ್ಲಿ ವೈಟ್​​ ಫಂಗಸ್​ (ಶ್ವೇತ ಬಣ್ಣದ ಶಿಲೀಂದ್ರಿ) ಕಾಣಿಸಿಕೊಂಡಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್​ ಫಂಗಸ್​ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್​ ಫಂಗಸ್​ ಶ್ವಾಸಕೋಶ ಸೇರಿದಂತೆ ಹೊಟ್ಟೆ, ಕಿಡ್ನಿ, ಜನನಾಂಗಗಳು, ಬಾಯಿ, ಚರ್ಮ ಹಾಗೂ ಉಗುರಿಗೆ ಹಾನಿ ಮಾಡುತ್ತದೆ.

ಕೊರೋನಾದಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳುತ್ತಿರುವಂತೆಯೇ ವೈಟ್​ ಫಂಗಸ್​ ಸಹ ಸೋಂಕಿನಿಂದ ಗುಣಮುಖರಾದವರಲ್ಲಿ ಪತ್ತೆಯಾಗಿದೆ. ಈ ವೈಟ್​ ಫಂಗಸ್​ ಪರಿಸರದಲ್ಲಿ ಬೆಳೆಯುತ್ತದೆ. ಕೆಲವೊಂದು ಮಣ್ಣು, ಎಲೆಗಳ ಮೇಲೆ, ಒಣಗಿದ ಮರದಲ್ಲಿ ಈ ಫಂಗಸ್​ ಬೆಳೆಯುತ್ತದೆ ಎನ್ನಲಾಗುತ್ತಿದೆ. ವೈಟ್​​ ಫಂಗಸ್​ಗೆ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಗಳಿವೆಯಂತೆ. ಹಾಗಾದರೆ ವೈಟ್​​ ಫಂಗಸ್​ನ ಲಕ್ಷಣಗಳೇನು ಎಂದು ನೋಡುವುದಾದರೆ.

ವೈಟ್​ ಫಂಗಸ್​ನ ಲಕ್ಷಣಗಳೇನು?

  • ತಲೆನೋವು

  • ಮುಖದಲ್ಲಿ ನೋವು

  • ಮೂಗು ಕಟ್ಟುವಿಕೆ

  • ದೃಷ್ಟಿ ಮಂಜಾಗುವುದು, ಕಾಣದಂತೆ ಆಗುವುದು

  • ಕಣ್ಣಿನಲ್ಲಿ ನೋವು, ಕಣ್ಣು ಕಪ್ಪು ಬಣ್ಣಕ್ಕೆ ತಿರುಗುವುದು

  • ಕೆನ್ನೆಗಳು ಊದಿಕೊಳ್ಳುವುದು

  • ರಕ್ತ ವಾಂತಿ

  • ಮಾನಸಿಕ ಆರೋಗ್ಯದಲ್ಲಿ ಏರುಪೇರು


ಮೇಲಿನ ಯಾವುದೇ ಲಕ್ಷಣಗಳು ಕಂಡು ಬಂದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ನಿರ್ಲಕ್ಷ್ಯ ಮಾಡಿದರೆ ಫಂಗಸ್​​ ಅಪಾಯಕಾರಿ ಮಟ್ಟಕ್ಕೆ ಹೋಗಬಹುದು.

ವೈಟ್​ ಫಂಗಸ್​ಗೆ ಚಿಕಿತ್ಸೆ ಹೇಗೆ?

ವೈಟ್​ ಫಂಗಸ್​ಗೆ ಇರುವ ಔಷಧ ಆ್ಯಂಟಿ ಫಂಗಲ್​ ಇಂಜೆಕ್ಷನ್​​ ಪ್ರತಿ ಡೋಸಿನ ಬೆಲೆ 3,500 ರೂಪಾಯಿ. ಈ ಇಂಜೆಕ್ಷನನ್ನು ಸತತ 8 ವಾರಗಳ ಕಾಲ ಪಡೆದರೆ ಫಂಗಸ್​ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸದ್ಯ ದೇಶದಲ್ಲಿ ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಈ ವೈಟ್​ ಫಂಗಸ್​ ಕಾಣಿಸಿಕೊಂಡಿದೆ. ವಿವಿಧ ಕಾಯಿಲೆಗಳು ದಾಂಗುಡಿಯಿಡುತ್ತಿದ್ದು, ಜನ ಆರೋಗ್ಯದ ಬಗ್ಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ನಿಗಾ ವಹಿಸಬೇಕಿದೆ.

ಇನ್ನು ವೈಟ್​ ಫಂಗಸ್​​ಗಿಂತ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ಬ್ಲ್ಯಾಕ್​ ಫಂಗಸ್​ ಬಗ್ಗೆಯೂ ಜನ ಎಚ್ಚರವಹಿಸಬೇಕಿದೆ.

ಯಾರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳಬಹುದು?

  • ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು

  • ಅತಿ ಹೆಚ್ಚು ಸ್ಟಿರಾಯಿಡ್ಸ್​ ಬಳಸುವವರರು

  • ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿರುವವರು

  • ದೀರ್ಘ ಕಾಲದ ಆರೋಗ್ಯ ಸಮಸ್ಯೆ ಇರುವವರು

  • ಅತಿಯಾದ ಶೀತ, ಥಂಡಿ ಸಮಸ್ಯೆ ಎದುರಿಸುತ್ತಿರುವವರು

  • ಉಸಿರಾಟದ ಸಮಸ್ಯೆಯಿಂದ ಮೆಡಿಕಲ್​ ಆಕ್ಸಿಜನ್​ ಸಹಾಯ ಪಡೆದವರು

  • ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಪಡೆದವರು


ಮೇಲಿನ ಲಕ್ಷಣಗಳಿರುವವರಿಗೆ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಬ್ಲ್ಯಾಕ್​ ಫಂಗಸ್​ ಬಂದಿದೆಯಾ ಎಂದು ಪರೀಕ್ಷಿಸುವುದು ಹೇಗೆ?

  • ಮೂಗಿನಲ್ಲಿ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು, ಮೂಗಿನಲ್ಲಿ ಕಿರಿಕಿರಿ

  • ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು

  • ದೃಷ್ಟಿ ಮಂಜಾಗುವುದು, ರೆಪ್ಪೆ ತೆರೆಯಲು/ಮುಚ್ಚಲು ಕಷ್ಟವಾಗುವುದು, ಕಣ್ಣು ಕಾಣದಿರುವುದು

  • ಮುಖ ಮರಗಟ್ಟುವಿಕೆ, ಜುಮ್​​ ಎನಿಸುವ ಅನುಭವ

  • ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು

  • ಮುಖದಲ್ಲಿ ಊತ, ಮುಖ ಕಪ್ಪುಗಟ್ಟುವಿಕೆ , ಮುಖದಲ್ಲಿ ನೋವು

  • ಹಲ್ಲು ಉದುರುವುದು, ಬಾಯಿಯಲ್ಲಿ ಕಪ್ಪು ಬಣ್ಣ, ಊತ ಕಾಣಿಸಿಕೊಳ್ಳುವುದು


ಮೇಲಿನ ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಹೈ ಶುಗರ್​ ಇರುವವರು, ಅನಾರೋಗ್ಯ ಪೀಡಿತರು ಈ ಲಕ್ಷಣಗಳ ಬಗ್ಗೆ ಗಮನ ಹರಿಸಬೇಕು. ಸ್ವಯಂ ನಿಗಾ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಮುಂದೆ ದೊಡ್ಡ ಅಪಾಯ ತಂದೊಡ್ಡಬಹುದು.



ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಾಗ ಏನು ಮಾಡಬೇಕು?

  • ಬ್ಲ್ಯಾಕ್​ ಫಂಗಸ್​​ ಲಕ್ಷಣಗಳು ಕಂಡು ಬಂದೊಡನೆ ENT ವೈದ್ಯರನ್ನು ಸಂಪರ್ಕಿಸಿ

  • ENT ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು

  • ರಕ್ತದಲ್ಲಿ ಮಧುಮೇಹ ಪ್ರಮಾಣವನ್ನು ಸದಾ ಪರೀಕ್ಷಿಸುತ್ತಿರಬೇಕು, ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಬೇಕು

  • ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಚಿಕಿತ್ಸೆ ಪಡೆಯಬೇಕು, ನಿರ್ಲಕ್ಷ್ಯ ಮಾಡಬಾರದು

  • ವೈದ್ಯರನ್ನು ಕೇಳದೆ ಸ್ಟಿರಾಯಿಡ್​​, ಆ್ಯಂಟಿ ವೈರಲ್​ ಔಷಧಗಳನ್ನು ತೆಗೆದುಕೊಳ್ಳಬಾರದು

  • ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬೇಕು.


ಅನಗತ್ಯವಾಗಿ ವೈದ್ಯರನ್ನು ಕೇಳದೆ ಔಷಧಗಳನ್ನು ತೆಗೆದುಕೊಳ್ಳುವುದು ಪ್ರಾಣಕ್ಕೆ ಕುತ್ತು ತರಬಹುದು. ಅತಿಯಾದ ಹೆದರಿಕೆಯಿಂದ ಅಗತ್ಯವಿಲ್ಲದಿದ್ದರೂ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬಾರದು. ಭಯಕ್ಕಿಂತ ಹೆಚ್ಚಾಗಿ ಎಚ್ಚರಿಕೆಯಿಂದ ಇದ್ದರೆ ಬ್ಲ್ಯಾಕ್​ ಫಂಗಸ್​ನಿಂದ ಬಚಾವ್​ ಆಗಬಹುದು.
Published by:Kavya V
First published: